ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ವರ್ಷಧಾರೆ: ಬೆಳೆ ನಷ್ಟ ಹೆಚ್ಚುವ ಆತಂಕ

ಪ್ರಾಥಮಿಕ ವರದಿ ಪ್ರಕಾರ 1,566 ಹೆಕ್ಟೇರ್‌ನಲ್ಲಿನ ಬೆಳೆ ಹಾನಿ; ರಾಗಿ ಬೆಳೆಗಾರರಿಗೆ ಹೆಚ್ಚು ನಷ್ಟ
Last Updated 17 ನವೆಂಬರ್ 2021, 16:38 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ 15 ದಿನಗಳಿಂದೀಚೆಗೆ ಸುರಿದ ಮಳೆಯಿಂ ದಾಗಿ ಹಲವೆಡೆ ಬೆಳೆ ನಷ್ಟವಾಗಿದ್ದು, ಮಳೆ ಇನ್ನೂ ಐದಾರು ದಿನ ಮುಂದು ವರೆಯಲಿರುವುದರಿಂದ ಇನ್ನಷ್ಟು ಹೆಚ್ಚು ನಷ್ಟವಾಗುವ ಆತಂಕ ರೈತರನ್ನು ಕಾಡುತ್ತಿದೆ.

ಇದೂವರೆಗೆ ಸುರಿದ ಮಳೆಯಿಂ ದಾದ ಬೆಳೆ ಹಾನಿಯ ಪ್ರಾಥಮಿಕ ಸಮೀಕ್ಷೆಯನ್ನು ಕೃಷಿ ಹಾಗೂ ಕಂದಾಯ ಇಲಾಖೆಗಳು ನಡೆಸಿವೆ. 1,566 ಹೆಕ್ಟೇರ್‌ನಷ್ಟು ಜಾಗದಲ್ಲಿ ಬೆಳೆದಿರುವ ಬೆಳೆಗಳಿಗೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಜಿಲ್ಲೆಯಾದ್ಯಂತ ರಾಗಿ ಬೆಳೆಗೆ ಹೆಚ್ಚು ಹಾನಿಯಾಗಿದ್ದು, 1,335 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ರಾಗಿ ನೀರು ಪಾಲಾಗಿದೆ. ಹನೂರು ತಾಲ್ಲೂಕಿನೊಂದರಲ್ಲೇ 1,100 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ರಾಗಿ ನೆಲಕಚ್ಚಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 205 ಹೆಕ್ಟೇರ್‌ನಲ್ಲಿ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 18 ಹೆಕ್ಟೇರ್‌, ಕೊಳ್ಳೇಗಾಲದಲ್ಲಿ 12 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಹಾಳಾಗಿದೆ.

ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರಿನಲ್ಲಿ ರೈತರು 17,266 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಉತ್ತಮ ಮಳೆಯಾಗಿದ್ದರಿಂದ ಫಸಲು ಚೆನ್ನಾಗಿ ಬಂದಿತ್ತು. ಆದರೆ, ಕಟಾವಿನ ಹಂತದಲ್ಲಿ ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ರಾಗಿ ಪೈರು ನೆಲಕ್ಕೆ ಬಾಗಿವೆ. ಇನ್ನೂ ಕೆಲವೆಡೆ ರಾಗಿ ತೆನೆಯಲ್ಲೇ ಮೊಳಕೆಯೊಡೆದಿವೆ.

‘ಈ ಬಾರಿ ರಾಗಿ ಫಸಲು ಚೆನ್ನಾಗಿ ಬಂದಿತ್ತು. ಉತ್ತಮ ಇಳುವರಿ ಸಿಗುವ ನಿರೀಕ್ಷೆ ಇತ್ತು. ಆದರೆ, ಮಳೆಯಿಂದಾಗಿ 1,335 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ಹಾನಿಯಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಗಿಯನ್ನು ಬಿಟ್ಟು ಹಸಿ ಕಡಲೆ ಬೆಳೆ 120 ಹೆಕ್ಟೇರ್‌ (ಗುಂಡ್ಲುಪೇಟೆಯಲ್ಲಿ ಮಾತ್ರ), ಜೋಳ 91 ಹೆಕ್ಟೇರ್‌, 10 ಹೆಕ್ಟೇರ್‌ ಪ್ರದೇಶದಲ್ಲಿ ನೆಲಗಡಲೆ, ಭತ್ತ, ನವಣೆ, ಸಾಮೆ ತಲಾ ಮೂರು ಹೆಕ್ಟೇರ್‌ಗಳಲ್ಲಿ ನಷ್ಟವಾಗಿದೆ. ಒಂದು ಹೆಕ್ಟೇರ್‌ನಷ್ಟು ಅವರೆ ಹಾನಿಗೀಡಾಗಿದೆ.

ನಿಯಮದಂತೆ ಪರಿಹಾರ: ‘ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರದ ಮಾರ್ಗಸೂಚಿಗಳಂತೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಸಿಗಲಿದೆ. ಕೃಷಿ ಹಾಗೂ ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ, ನಷ್ಟದ ನಿಖರ ಮಾಹಿತಿಯನ್ನು ಕಲೆ ಹಾಕಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಚಂದ್ರಕಲಾ ಮಾಹಿತಿ ನೀಡಿದರು.

ಮುಂದುವರೆದ ಮಳೆ...

ಈ ಮಧ್ಯೆ, ಜಿಲ್ಲೆಯ ಹಲವು ಕಡೆಗಳಲ್ಲಿ ಬುಧವಾರವೂ ಮಳೆ ಮುಂದುವರೆದಿದೆ. ಮಧ್ಯಾಹ್ನದವರೆಗೂ ಬಿಡುವು ನೀಡುವ ಮಳೆ ನಂತರ ಸುರಿಯಿತು. ರಾತ್ರಿ ವೇಳೆಯಲ್ಲೂ ಜಿಟಿಜಿಟಿಯಾಗಿ ಬರುತ್ತಿದೆ.

‘ಹೊಲ ಗದ್ದೆಗಳಲ್ಲಿ ನೀರು ನಿಲ್ಲುವುದರಿಂದ ಬೆಳೆಗಳಿಗೆ ತೊಂದರೆಯಾಗುತ್ತಿದೆ. ಜೋರಾಗಿ ಮಳೆ ಬಂದು, ಜಮೀನಿಂದ ನೀರು ಬಸಿದು ಹೋದರೆ ಯಾವುದೇ ಸಮಸ್ಯೆ ಇಲ್ಲ. ಅಥವಾ ಚೆನ್ನಾಗಿ ಮಳೆ ಬಂದ ಮಾರನೇ ದಿನ ಬಿಸಿಲು ಬಂದರೂ ಪೈರುಗಳಲ್ಲಿ, ನೆಲದಲ್ಲಿ ನೀರಿನಂಶ ಇರುವುದಿಲ್ಲ. ಆದರೆ, 10 ದಿನಗಳಿಂದೀಚೆಗೆ ಸರಿಯಾಗಿ ಬಿಸಿಲೇ ಬಿದ್ದಿಲ್ಲ. ಮೋಡ ಕವಿದ ವಾತಾವರಣದ ಜೊತೆಗೆ ಮಳೆಯೂ ಆಗುತ್ತಿರುವುದರಿಂದ ಬೆಳೆ ನಷ್ಟವಾಗುತ್ತಿದೆ’ ಎಂದು ಹೇಳುತ್ತಾರೆ ರೈತರು.

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಇದೇ 21ರವರೆಗೂ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ನವೆಂಬರ್‌ ತಿಂಗಳ ಮೊದಲ 16 ದಿನಗಳಲ್ಲಿ ಜಿಲ್ಲೆಯಲ್ಲಿ 14.67 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT