ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೃತ್ತಿಗೆ ವಿದಾಯ, ಪ್ರವೃತ್ತಿ ಆರಂಭ: ಗಿರ್ ಹಸು ಸಾಕಣೆಯಲ್ಲಿ ನಾಗರಾಜು‌ ಯಶಸ್ಸು

ಗಿರ್ ಹಸು ಸಾಕಣೆಯಲ್ಲಿ ಯಶಸ್ಸು ಕಂಡ ನಾಗರಾಜು‌
Published 28 ಜೂನ್ 2024, 5:20 IST
Last Updated 28 ಜೂನ್ 2024, 5:20 IST
ಅಕ್ಷರ ಗಾತ್ರ

ಹನೂರು: ಕೇಂದ್ರ ಸರ್ಕಾರಿ ನೌಕರಿಯಿಂದ ಸ್ವಯಂ ನಿವೃತ್ತಿ ಪಡೆದು, ಕೃಷಿ ಪ್ರವೃತ್ತಿಯನ್ನು ಅಪ್ಪಿಕೊಂಡ   ಹನೂರು ತಾಲ್ಲೂಕಿನ ಚೆನ್ನಾಲಿಂಗನ ಹಳ್ಳಿಯ ನಾಗರಾಜು ಯಶಸ್ವಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಬಳಿಕ ಅಲ್ಲಿಯೇ ವಿಶ್ರಾಂತ ಜೀವನ ಅರಸುವ ಬಹುತೇಕರ ನಡುವೆ ನಾಗರಾಜು ವಿಭಿನ್ನ.   ಬಿಇಎಲ್ ಕಂಪೆನಿಯಲ್ಲಿ 37 ವರ್ಷ ಕರ್ತವ್ಯನಿರ್ವಹಿಸಿ 2003ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಬಳಿಕ ಕುಟುಂಬದ ಕೃಷಿ ಹಾಗೂ ಹೈನುಗಾರಿಕೆಯತ್ತ ಆಕರ್ಷಿತರಾಗಿ ಹಳ್ಳಿಗೆ ಬಂದಿದ್ದರು.

ಪ್ರಾರಂಭದಲ್ಲಿ ರಾಜಸ್ಥಾನದಿಂದ ಗಿರ್ ತಳಿಯ 10 ಹಸುಗಳನ್ನು ತಂದ ನಾಗರಾಜ್‌ ಜಮೀನಿನಲ್ಲಿದ್ದ ಕೊಳವೆಬಾವಿ ನೀರನ್ನು ಬಳಸಿಕೊಂಡು ಸೀಮೆ ಹುಲ್ಲು ಬೆಳೆಯಲು ಶುರುಮಾಡಿದರು. ಒಂದೇ ವರ್ಷದಲ್ಲೇ ಹಸುಗಳ ಸಂಖ್ಯೆ ದುಪ್ಪಟ್ಟಾಗಿ ಪ್ರಸ್ತುತ 26 ಗಿರ್ ತಳಿಯ ಹಸುಗಳು ಇವರ ಬಳಿ ಇವೆ.

ಜತೆಗೆ ಆಂಧ್ರಪ್ರದೇಶದಿಂದ  ಪುಂಗನೂರು ತಳಿ, ಹೊಂಗೋಲ್ ತಳಿಯ ತಲಾ ಒಂದು ಹಸುಗಳನ್ನು ಸಾಕಿದ್ದು ಅವುಗಳು ಕೂಡ ಕರು ಹಾಕಿ , ಈಗ 35 ರಾಸುಗಳನ್ನು ಸಾಕುತ್ತಿದ್ದಾರೆ.

ಗಿರ್ ತುಪ್ಪಕ್ಕೆ ಬೇಡಿಕೆ: ಗಿರ್ ತಳಿಯ ಹಸುವಿನ  ಬೆಣ್ಣೆಯಿಂದ ತುಪ್ಪ ಮಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಎನ್.ಎಂ.ಕೆ .ಫಾರ್ಮ್ ಅನ್ನು ಸ್ಥಾಪಿಸಿರುವ ನಾಗರಾಜು, ಬನಶಂಕರಿ ಗೋಶಾಲೆಯನ್ನೂ ಕಟ್ಟಿದ್ದಾರೆ. 2019ರಲ್ಲಿ ಆರಂಭವಾದ ಹೈನುಗಾರಿಕೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಬೆಂಗಳೂರಿನಲ್ಲಿ ಸಂಸ್ಥೆಯ ತುಪ್ಪಕ್ಕೆ ತುಂಬಾ ಬೇಡಿಕೆಯಿದೆ ಎಂದು ಹೇಳುತ್ತಾರೆ.

ಗ್ರಾಹಕರು ತುಪ್ಪ ಖರೀದಿಗೆ ಮುಂಗಡ ಬುಕ್‌ ಮಾಡುತ್ತಾರೆ. ಬೆಂಗಳೂರಿನಲ್ಲಿ 1 ಕೆ.ಜಿ. ತುಪ್ಪ ₹ 2,000ಕ್ಕೆ ಮಾರಾಟವಾಗುತ್ತದೆ. ಸ್ಥಳೀಯವಾಗಿ 1 ಕೆ.ಜಿ.ಗೆ ₹ 1800ಕ್ಕೆ ಮಾರಾಟ ಮಾಡುತ್ತಿದ್ದೇನೆ.  ಉದ್ಯಮಕ್ಕೆ ಬೇರೆ ಆಯಾಮ ನೀಡುವ ಯೋಜನೆಯಿದೆ ಎಂದು ತಿಳಿಸಿದರು.

ಮೀನು ಸಾಕಣೆ: ಹೈನುಗಾರಿಕೆಯ ಜತೆಗೆ ಮೀನು ಸಾಕಣೆಗೂ ಮುಂದಾಗಿರುವ ನಾಗರಾಜ್ ಜಮೀನಿನಲ್ಲಿ ತೊಟ್ಟಿ ನಿರ್ಮಾಣ ಮಾಡಿ  ಸಾಕುತ್ತಿದ್ದಾರೆ. 

 ಚೆನ್ನಾಲಿಂಗನಹಳ್ಳಿ ಗ್ರಾಮದ ನಾಗರಾಜು ಹೈನುಗಾರಿಕೆಯಲ್ಲಿ ನಿರತರಾಗಿರುವುದು
 ಚೆನ್ನಾಲಿಂಗನಹಳ್ಳಿ ಗ್ರಾಮದ ನಾಗರಾಜು ಹೈನುಗಾರಿಕೆಯಲ್ಲಿ ನಿರತರಾಗಿರುವುದು

ನಿವೃತ್ತಿಯ ಬಳಿಕ ಬಂದ ಹಣದಲ್ಲಿ ಜೀವನ ನಿರ್ವಹಣೆ ಮಾಡಬಹುದಿತ್ತು. ತಂದೆಯಿಂದ ಬಳುವಳಿಯಾಗಿ ಬಂದ ಕೃಷಿ ಆಸಕ್ತಿ ಪ್ರೇರೇಪಿಸಿತು. 35 ವರ್ಷ ದಣಿವರಿಯದೆ ದುಡಿದಿದ್ದೇನೆ. ಈಗ ಗ್ರಾಮದಲ್ಲಿ ನೆಲೆನಿಂತಿದ್ದು ಈ ಉದ್ಯಮ ಆತ್ಮತೃಪ್ತಿಗಾಗಿ.

– ನಾಗರಾಜು ಹೈನೋದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT