ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಹರಿದು ರೈತರ ಸಾವು: ಕೇಂದ್ರದ ವಿರುದ್ಧ ಆಕ್ರೋಶ

ರೈತರಿಂದ ರಸ್ತೆ ತಡೆ, ಸಂಪುಟದಿಂದ ಸಚಿವ ಅಜಯ್‌ ಮಿಶ್ರಾ ವಜಾಕ್ಕೆ ಆಗ್ರಹ
Last Updated 4 ಅಕ್ಟೋಬರ್ 2021, 15:55 IST
ಅಕ್ಷರ ಗಾತ್ರ

ಚಾಮರಾಜನಗರ: ಉತ್ತರ ಪ್ರದೇಶದ ಲಖಿಂಪುರ್‌–ಖಾರಿ ಜಿಲ್ಲೆಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಬೆಂಗವಲು ಪಡೆಯ ಎರಡು ವಾಹನಗಳು ಹರಿದು ಪ್ರತಿಭಟನನಿರತ ನಾಲ್ವರು ರೈತರು ಮೃತಪಟ್ಟಿರುವುದನ್ನು ಖಂಡಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಸಂತೇಮರಹಳ್ಳಿ ರಸ್ತೆಯಲ್ಲಿ ಜಾಲಹಳ್ಳಿಹುಂಡಿ ಬಳಿ ರಾಷ್ಟ್ರೀಯ ಹೆದ್ದಾರಿ 209 ಅನ್ನು 20 ನಿಮಿಷಕ್ಕೂ ಹೆಚ್ಚು ಕಾಲ ತಡೆದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೊಲೆಗಡುಕ ಸರ್ಕಾರ: ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು ಮಾತನಾಡಿ, ‘ಕೇಂದ್ರ ಗೃಹ ಖಾತೆ ರಾಜ್ಯ ಖಾತೆ ಸಚಿವ ಅಜಯ ಮಿಶ್ರಾ ಅವರ ಮಗ ಇರುವ ಹಾಗೂ ಅವರ ಬೆಂಗಾವಲಿನ ವಾಹನವನ್ನು ಪ್ರತಿಭಟನೆ ನಿರತ ರೈತರ ಮೇಲೆ ಹತ್ತಿಸಿ ಕೊಲೆ ಮಾಡಲಾಗಿದೆ. ಕೇಂದ್ರದಲ್ಲಿರುವುದು ಕೊಲೆಗಡುಕ ಸರ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಜಯ್‌ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ಇದನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

‘ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವುದರಲ್ಲಿ ವಿಫಲವಾಗಿದೆ. ತಪ್ಪು ದಾರಿಯಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರವನ್ನು ಸರಿದಾರಿಗೆ ತರಲು ರೈತರು 10 ತಿಂಗಳುಗಳಿಂದ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಳವಳಿ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ರೈತರ ಪರ ನಿಲುವು ತೋರದೆ ಬಂಡವಾಳಶಾಹಿಗಳ ಪರವಾಗಿ ಕಾನೂನು ರೂಪಿಸಿ ಕಾರ್ಪೊರೇಟ್‌ ಗುಲಾಮಗಿರಿ ಮಾಡುತ್ತಿದೆ’ ಎಂದು ದೂರಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪಟೇಲ್‌ ಶಿವಮೂರ್ತಿ, ಮೂಡಲ ಪುರ ನಾಗರಾಜು, ಹಾಡ್ಯ ರವಿ, ಪ್ರಸಾದ್ ಉಡಿಗಾಲ, ಮಹದೇವಸ್ವಾಮಿ, ಗುರುಪ್ರಸಾದ್, ಮಂಜು, ಮೂಕಹಳ್ಳಿ ಮಾದೇಸ್ವಾಮಿ, ಚಿನ್ನಸ್ವಾಮಿ ಮರಿಯಾಲ, ಮಹೇಶ್, ಹೊನ್ನೇಗೌಡ, ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT