ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಜಿಲ್ಲೆಯಲ್ಲೂ 23ರಿಂದ ಆನೆ ಗಣತಿ

ಬಂಡೀಪುರ, ಬಿಆರ್‌ಟಿ, ಮಲೆ ಮಹದೇಶ್ವರ, ಕಾವೇರಿ ಅರಣ್ಯದಲ್ಲಿ ಮೂರು ದಿನಗಳ ಕಾಲ ಸಮೀಕ್ಷೆ
Published 21 ಮೇ 2024, 6:40 IST
Last Updated 21 ಮೇ 2024, 6:40 IST
ಅಕ್ಷರ ಗಾತ್ರ

ಚಾಮರಾಜನಗರ: ದಕ್ಷಿಣ ರಾಜ್ಯಗಳ ಗಡಿ ಪ್ರದೇಶದ ಅರಣ್ಯಗಳಲ್ಲಿರುವ ಆನೆಗಳ ಸಂಖ್ಯೆಯನ್ನು ನಿಖರವಾಗಿ ಅಂದಾಜಿಸಲು ಎಲ್ಲ ರಾಜ್ಯಗಳ ಸಮನ್ವಯದಲ್ಲಿ ಇದೇ 23ರಿಂದ 25ರವರೆಗೆ ಮೂರು ದಿನಗಳ ಕಾಲ ಆನೆ ಗಣತಿ ನಡೆಯಲಿದ್ದು, ಜಿಲ್ಲೆಯ ನಾಲ್ಕು ರಕ್ಷಿತಾರಣ್ಯಗಳಲ್ಲೂ ಗಣತಿಗೆ ಸಿದ್ಧತೆ ನಡೆದಿದೆ. 

ಬಂಡೀಪುರ, ಬಿಆರ್‌ಟಿ ಹುಲಿ ಸಂರಕ್ಷಿತಗಳು, ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮಗಳಲ್ಲಿ ಆನೆ ಗಣತಿ ನಡೆಯಲಿದೆ. 

ಚಾಮರಾಜನಗರ ಜಿಲ್ಲೆ ಮಾತ್ರವಲ್ಲದೆ, ನೆರೆಯ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯ ನಾಗರಹೊಳೆ, ಕೊಡಗು ಜಿಲ್ಲೆ, ಬನ್ನೇರುಘಟ್ಟ, ಕೋಲಾರ ಜಿಲ್ಲೆಗಳಲ್ಲೂ ಗಣತಿ ನಡೆಯಲಿದೆ. 

ಕಳೆದ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಗಣತಿ ನಡೆದಿತ್ತು. ಈ ಬಾರಿ ದಕ್ಷಿಣದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಗಡಿಭಾಗಗಳಲ್ಲಿ ಏಕಕಾಲಕ್ಕೆ ಈ ಗಣತಿ ನಡೆಯಲಿದೆ. 

ಮಾರ್ಚ್ 10ರಂದು ಬಂಡೀಪುರದಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಅರಣ್ಯ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ನಡುವೆ ನಡೆದಿದ್ದ ಸಮನ್ವಯ ಸಭೆಯಲ್ಲಿ ಕೈಗೊಂಡ ನಿರ್ಧಾರಂತೆ ಗಣತಿ ನಡೆಸಲಾಗುತ್ತಿದೆ. 

23ರಿಂದ 25ರವರೆಗೆ ಪ್ರತಿ ದಿನ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಅರಣ್ಯ ಇಲಾಖೆಗಳ ಸಿಬ್ಬಂದಿಯೇ ಗಣತಿ ನಡೆಸಲಿದ್ದಾರೆ. 

‘23ರಂದು ಮೊದಲ ದಿನ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ತಂಡಗಳಾಗಿ ಬೀಟ್‌ ವ್ಯಾಪ್ತಿಯಲ್ಲಿ ಸುತ್ತಾಡಿ ಆನೆಗಳನ್ನು ನೇರವಾಗಿ ವೀಕ್ಷಣೆ ಮಾಡಿ ಅವುಗಳ ಸಂಖ್ಯೆ ಮತ್ತು ವಿವರಗಳನ್ನು ದಾಖಲು ಮಾಡಲಿದ್ದಾರೆ. ಎರಡನೇ ದಿನ ಪ್ರತಿ ಗಸ್ತಿನಲ್ಲಿ ಕಂಡು ಬಂದ ಆನೆಯ ಲದ್ದಿಯ ಆಧಾರದಲ್ಲಿ ಆನೆಗಳ ವಿವರ ದಾಖಲಿಸಲಾಗುವುದು. ಮೂರನೇ ಮತ್ತು ಕೊನೆಯ ದಿನ ಜಲಮೂಲಗಳ ಬಳಿ ನೀರು ಕುಡಿಯಲು ಹಿಂಡು ಹಿಂಡಾಗಿ ಬರುವ ಗಂಡು, ಹೆಣ್ಣು, ಮರಿ ಆನೆಗಳನ್ನು ಲೆಕ್ಕಹಾಕಲಾಗುತ್ತದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಎಲ್ಲ ಕಡೆಗಳಲ್ಲೂ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಗಣತಿ ನಡೆಸಲಿದ್ದಾರೆ. ಹಿಂದೆ ಎಲ್ಲ ಆನೆಯ ವಿವರಗಳನ್ನು ಲಿಖಿತವಾಗಿ ನಮೂದು ಮಾಡಲಾಗುತ್ತಿತ್ತು. ಈ ಬಾರಿ ಆ್ಯಪ್‌ ಮೂಲಕ ದಾಖಲಿಸಲಾಗುತ್ತಿದೆ. ಇಲಾಖೆ ಇದಕ್ಕಾಗಿಯೇ ಆ್ಯಪ್‌ ಅಭಿವೃದ್ಧಿ ಪಡಿಸಿದೆ’ ಎಂದು ಅವರು ಮಾಹಿತಿ ನೀಡಿದರು.  

ಏಕ ಕಾಲಕ್ಕೆ ಗಣತಿ: ‘ದಕ್ಷಿಣದ ರಾಜ್ಯಗಳು ಸಮನ್ವಯದಿಂದ ಏಕಕಾಲಕ್ಕೆ ಗಣತಿ ನಡೆಸುತ್ತಿರುವುದು ವಿಶೇಷ. ಬೇರೆ ಬೇರೆ ಅವಧಿಯಲ್ಲಿ ಆನೆಗಳನ್ನು ಲೆಕ್ಕಹಾಕಲು ಹೊರಟರೆ ಕರ್ನಾಟಕದಲ್ಲಿ ಕಂಡ ಆನೆ, ನಂತರ ನೆರೆಯ ರಾಜ್ಯಕ್ಕೆ ಹೋಗಿ ಅಲ್ಲಿಯ ಗಣತಿಯ ಸಮಯದಲ್ಲೂ ಕಾಣಿಸಿಕೊಳ್ಳಬೇಕು. ಏಕಕಾಲಕ್ಕೆ ನಡೆಯುವುದರಿಂದ ಆನೆಗಳ ನಿಖರ ಸಂಖ್ಯೆ ಅಂದಾಜಿಸಲು ಸಾಧ್ಯ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಸಂತೋಷ್‌ಕುಮಾರ್‌ ‘ಪ್ರಜಾವಾಣಿ’ಗೆ ವಿವರಿಸಿದರು. 

ಜಿಲ್ಲೆಯಲ್ಲಿವೆ  2677 ಆನೆಗಳು

ಕಳೆದ ವರ್ಷ ಬಿಡುಗಡೆ ಮಾಡಿರುವ ಆನೆ ಗಣತಿ ವರದಿ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿವೆ. ಈ ಪೈಕಿ ಜಿಲ್ಲೆಯಲ್ಲಿರುವ ಬಂಡೀಪುರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಲ್ಲಿ 2677 ಆನೆಗಳು ಇವೆ. ಬಂಡೀಪುರ ಅರಣ್ಯದಲ್ಲಿ 1116 ಆನೆಗಳಿವೆ. ಮಲೆ ಮಹದೇಶ್ವರ ವನ್ಯಧಾಮದಲ್ಲಿ 706 ಗಜಗಳಿವೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸರಾಸರಿ 619 ಕಾವೇರಿ ವನ್ಯಧಾಮದಲ್ಲಿ 236 ಆನಗಳು ಇವೆ. 

ಗಣತಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಬಿಆರ್‌ಟಿ ಅರಣ್ಯದಲ್ಲಿ ಮಾತ್ರವಲ್ಲದೆ ಈ ಬಾರಿ ಚಾಮರಾಜನಗರ ಪ್ರಾದೇಶಿಕ ವಲಯದಲ್ಲೂ ಸಮೀಕ್ಷೆ ನಡೆಸಲಿದ್ದೇವೆ.
-ದೀಪ್‌ ಜೆ.ಕಾಂಟ್ರ್ಯಾಕ್ಟರ್‌, ಬಿಆರ್‌ಟಿ ಡಿಸಿಎಫ್‌
ದೀಪ್‌ ಜೆ.ಕಾಂಟ್ರ್ಯಾಕ್ಟರ್‌
ದೀಪ್‌ ಜೆ.ಕಾಂಟ್ರ್ಯಾಕ್ಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT