ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಚಾಮರಾಜನಗರದಲ್ಲಿ ರಸ್ತೆ ತಡೆ

ಕಾಯ್ದೆ, ಮಸೂದೆಗಳನ್ನು ವಾಪಸ್‌ ಪಡೆಯಲು ಆಗ್ರಹ, ಇಲ್ಲದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ
Last Updated 25 ಸೆಪ್ಟೆಂಬರ್ 2020, 8:46 IST
ಅಕ್ಷರ ಗಾತ್ರ

ಚಾಮರಾಜನಗರ: ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳು ಸೇರಿದಂತೆ ವಿವಿಧ ಕಾಯ್ದೆ ಹಾಗೂ ಮಸೂದೆಗಳನ್ನು ವಿರೋಧಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿಯು ಶುಕ್ರವಾರ ಚಾಮರಾಜನಗರದ ಜಿಲ್ಲೆಯಾದ ವಿವಿಧ ಕಡೆಗಳಲ್ಲಿ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಿತು.ರಸ್ತೆ ತಡೆ ನಡೆಸಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಹನೂರುಗಳಲ್ಲಿ ರಸ್ತೆ ತಡೆ ನಡೆಯಿತು. ಕೇಂದ್ರ ಹಾಗೂ ರಾಜ್ಯಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನನಿರತರು, ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳನ್ನು ತಕ್ಷಣವೇ ವಾಪಸ್‌ ಪಡೆಯಬೇಕು ಇಲ್ಲದಿದ್ದರೆ, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಕಾರರು ರಸ್ತೆಯಲ್ಲಿ ಧರಣಿ ಕುಳಿತು ವಾಹನಗಳ ಸಂಚಾರವನ್ನು ತಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು, ‘ಉದ್ಯಮಿಗಳಿಗೆ, ಕಾರ್ಪೊರೇಟ್‌ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸಲು ಹಾಗೂ ಆಡಳಿತದಲ್ಲಿರುವ ರಾಜಕಾರಣಿಗಳಿಗೆ ಸರ್ಕಾರ ನಡೆಸಲು ಬೇಕಾದ ಹಣ ಸಂಗ್ರಹಿಸಲು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ತಕ್ಷಣ ಈ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಕಾಯ್ದೆ ವಾಪಸ್‌ ಪಡೆಯದಿದ್ದರೆ, ಮುಖ್ಯಮಂತ್ರಿ ಅವರ ಮುಖಕ್ಕೆ ಮಸಿ ಬಳಿಯಬೇಕಾಗುತ್ತದೆ. ರಾಜಕಾರಣಿಗಳು, ಸಚಿವರು ರೈತರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಅವರು ತಕ್ಷಣ ರೈತರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಇದರ ವಿರುದ್ಧವೂ ರೈತರು ಹೋರಾಟ ಮಾಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮೈಸೂರು ವಿಭಾಗದ ಕಾರ್ಯದರ್ಶಿ ಎಂ.ಮಹೇಶ್‌ ಪ್ರಭು ಅವರು ಮಾತನಾಡಿ, ‘ಕಾರ್ಪೊರೇಟ್‌ ಕಂಪನಿಗಳಿಗೆ ಹಾಗೂ ಸಿರಿವಂತರಿಗೆ ಅನುಕೂಲವಾಗಿರುವ ಈ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣ ವಾಸಪ್‌ ಪಡೆಯಬೇಕು. ಇಲ್ಲದಿದ್ದರೆ, ಹೋರಾಟವನ್ನು ಇನ್ನೂ ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.

ಬಹುಜನ ಸಮಾಜಪಕ್ಷದ ಕಾರ್ಯಕರ್ತರು, ಕಾರ್ಮಿಕ ಸಂಘಟನೆಗಳ ಮುಖಂಡರು ಕೂಡ ಹೋರಾಟಕ್ಕೆ ಬೆಂಬಲ ನೀಡಿದರು.

ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಮನವೊಲಿಸಲು ಯತ್ನಿಸಿದರು. ಆದರೆ, ಪಟ್ಟು ಬಿಡದ ಪ್ರತಿಭಟನನಿರತರು ರಸ್ತೆಯಲ್ಲೇ ಕುಳಿತು ಘೋಷಣೆ, ದಿಕ್ಕಾರ ಕೂಗುವುದನ್ನು ಮುಂದುವರಿಸಿದರು. ಮಾತನ್ನು ಕೇಳದೇ ಇದ್ದಾಗ, ಎಲ್ಲರನ್ನೂ ಬಲವಂತವಾಗಿ ವಶಕ್ಕೆ ಪಡೆದ ಪೊಲೀಸರು, ವಾಹನಕ್ಕೆ ಹತ್ತಿಸಿ ಕರೆದುಕೊಂಡು ಹೋದರು.

ಇನ್ನೊಂದು ಬಣದಿಂದಲೂ ಪ್ರತಿಭಟನೆ

ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಮತ್ತೊಂದು ಬಣವೂ ಪ್ರತ್ಯೇಕವಾಗಿ ರಸ್ತೆ ತಡೆ ನಡೆಸಿ,ತಿದ್ದುಪಡಿ ಕಾಯ್ದೆಗಳ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿತು.

ಸಂತೇಮರಹಳ್ಳಿ ರಸ್ತೆಯಲ್ಲಿರುವ ಅಂಚೆ ಕಚೇರಿ ಮುಂಭಾಗದಲ್ಲಿ ರಸ್ತೆಗೆ ಅಡ್ಡವಾಗಿ ಕುಳಿತು ಧರಣಿ ನಡೆಸಿದ ಪ್ರತಿಭಟನಕಾರರು, ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಅವರು, ‘ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್‌ ಕಾಯ್ದೆ, ಕೃಷಿ ಮಸೂದೆ ಸೇರಿದಂತೆ ಹಲವು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರನ್ನು ಭಿಕ್ಷುಕರನ್ನಾಗಿ ಹಾಗೂ ಕಾರ್ಪೊರೇಟ್‌ ಕಂಪನಿಗಳ ಕಾರ್ಮಿಕರನ್ನಾಗಿ, ಗುಲಾಮರನ್ನಾಗಿ ಮಾಡಲು ಹೊರಟಿಸಿದೆ. ಆಹಾರ ಸಾರ್ವಭೌಮತ್ವವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡುವುದಕ್ಕೆ ಹೊರಟಿದೆ’ ಎಂದು ಆರೋಪಿಸಿದರು.

‘ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಆದಷ್ಟು ಬೇಗ ಅಧಿಕಾರ ಕಳೆದಕೊಳ್ಳಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು, ವಾಹನಗಳ ಸಂಚಾರಕ್ಕೆ ಅವಕಾ ಕಲ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT