ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಕೋಳಿ ಮೊಟ್ಟೆ ಉದ್ಯಮ ಕುಸಿತ

Published 27 ಜೂನ್ 2024, 6:08 IST
Last Updated 27 ಜೂನ್ 2024, 6:08 IST
ಅಕ್ಷರ ಗಾತ್ರ

ಯಳಂದೂರು: ಶ್ರಮಿಕರ ಕೊರತೆ, ನಿರ್ವಹಣೆ ಸಮಸ್ಯೆ, ಅಸ್ಥಿರ ಬೆಲೆ ಹಾಗೂ ಬೇಡಿಕೆಯ ಪರಿಣಾಮ ಸ್ಥಳೀಯ ಕೋಳಿ ಫಾರಂಗಳಲ್ಲಿ(ಪೌಲ್ಟ್ರಿ)  ಮೊಟ್ಟೆ ಉತ್ಪಾದನೆ ಕುಸಿತವಾಗಿದ್ದು, ಮಾಲೀಕರು ಆತಂಕದಲ್ಲಿದ್ದಾರೆ.

ಏಪ್ರಿಲ್-ಮೇವರೆಗೂ ಅತಿಯಾದ ಬಿಸಿಲಿನ ಕಾರಣದಿಂದ ಕುಕ್ಕುಟ ಉದ್ಯಮ ಸವಾಲಾಗಿ ಪರಿಣಮಿಸಿತ್ತು. ಬಿಸಿಲ ಧಗೆ ತಾಳಲಾರದೆ ಹೆಚ್ಚಿನ ಸಂಖ್ಯೆಯ ಕೋಳಿಗಳು ಮೃತಪಟ್ಟಿದ್ದವು. ಕೋಳಿಗಳ ಸಾಕಣೆಗೆ ಹೆಚ್ಚಿನ ಶ್ರಮಿಕರ ಅಗತ್ಯತೆ ಇತ್ತು.

ಮಳೆ ಆರಂಭವಾದ ಬಳಿಕ ಬಿಸಿಲ ಧಗೆ ಕಡಿಮೆಯಾಗಿ ಮೊಟ್ಟೆ ಉತ್ಪಾದನೆ ಹೆಚ್ಚಾದರೂ ಕೋಳಿಗೆ ಪೂರೈಸುವ ಆಹಾರದ ಬೆಲೆಯಲ್ಲಿ ಏರಿಕೆಯಾಗಿದೆ. ಕೋಳಿ ಸಾಕಣೆ ಉದ್ಯಮಕ್ಕೆ ಮತ್ತೆ ಆರ್ಥಿಕ ಪೆಟ್ಟುಬಿದ್ದಿದೆ.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಶಾಲೆಗಳು ಆರಂಭವಾದ ನಂತರ ಮೊಟ್ಟೆಗೆ ಬೇಡಿಕೆ ಹೆಚ್ಚಿದೆ. ಬದಲಾಗಿ ಪೂರೈಕೆ ಪ್ರಮಾಣ ಕುಸಿಯುತ್ತ ಸಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸ್ಥರು ನರೇಗಾ ಯೋಜನೆಯಡಿ ಕೂಲಿ ಕೆಲಸದಲ್ಲಿ ತೊಡಗಿರುವುದರಿಂದ ಕೋಳಿ ಸಾಕಣೆಗೆ ಕಾರ್ಮಿಕರ ಕೊರತೆಯೂ ಕಾಡುತ್ತಿದೆ.

‘ಕಾರ್ಮಿಕರು ಸಿಕ್ಕರೂ ಹೆಚ್ಚಿನ ಕೂಲಿಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ ಉದ್ಯಮಕ್ಕೆ ಪೆಟ್ಟುಬಿದ್ದಿದೆ. ಉತ್ಪಾದನಾ ವೆಚ್ಚ ಏರಿಕೆಯಾಗಿ ಕುಕ್ಕುಟೋದ್ಯಮ ಅವಲಂಬಿತರ ನಿದ್ದೆಗೆಡಿಸಿದೆ’ ಎನ್ನುತ್ತಾರೆ ದುಗ್ಗಹಟ್ಟಿ ಪೌಲ್ಟ್ರಿ ಫಾರಂ ಮಾಲೀಕ ಗಂಗಾಧರಸ್ವಾಮಿ.

‘ನಾಟಿ ಕೋಳಿ ಮೊಟ್ಟೆಗೂ ಹೆಚ್ಚು ಬೇಡಿಕೆ ಇದ್ದು ₹10 ರಿಂದ ₹12ಕ್ಕೆ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ಬೇಡಿಕೆಗಳನ್ನು ಪೂರೈಸಿ ಉಳಿದ ಮೊಟ್ಟೆಗಳನ್ನು ಹೊರ ಜಿಲ್ಲೆಗಳಿಗೆ ಕಳುಹಿಸಬೇಕಿದೆ. ಗ್ರಾಮೀಣ ಭಾಗಗಳಲ್ಲಿ ತರಬೇತಿ ಪಡೆದ ಶ್ರಮಿಕರ ಕೊರತೆಯಿಂದ ಹೊರ ರಾಜ್ಯಗಳ ಶ್ರಮಿಕರನ್ನು ನೇಮಕ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ’ ಎಂದು ನಾಟಿ ಕೋಳಿ ಸಾಕಣೆದಾರ ಬನ್ನಿಸಾರಿಗೆ ಸಂಜಯ್ ಹೇಳಿದರು.

ಮಾರುಕಟ್ಟೆಯಲ್ಲಿ ಮೊಟ್ಟೆ ಧಾರಣೆ ತಗ್ಗಿಲ್ಲ. ಬೇಸಿಗೆಯ ಅವಧಿಯಲ್ಲಿ ಏರಿಕೆ ಕಂಡಿದ್ದ ದರದಲ್ಲೇ ಧಾರಣೆ ಮುಂದುವರಿದಿದೆ. ಇದರಿಂದ ಗ್ರಾಹಕರ ಖರೀದಿಸುವ ಸಾಮರ್ಥ್ಯವೂ ತಗ್ಗಿದೆ.
–ಮಾಂಬಳ್ಳಿ ಮಹೇಶ್ ಗ್ರಾಮಸ್ಥ

‘ಸ್ಥಿರ ಧಾರಣೆ ಇಲ್ಲ’

ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್ಇಸಿಸಿ) ಪ್ರತಿದಿನ ಮೊಟ್ಟೆ ಧಾರಣೆ ನಿರ್ಧರಿಸುತ್ತದೆ. ಜೂನ್ ಅಂತ್ಯದಲ್ಲೂ ಸಗಟು ದರ ₹580 (ಪ್ರತಿ 100 ಮೊಟ್ಟೆಗಳಿಗೆ) ಇದೆ. ಒಮ್ಮೊಮ್ಮೆ 500ಕ್ಕೂ ಕುಸಿದ ನಿದರ್ಶನಗಳಿವೆ. ಚಿಲ್ಲರೆ ಅಂಗಡಿಗಳಲ್ಲಿ ಬೆಲೆ ಇಳಿಕೆ ಲಾಭ ಗ್ರಾಹಕರಿಗೆ ವರ್ಗಾವಣೆ ಆಗುತ್ತಿಲ್ಲ. 1 ಮೊಟ್ಟೆಗೆ ₹7 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ‘ಮೊಟ್ಟೆ ಸಾಕಣೆದಾರರು ಎನ್ಇಸಿಸಿ ನಿರ್ಧರಿಸಿದ ಬೆಲೆಯಲ್ಲಿಯೇ ಮಾರಾಟ ಮಾಡಬೇಕಿದೆ. ಕೋಳಿ ಆಹಾರಕ್ಕೆ ಹೆಚ್ಚಿನ ಹಣ ವ್ಯಯ ಶ್ರಮಿಕರ ಕೊರತೆಯ ಪರಿಣಾಮ ಮೊಟ್ಟೆ ಉತ್ಪಾದನೆ ₹9 ಸಾವಿರದಿಂದ ₹6 ಸಾವಿರಕ್ಕೆ ಕುಸಿದಿದೆ’ ಎಂದು ಗಂಗಾಧರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT