ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಖಾಸಗೀಕರಣ: ಕೇಂದ್ರದ ವಿರುದ್ಧ ಆಕ್ರೋಶ

ಚಾಮರಾಜನಗರ: ರೈತ ಸಂಘಟನೆಗಳ ಪ್ರತಿಭಟನೆ
Last Updated 10 ಆಗಸ್ಟ್ 2021, 11:20 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರವು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಎರಡು ಬಣಗಳು, ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಒಟ್ಟಾಗಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ನಗರದ ಸಂತೇಮರಹಳ್ಳಿ ರಸ್ತೆಯ (ರಾಷ್ಟ್ರೀಯ ಹೆದ್ದಾರಿ 209) ರೇಷ್ಮೆ ಕಾರ್ಖಾನೆಯ ಬಳಿ ಸೇರಿದಮೂರೂ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ, ವಾಹನಗಳ ಸಂಚಾರ ತಡೆದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಅವರು ಮಾತನಾಡಿ, ‘ವಿದ್ಯುತ್‌ ವಲಯವನ್ನು ಖಾಸಗಿಯವರಿಗೆ ನೀಡಿ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ಭವಿಷ್ಯದಲ್ಲಿ ಎಲ್ಲ ಹಕ್ಕುಗಳನ್ನು ಖಾಸಗಿ ಕಂಪನಿಗಳಿಗೆ ನೀಡಿ ರೈತರನ್ನು ಗುಲಾಮರನ್ನಾಗಿ ಮಾಡುವ ಕುತಂತ್ರ ಇದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈಲ್ವೆ, ಬ್ಯಾಂಕುಗಳು ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಜನರನ್ನು ಕಾರ್ಪೊರೇಟ್‌ ಕಂಪನಿಗಳ ಗುಲಾಮರನ್ನಾಗಿ ಮಾಡುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆರೆ ಏರುತ್ತಿದ್ದರೂ ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ. ಕೇಂದ್ರ ಸರ್ಕಾರವು ಮಾಡುತ್ತಿರುವ ಕಾನೂನುಗಳು ಕಾರ್ಪೊರೇಟ್‌ ಕೃಷಿಗೆ ಪ್ರೋತ್ಸಾಹ ನೀಡಿ, ಸಣ್ಣ ರೈತರು ಕೃಷಿಯಿಂದ ವಿಮುಖರಾಗುವಂತೆ ಇವೆ’ ಎಂದು ದೂರಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್‌ ಪ್ರಭು ಅವರು ಮಾತನಾಡಿ, ‘ಸರ್ಕಾರಗಳು ದೇಶದ ನಾಗರಿಕರ ಪರವಾಗಿ ಕೆಲಸ ಮಾಡುತ್ತಿಲ್ಲ. ಪೆಟ್ರೋಲಿಯಂ ಕಂಪನಿಗಳು, ಬ್ಯಾಂಕುಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ಯಾವ ರೈತರಿಗೂ ವ್ಯವಸಾಯ ಮಾಡಲು ಆಗುವುದಿಲ್ಲ. ರಾಜ್ಯದಲ್ಲಿ 3–4 ಕೋಟಿ ಜನರು ನೀರಾವರಿಯನ್ನು ಅವಲಂಬಿಸಿದ್ದಾರೆ. ಶೇ 50ರಷ್ಟು ಜನರು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಸರ್ಕಾರ ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಸಂಚಾರ ಅಸ್ತವ್ಯಸ್ತ: ಪ್ರತಿಭಟನಾಕಾರರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು. ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂದಿದ್ದವು.ನಂತರ ಪೊಲೀಸರು, ರೈತ ಮುಖಂಡರನ್ನು ಮನವೊಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ರೈತ ಸಂಘದ ಒಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಇನ್ನೊಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಮುಖಂಡರಾದ ಹೊನ್ನೂರು ಬಸವಣ್ಣ, ಇತರರು ಇದ್ದರು.

ಪ್ರತಿಭಟನಾ ರ‍್ಯಾಲಿ, ಮನವಿ

ರೈತ ಸಂಘದ ಇನ್ನೊಂದು ಬಣವು ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರ ನೇತೃತ್ವದಲ್ಲಿ ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರಿಪೇಯ್ಡ್‌ ಮೀಟರ್‌ ಅಳವಡಿಸುವುದನ್ನು ಖಂಡಿಸಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿತು.

ಪ್ರವಾಸಿ ಮಂದಿರದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡೀವಿಯೇಷನ್‌ ರಸ್ತೆ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಸಾಗಿ ಜಿಲ್ಲಾಡಳಿತ ಭವನ ತಲುಪಿತು.

‘ಮೋದಿ ಸರ್ಕಾರವು ಕೋವಿಡ್‌–19 ಪರಿಸ್ಥಿತಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಅನೇಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ಈ ಮೂಲಕ ದೇಶದ ರೈತರ ಆಹಾರ ಸಾರ್ವಭೌಮತ್ವವನ್ನು ಕಸಿದುಕೊಳ್ಳಲು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

‘ಈಗ ರೈತರನ್ನು ವ್ಯವಸ್ಥಿತವಾಗಿ ಮಟ್ಟಹಾಕಿ ಕಾರ್ಪೊರೇಟ್‌ ಕಂಪನಿಗಳಿಗೆ ವ್ಯವಸಾಯದ ಜಮೀನನ್ನು ನೀಡುವ ಉದ್ದೇಶದಿಂದ ವಿದ್ಯುತ್‌ ಕ್ಷೇತ್ರವನ್ನೂ ಖಾಸಗೀಕರಣ ಮಾಡುವ ಪ್ರಯತ್ನ ನಡೆಯತ್ತಿದೆ. ರೈತರ ಹಿತವನ್ನು ಕಾಪಾಡಲು ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ಮಸೂದೆಯನ್ನು ತಕ್ಷಣವೇ ವಾಪಸ್‌ ಪಡೆಯಬೇಕು ಎಂದು ರಾಷ್ಟ್ರಪತಿ ಅವರು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌, ಮುಖಂಡರಾದ ಹೊನ್ನೂರು ಬಸವಣ್ಣ, ಮಹದೇವಸ್ವಾಮಿ, ರವಿಕುಮಾರ್‌, ಜಯಪ್ಪ, ಮಹೇಂದ್ರ ಎಂ., ದಿಲೀಪ್‌ಕುಮಾರ, ವೀರಭದ್ರಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT