ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಸಿರಿಧಾನ್ಯ ಬೆಳೆಯಿಂದ ರೈತರು ವಿಮುಖ

Published 26 ಜೂನ್ 2023, 23:30 IST
Last Updated 26 ಜೂನ್ 2023, 23:30 IST
ಅಕ್ಷರ ಗಾತ್ರ

ನಾ.ಮಂಜುನಾಥಸ್ವಾಮಿ

ಯಳಂದೂರು: ಬರದ ಬೆಳೆ ಎಂದು ಕರೆಯಲಾಗುವ ಸಿರಿಧಾನ್ಯಗಳನ್ನು ಬೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಈ ಸಾಲಿನಲ್ಲಿ ಸಿರಿಧಾನ್ಯ ಬೆಳೆಯಲು ರೈತರು ಮುಂದಾಗಿಲ್ಲ. 

ತಾಲ್ಲೂಕಿನ ಕೆಸ್ತೂರು ಮತ್ತು ಹೊನ್ನೂರು ಭಾಗಗಳ ಸಾವಯವ ಕೃಷಿಕರು ಮುಂಗಾರು ಪೂರ್ವ ಹಾಗೂ ಮಳೆಗಾಲದ ಆರಂಭದಲ್ಲಿ ಬಿತ್ತನೆ ಮಾಡುತ್ತಿದ್ದರು. ಆದರೆ, ಕಳೆದ ಬಾರಿ ಹೆಚ್ಚಾದ ನೆರೆ ಮತ್ತು ನಿರ್ವಹಣೆ ಕೊರತೆಯಿಂದ ಭೂಮಿ ಸಿದ್ಧತೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.  

ನೀರಾವರಿ ಕೊರತೆ ಇರುವ ಪ್ರದೇಶದಲ್ಲಿ ರೈತರು ಸಜ್ಜೆ, ನವಣೆ, ಊದಲು, ಹಾರಕ, ಕೊರಲೆ, ಸಾಮೆ ಬೆಳೆಯುತ್ತಿದ್ದರು. ಕಿರುಧಾನ್ಯ ಮಾನ್ಯತೆ ಪಡೆದ ರಾಗಿ, ಬಿಳಿ ಜೋಳಕ್ಕೂ ಆದ್ಯತೆ ನೀಡುತ್ತಿದ್ದರು. ಆದರೆ, ಈಗ ವರ್ಷದಿಂದ ವರ್ಷಕ್ಕೆ ಸಿರಿಧಾನ್ಯ ಬೆಳೆಯುವ ತಾಕು ಕುಸಿಯುತ್ತಿದ್ದು, ಕಬ್ಬು, ಮುಸುಕಿನ ಜೋಳ ನಾಟಿಗೆ ರೈತರು ಒಲವು ತೋರುತ್ತಿದ್ದಾರೆ. 

ಸಿರಿಧಾನ್ಯಗಳ ಮಹತ್ವದ ಬಗ್ಗೆ ರೈತರಿಗೆ ತಿಳಿದಿಲ್ಲ. ಅರೆ ನೀರಾವರಿ ಪ್ರದೇಶದಲ್ಲಿ ಸಿರಿದಾನ್ಯ ಬೆಳೆಸುವ ಬಗ್ಗೆ ಕೃಷಿ ಇಲಾಖೆ ಜಾಗೃತಿ ಮೂಡಿಸಬೇಕು.
ಮಹೇಶ್‌ ಮಾಂಬಳ್ಳಿ, ಕೃಷಿಕ

‘ಅತ್ಯಲ್ಪ ಮಳೆ ಬೀಳುವ ಪ್ರದೇಶದಲ್ಲೂ ಕಿರು ಧಾನ್ಯ ಬೆಳೆಸಬಹುದು. ಕೆಲ ವಾರ ಮಳೆ ಕೊರತೆ ಬಾಧಿಸಿದರೂ, ಬೆಳೆ ತಡೆಯುತ್ತದೆ. ಪಟ್ಟಣ ಪ್ರದೇಶದಲ್ಲಿ ಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಬೆಳೆಗಾರರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಸಿರಿಧಾನ್ಯ ಬೆಳೆಗಾರ ಮತ್ತು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.

‘ಹಿಂದೆ ನೈಸರ್ಗಿಕ ವಿಧಾನದಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದರು. ಇದನ್ನು ಉತ್ತೇಜಿಸಲು ಸರ್ಕಾರ ಪ್ರಯತ್ನಿಸಿವೆ. ಮಳೆ ಕೊರತೆ, ಬಿತ್ತನೆ ಬಗ್ಗೆ ಅರಿವು ಇಲ್ಲದಿರುವುದು, ಬೀಜದ ಕೊರತೆ, ಮಾರುಕಟ್ಟೆ ಸಮಸ್ಯೆ ಇವೇ ಮೊದಲಾದ ಸಮಸ್ಯೆಗಳಿಂದಾಗಿ ರೈತರು ಸಿರಿಧಾನ್ಯಗಳತ್ತ ಮುಖ ಮಾಡುತ್ತಿಲ್ಲ’ ಎಂದು ಕೆಸ್ತೂರು ಗ್ರಾಮದ ರೈತ ಜವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.  

‘ತಾಲ್ಲೂಕಿನ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತದೆ. ಈ ಜಾಗದ ಸಿಂಹಪಾಲು ವಾಣಿಜ್ಯ ಕೃಷಿಗೆ ಬಳಕೆ ಆಗುತ್ತಿದೆ. ಸಿರಿಧಾನ್ಯ ಬಿತ್ತನೆಗೆ ಶೇ 0.25 ಪ್ರದೇಶ ಮಾತ್ರ ಉಳಿದಿದೆ. ಜುಲೈ ನಂತರ ಕೃಷಿ ಇಲಾಖೆ ಬಿತ್ತನೆ ಬೀಜ ವಿತರಿಸುವ ಗುರಿ ಹೊಂದಿದೆ. ಅಕಾಲಿಕ ಮತ್ತು ಅನಿರೀಕ್ಷಿತ ಮಳೆಯ ವ್ಯತ್ಯಾಸವೂ ಬಿತ್ತನೆ ಪ್ರಮಾಣ ನಿರ್ಧರಿಸಲಿದೆ’ ಎಂದು ಹೇಳುತ್ತಾರೆ ಕೃಷಿ ಅಧಿಕಾರಿಗಳು.

ಕೊಯ್ಲೋತ್ತರ ಸಮಸ್ಯೆ

‘ಸಿರಿಧಾನ್ಯವನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಆದರೆ, ಕೊಯ್ಲೋತ್ತರ ಸಮಸ್ಯೆ ಎದುರಾಗುತ್ತದೆ. ಗಿಡದಿಂದ ಕಾಳನ್ನು ಸಂಸ್ಕರಿಸುವ ಯಂತ್ರಗಳು ಇಲ್ಲಿಲ್ಲ. ಕಡಿಮೆ ಸಂಖ್ಯೆಯ ರೈತರು ಇವುಗಳನ್ನು ಬೆಳೆಯುವುದರಿಂದ ಯಂತ್ರಗಳನ್ನು ಸ್ಥಾಪಿಸಲು ಯಾರೂ ಮುಂದಾಗಿ‌ಲ್ಲ’ ಎಂದು ಕೃಷಿಕ ಮಾಂಬಳ್ಳಿ ಮಹೇಶ್ ಹೇಳಿದರು.

ಹಿಡುವಳಿ ವಿಸ್ತರಿಸಲು ‘ಶ್ರೀಅನ್ನ’ ಯೋಜನೆ ಜಾರಿ

‘ಸಿರಿಧಾನ್ಯ ಹಿಡುವಳಿ ವಿಸ್ತರಿಸಲು ಕೇಂದ್ರ ಸರ್ಕಾರ ‘ಶ್ರೀಅನ್ನ’ ಯೋಜನೆ ಜಾರಿಗೆ ತಂದಿದೆ. ಸಿರಿಧಾನ್ಯ ಉತ್ಪನ್ನ ಹೆಚ್ಚಿಸಲು ಪ್ರೋತ್ಸಾಹಧನ ನೀಡುತ್ತದೆ. ಹೈದರಾಬಾದ್‌ನಲ್ಲಿ  ಸಿರಿಧಾನ್ಯ ಸಂಶೋಧನಾ ಕೇಂದ್ರ ಸ್ಥಾಪಿಸಿ ರೈತರಿಗೆ ತಾಂತ್ರಿಕ ನೆರವು ನೀಡುತ್ತಿದೆ. ರಾಜ್ಯ ಸರ್ಕಾರ ರೈತಸಿರಿ ಹೆಸರಿನಲ್ಲಿ ₹ 10 ಸಾವಿರ ಪ್ರೋತ್ಸಾಹ ಧನ ಘೋಷಿಸಿದೆ. ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇತರೆ ಧಾನ್ಯಗಳಿಗಿಂತ ಹೆಚ್ಚಿನ ಆದಾಯವೂ ಕೈಸೇರುತ್ತದೆ. ಮಧುಮೇಹ ನಿಯಂತ್ರಣ ಹಾಗೂ ಪೌಷ್ಟಿಕ ಆಹಾರದ ಗುಣಗಳ ಆಗರವಾದ ಸಿರಿಧಾನ್ಯವನ್ನು ಬೆಳೆಯಲು ರೈತರು ಮುಂದೆ ಬರಬೇಕು’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT