ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಗ್ರಾಮ ಲೆಕ್ಕಿಗ ಹುದ್ದೆಗೆ ನಕಲಿ ಅಂಕಪಟ್ಟಿ: 8 ಮಂದಿಗೆ 2 ವರ್ಷ ಜೈಲು

ಚಾಮರಾಜನಗರದಲ್ಲಿ 2013ರಲ್ಲಿ ನಡೆದಿದ್ದ ಪ್ರಕರಣ, ನ್ಯಾಯಾಲಯದ ಆದೇಶ
Published 8 ಜನವರಿ 2024, 6:37 IST
Last Updated 8 ಜನವರಿ 2024, 6:37 IST
ಅಕ್ಷರ ಗಾತ್ರ

ಚಾಮರಾಜನಗರ: ನಕಲಿ ಅಂಕಪಟ್ಟಿ ನೀಡಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಗೊಂಡಿದ್ದ ಎಂಟು ಮಂದಿಗೆ ನಗರದ ಜಿಲ್ಲಾ ನ್ಯಾಯಾಲಯವು ತಲಾ ಎರಡು ವರ್ಷಗಳ ಸಾದಾ ಶಿಕ್ಷೆ ವಿಧಿಸಿ ಆದೇಶಿಸಿದೆ. 

ಕೋಲಾರ ಜಿಲ್ಲೆಯ ಪಟ್ಣ ಗ್ರಾಮದ ಸುನೀಲ್ ಕುಮಾರ್, ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕುರುವಂಕ ಗ್ರಾಮದ ಸಂತೋಷ್ ಕುಮಾರ್, ಹಾಸನ ಜಿಲ್ಲೆಯ ಅಂಕಪುರ ಗ್ರಾಮದ ಎ.ಬಿ.ಶಂಕರ, ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಅಪ್ಪೆನ ಹಳ್ಳಿ ಗ್ರಾಮದ ಷಣ್ಮುಗ ಎಂ, ಮುಳಬಾಗಿಲು ತಾಲ್ಲೂಕಿನ ಕುಕ್ಕಲದೊಡ್ಡಿ ಗ್ರಾಮದ ನಾರಾಯಣಸ್ವಾಮಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚೆನ್ನಹಳ್ಳಿ ಗ್ರಾಮದ ಸಿ.ಎನ್‌.ಶ್ರೀರಾಮ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಮುನಿರಾಜು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ನಕ್ಕನಹಳ್ಳಿ ಗ್ರಾಮದ ಎನ್‌.ಬಿ.ಸಿದ್ದಲಿಂಗಯ್ಯ ಶಿಕ್ಷೆಗೆ ಗುರಿಯಾದವರು.

ಚಾಮರಾಜನಗರ ಜಿಲ್ಲಾಡಳಿತ 2012ರಲ್ಲಿ 46 ಗ್ರಾಮ ಲೆ‌ಕ್ಕಾಧಿಕಾರಿ ಹುದ್ದೆಗೆ ನೇಮಕಾತಿ ಮಾಡಿತ್ತು. ಈ ಎಂಟು ಜನರು ದೆಹಲಿಯ ಬೋರ್ಡ್‌ ಆಫ್‌ ಹೈಯರ್‌ ಸೆಕೆಂಡರಿ ಎಜುಕೇಷನ್‌ನ ಪಿಯುಸಿ ಅಂಕಪಟ್ಟಿ ಮತ್ತು ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಸಲ್ಲಿಸಿ ಉದ್ಯೋಗ ಪಡೆದಿದ್ದರು. 

2013ರಲ್ಲಿ ಅಂಕಪಟ್ಟಿ ಪರಿಶೀಲನೆ ಸಂದರ್ಭದಲ್ಲಿ ಅಂಕಪಟ್ಟಿಗಳು ನಕಲಿ ಎಂಬುದು ಗೊತ್ತಾಗಿತ್ತು. ನಂತರ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸಬ್‌ ಇನ್‌ಸ್ಪೆಕ್ಟರ್‌ ಎಂ.ನಂಜಪ್ಪ ಅವರು ತನಿಖೆ ನಡೆಸಿ ಎಂಟು ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪಗಳು ಸಾಬೀತಾಗಿರುವುದರಿಂದ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಬಿ.ಎಸ್‌.ಹೊನ್ನಸ್ವಾಮಿ ಅವರು ಶುಕ್ರವಾರ ಎಂಟು ಮಂದಿಗೂ ತಲಾ ಎರಡು ವರ್ಷಗಳ ಸಾದಾ ಶಿಕ್ಷೆ ಮತ್ತು ₹6,000 ದಂಡ ವಿಧಿಸಿ ಆದೇಶಿಸಿದ್ದಾರೆ. 

ಪ್ರಾಸಿಕ್ಯೂಷನ್‌ ಪರವಾಗಿ ಹಿರಿಯ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮಹೇಶ ಎ.ಸಿ ಅವರು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT