ಶುಕ್ರವಾರ, ಏಪ್ರಿಲ್ 16, 2021
31 °C

'ಸಂವಿಧಾನ ಓದು' ಎಂಬುದು ಸಿದ್ಧಾಂತ ತಿಳಿಸುವ ವಿಧಾನ ಆಗಬಾರದು: ಸುರೇಶ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಸಂವಿಧಾನದ ಬಗ್ಗೆ ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಸುವಾಗ ರಾಗ ದ್ವೇಷ ಇರಬಾರದು. ‌ಸಂವಿಧಾನವನ್ನು ಓದಿ ಎಂದು ಹೇಳುವುದು ಯಾವುದೋ ಸಿದ್ಧಾಂತವನ್ನು ತಿಳಿಸುವ ವಿಧಾನ ಆಗಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶನಿವಾರ ಹೇಳಿದರು. 

ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಪಿಯುಸಿಯ 30 ಸಾವಿರ ವಿದ್ಯಾರ್ಥಿಗಳಿಗೆ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌‌.ನಾಗಮೋಹನ್‌ ದಾಸ್ ಅವರು ಬರೆದಿರುವ ‘ಸಂವಿಧಾನ ಓದು’ ಪುಸ್ತಕ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದ ಸಂವಿಧಾನದಲ್ಲಿ ತುರ್ತುಪರಿಸ್ಥಿತಿ ಹೇರಿಕೆಯು ಕರಾಳ ಅಧ್ಯಾಯ. ನಾಗಮೋಹನ್‌ ದಾಸ್‌ ಅವರು ‘ಸಂವಿಧಾನ ಓದು’ ಕೃತಿಯಲ್ಲಿ ಇದನ್ನು ಯಾಕೆ ಸೇರಿಸಿಲ್ಲ ಎಂಬುದು ಗೊತ್ತಿಲ್ಲ. ಆದರೆ, ಅವರು ಇದನ್ನು ಸೇರಿಸ‌ಬೇಕಾಗಿತ್ತು’ ಎಂದರು.  


ಸಮಾರಂಭದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕವನ್ನು ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ವಿತರಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕ ಎನ್‌.ಮಹೇಶ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಶಾಸಕರಾದ ಹರ್ಷವರ್ಧನ್‌, ಅಶ್ವಿನ್‌ಕುಮಾರ್‌ ಇದ್ದರು

‘ರಾತ್ರಿ ಮೂರು ಗಂಟೆ ರಾಷ್ಟ್ರಪತಿ ಅವರನ್ನು ನಿದ್ದೆಯಿಂದ ಎಬ್ಬಿಸಿ ತುರ್ತು ಪರಿಸ್ಥಿತಿ ಘೋಷಣೆಗೆ ಸಹಿ ಹಾಕಿಸಲಾಗಿತ್ತು. ಸರ್ಕಾರದ ವಿರುದ್ಧ ಮಾತನಾಡಿದವರೆನ್ನೆಲ್ಲ ಬಂಧಿಸಿ ಚಿತ್ರಹಿಂಸೆ ನೀಡಲಾಗಿತ್ತು. ಲೋಕಸಭೆಯನ್ನು ದುರುಪಯೋಗ ಪಡಿಸಿಕೊಂಡಿದ್ದರು. ನ್ಯಾಯಾಂಗವನ್ನೂ ಹಿಡಿತದಲ್ಲಿಟ್ಟುಕೊಂಡಿದ್ದರು. ಮಾಧ್ಯಮಗಳ ಮೇಲೆಯೂ ನಿಯಂತ್ರಣ ಹೇರಲಾಗಿತ್ತು. ಇದೊಂದು ಕರಾಳ ಅಧ್ಯಾಯ. ಮೂರು ಬಾರಿ ‘ಸಂವಿಧಾನ ಓದು’ ಪುಸ್ತಕವನ್ನು ಓದಿದ್ದೇನೆ. ಆದರೆ, ನನ್ನ ಆತ್ಮೀಯ ಗೆಳೆಯರಾದ ನಾಗಮೋಹನ್‌ದಾಸ್‌ ಅವರು ಇದರ ಬಗ್ಗೆ ಪುಸ್ತಕದಲ್ಲಿ ಸೇರಿಸಿಲ್ಲ. ಯಾಕೆ ಎಂಬುದು ಎಂಬುದು ಗೊತ್ತಿಲ್ಲ. ಇದು ಅತ್ಯಂತ ಅಗತ್ಯವಾಗಿದ್ದ ಅಧ್ಯಾಯವಾಗಿತ್ತು. ಯಾಕೆಂದರೆ ತುರ್ತುಪರಿಸ್ಥಿತಿಯಂತಹ ಸ್ಥಿತಿ ಈ ದೇಶದಲ್ಲಿ ಇನ್ನೊಮ್ಮೆ ನಿರ್ಮಾಣವಾಗಬಾರದು’ ಎಂದರು. 

‘ಅದರ ಬದಲಿಗೆ, ಅಲ್ಲೇನೋ ನಡಿಯುತ್ತಿದೆ. ಇಲ್ಲೇನೋ ಆಗುತ್ತಿದೆ ಎಂದು ಹೇಳುವುದು, ಯಾರೋ ಒಬ್ಬರು ಸಂವಿಧಾನದ ವಿರುದ್ಧ ಮಾತನಾಡಿದ್ದನ್ನು ಪ್ರಸ್ತಾಪಿಸಿ, ಅದನ್ನು ಸರ್ಕಾರದ ವಿರುದ್ಧವೇ ಹಾಕುವುದು ಅಷ್ಟು ಸರಿ ಹೋಗಲಿಕ್ಕಿಲ್ಲ. ಸಂವಿಧಾನ ಎನ್ನುವುದು ನಮ್ಮ ಜೀವನದ ಶ್ರದ್ಧೆಯ ಗ್ರಂಥ. ನಮಗೆ ಜೀವನದಲ್ಲಿ ಏನಾದರೂ ಅವಕಾಶ ಸಿಕ್ಕಿದ್ದರೆ ಅದಕ್ಕೆ ಸಂವಿಧಾನ ಕಾರಣ’ ಎಂದರು.

‘ಮೋದಿ ಸರ್ಕಾರ ಬಂದ ಮೇಲೆ ಪ್ರತಿ ವರ್ಷ ನವೆಂಬರ್‌ 26ರಂದು ಸಂವಿಧಾನ ದಿನ ಆಚರಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಆ ದಿನ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತದೆ. ಪ್ರತಿ ಶಾಲೆಯಲ್ಲಿ ಪ್ರತಿ ಮಗು ಓದುವಂತೆ ಮಾಡಲಾಗಿದೆ’ ಎಂದು ಸುರೇಶ್‌ ಕುಮಾರ್‌ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು