ಗುಂಡ್ಲುಪೇಟೆ: ಅರಿಸಿನ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ರೈತ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅರಿಸಿನ ಬೆಳೆಗಾರರು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕೂಡಲೇ ಬೆಂಬಲ ಬೆಲೆ ಘೋಷಣೆಗೆ ಒತ್ತಾಯಿಸಿದರು.
ವಿ.ಸೋಮಣ್ಣ ಭೇಟಿ: ವಿಷಯ ತಿಳಿಯುತ್ತಲೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ ಅವರು ಅರಿಸಿನ ಬೆಳೆಗಾರರು ಮತ್ತು ರೈತ ಮುಖಂಡರ ಅಹವಾಲು ಆಲಿಸಿದರು.
ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು ಮಾತನಾಡಿ, ‘ಈ ಬಾರಿ ಅರಿಸಿನ ಬೆಳೆದ ಖರ್ಚು ಕೂಡ ರೈತರಿಗೆ ಸಿಗುತ್ತಿಲ್ಲ. ಕೃಷಿ ಬೆಲೆ ಆಯೋಗ ನಿಗದಿ ಪಡಿಸಿದ ಬೆಲೆ ಅವೈಜ್ಞಾನಿಕವಾಗಿದೆ. ಕ್ವಿಂಟಲ್ ಅರಿಸಿನಕ್ಕೆ ಕನಿಷ್ಟ ₹15 ಸಾವಿರದಿಂದ ₹20 ಸಾವಿರದವರೆಗೆ ಇರಬೇಕು. ಅರಿಸಿಣ ಬೆಳೆಗಾರರು ಜೀವನ ನಡೆಸಲು ಆಗುತ್ತಿಲ್ಲ. ಇರುವ ಜಮೀನು ಮಾರುವ ಸ್ಥಿತಿಗೆ ಬಂದಿದೆ. ಡಬಲ್ ಎಂಜಿನ್ ಸರ್ಕಾರ ರೈತರ ನೆರವಿಗೆ ಬರಬೇಕು’ ಎಂದರು.
ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಕುಂದಕೆರೆ ಸಂಪತ್ತು ಮಾತನಾಡಿ, ‘ಮಾರ್ಚ್ ತಿಂಗಳು ಬರುತ್ತಿದ್ದು, ರೈತರು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡಬೇಕಿದೆ. ಅರಿಸಿನದ ಬೆಲೆ ಕುಸಿದಿರುವುದರಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ವೈಜ್ಞಾನಿಕ ಬೆಲೆ ನಿಗದಿ ಮಾಡುವುದರ ಜೊತೆಗೆ, ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಜಾರಿಗೊಳಿಸಿ ತುರ್ತಾಗಿ ಅರಿಸಿನಕ್ಕೆ ಬೆಲೆ ನಿಗದಿ ಪಡಿಸಬೇಕು’ ಎಂದು ಒತ್ತಾಯಿಸಿದರು.
ಸಚಿವ ಸೋಮಣ್ಣ ಮಾತನಾಡಿ, ‘ರೈತರ ಕಷ್ಟ ನನಗೂ ಅರ್ಥವಾಗುತ್ತದೆ. ಅರಿಸಿನ ಬೆಲೆ ಏರಿಕೆ ಸಂಬಂಧ ಬರುವ ಬುಧವಾರದೊಳಗೆ ರೈತರ ಸಭೆ ಕರೆಯುತ್ತೇನೆ. ಬೆಂಬಲ ಬೆಲೆ ಸಂಬಂಧ ಮುಖ್ಯಮಂತ್ರಿಗಳು, ಕೃಷಿ ಹಾಗೂ ಸಹಕಾರ ಸಚಿವರೊಂದಿಗೆ ಚರ್ಚಿಸಿದ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
ರೈತ ಸಂಘದ ಮುಖಂಡರಾದ ಶಿವಪುರ ಮಹದೇವಪ್ಪ, ಅರಿಸಿನ ಬೆಳೆಗಾರರಾದ ಚಿದಾನಂದ, ನೇನೇಕಟ್ಟೆ ಗಂಗಾಧರಪ್ಪ, ಎಚ್.ಎಸ್.ನಂಜುಂಡಸ್ವಾಮಿ ಇತರರು ಇದ್ದರು.
ಹುಲಿ ಯೋಜನೆ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಗ್ರಹ
‘ಬಂಡೀಪುರ ಹುಲಿ ಯೋಜನೆ ಡಾ.ಪಿ.ರಮೇಶ್‍ಕುಮಾರ್ ಅವರು ಟೆಂಡರ್ ಕರೆಯದೆ ಅರಣ್ಯ ಇಲಾಖೆಯಲ್ಲಿ ಕೆಲಸಗಳನ್ನು ನಡೆಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವರ ವಿರುದ್ಧ ಕ್ರಮ ವಹಿಸಬೇಕು’ ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಅಧಿಕಾರಿ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಅವರ ವಿರುದ್ಧ ಮುಖ್ಯಮಂತ್ರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಲಾಗುವುದು. ಪತ್ರವನ್ನೂ ನಿಮಗೂ ಕಳುಹಿಸುವೆ. ರಮೇಶ್‌ಕುಮಾರ್ ವಿರುದ್ಧ ಕ್ರಮವೂ ಆಗುತ್ತದೆ. ಕಾದು ನೋಡಿ’ ಎಂದರು.
ಶಾಸಕ ಸಿ.ಎಸ್.ನಿರಂಜನ ಕುಮಾರ್, ಶಿವಪುರ ಸುರೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.