ಮಂಗಳವಾರ, ನವೆಂಬರ್ 29, 2022
29 °C
ಜನರಿಂದ ಉತ್ತಮ ಸ್ಪಂದನೆ: ಫಲಪುಷ್ಪ ಪ್ರದರ್ಶನವನ್ನು ಒಂದು ದಿನ ವಿಸ್ತರಿಸಿದ ಜಿಲ್ಲಾಡಳಿತ

ಜನರ ಆಕರ್ಷಿಸಿದ ಮಾರಾಟ ಮಳಿಗೆಗಳು

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ದಸರಾ ಮಹೋತ್ಸವದ ಅಂಗವಾಗಿ ವಸ್ತುಪ್ರದರ್ಶನದಲ್ಲಿ ತೆರೆಯಲಾಗಿರುವ ಮಾರಾಟ ಹಾಗೂ ಮಾಹಿತಿ ಮಳಿಗೆಗಳಿಗೆ ಜನರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ಥಳೀಯ ನಿವಾಸಿಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಫಲಪುಷ್ಪ ಪ್ರದರ್ಶನ ನೋಡಲು ಬಂದಿದ್ದ ಸಾರ್ವಜನಿಕರು ಮಾರಾಟ ಮಳಿಗೆಗಳತ್ತ ತೆರಳಿ ತಮ್ಮ ಇಷ್ಟವಾದ ವಸ್ತುಗಳ ಖರೀದಿಗೆ ಮುಂದಾದರು. ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.  

ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಮಾರಾಟ ಮಳಿಗೆಗಳನ್ನು ತೆರೆದಿವೆ. 

ಕೃಷಿ ಇಲಾಖೆಯ ಮಳಿಗೆಯಲ್ಲಿ ಸಾವಯವ ಕೃಷಿ, ಸಿರಿಧಾನ್ಯಗಳ ಬಗ್ಗೆ ಮಾಹಿತಿಗಳನ್ನು ನೀಡುವುದರ ಜೊತೆಗೆ, ಸಿರಿಧಾನ್ಯಗಳ ಬಿತ್ತನೆ ಬೀಜಗಳ ಮಾರಾಟವೂ ಏರ್ಪಡಿಸಲಾಗಿತ್ತು. ವಿವಿಧ ಭೂಪ್ರದೇಶಗಳಲ್ಲಿ ಕಂಡು ಬರುವ ಮಣ್ಣಿನ ಫಲವತ್ತತೆ ಆಧಾರದ ಮೇಲೆ ಬೆಳೆಗಳ ಬಗ್ಗೆ ತಜ್ಞರು ಸಾರ್ವಜನಿಕರಿಗೆ ತಿಳಿ ಹೇಳುತ್ತಿದ್ದರು. 

ಸಿರಿಧಾನ್ಯ ಬೆಳೆಯಲು ಮಣ್ಣಿನಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುವ ಬಗೆ, ರಸಗೊಬ್ಬರ ಬಳಸದೇ ಸಾವಯವ ಗೊಬ್ಬರ ಬಳಸಿ ಧಾನ್ಯಗಳನ್ನು ಬೆಳೆಯುವ ರೀತಿಯ ಬಗ್ಗೆ ಕೃಷಿ ವಿದ್ಯಾರ್ಥಿಗಳು ವಿವರಿಸುತ್ತಿದ್ದರು.  ವಿದ್ಯಾರ್ಥಿಗಳು ತಿಳಿಸಿಕೊಟ್ಟರು.

ಯಂತ್ರೋಪಕರಣಗಳು: ವಿವಿಧ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟವೂ ಜನರನ್ನು ಸೆಳೆಯಿತು. ರೈತರು ಹಾಗೂ ಆಸಕ್ತರು ಉಪಕರಣಗಳ ಕಾರ್ಯಗಳ ಬಗ್ಗೆ ಕಂಪನಿ ಪ್ರತಿನಿಧಿಗಳೊಂದಿಗೆ ವಿಚಾರಿಸುತ್ತಿದ್ದರು.

ಕೈಮಗ್ಗ ಮತ್ತು ಜವಳಿ  ಇಲಾಖೆ ವತಿಯಿಂದ ತೆರೆಯಲಾಗಿದ್ದ ಮಳಿಗೆಯಲ್ಲಿ ಸೀರೆ, ಚೀಲ ಹಾಗೂ ಜಮಖಾನಗಳನ್ನು ಇಡಲಾಗಿತ್ತು.

ಜೇನು ತುಪ್ಪ, ಅಲಂಕಾರಿಕ ಹೂ ಹಾಗೂ ಅದರ ಬಿತ್ತನೆ ಬೀಜಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಸಾರ್ವಜನಿಕರು ಅಲಂಕಾರಿಕ ಹೂಗಳ ಬಿತ್ತನೆ ಬೀಜಗಳಿಗಾಗಿ ಮುಗಿಬಿದ್ದರು.

ಒಂದು ದಿನ ವಿಸ್ತರಣೆ

ಫಲಪುಷ್ಪ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಜಿಲ್ಲಾಡಳಿತವು ಪ್ರದರ್ಶನವನ್ನು ಒಂದು ದಿನ ಮುಂದೂಡಿದೆ. 

ಗುರುವಾರ ರಾತ್ರಿ ಫಲ ಪುಷ್ಪ ಪ್ರದರ್ಶನದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಉತ್ತಮ ಸ್ಪಂದನೆ ಇರುವುದರಿಂದ ಇನ್ನೂ ಒಂದೆರಡು ದಿನಗಳ ಕಾಲ ವಿಸ್ತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು. ‘ಪ್ರಜಾವಾಣಿ’ ಕೂಡ ತನ್ನ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿತ್ತು. 

ಶುಕ್ರವಾರ ಜಿಲ್ಲಾಡಳಿತವು ಶನಿವಾರದವರೆಗೆ ಪ್ರದರ್ಶನ ವಿಸ್ತರಿಸಲಾಗುವುದು ಎಂದು ತಿಳಿಸಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು