ಮಂಗಳವಾರ, ಮೇ 17, 2022
27 °C

ದೀಪು ಸಿಧುವನ್ನು ಗಲ್ಲುಗೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜನವರಿ 26ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಆರೋಪಿ ಬಂಧಿತ ದೀಪು ಸಿಧು ಅವರನ್ನು ಗಲ್ಲಿಗೆ ಏರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ದಿಢೀರ್‌ ಪ್ರತಿಭಟನೆ ನಡೆಸಿದರು. 

ದೀಪು ಸಿಧು ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರತಿಭಟನೆ ನಡೆಸಲು ನಿರ್ಧರಿಸಿದ ರೈತರು ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ ದೀಪು ಸಿಧು ವಿರುದ್ಧ ಘೋಷಣೆಗಳನ್ನು ಕೂಗಿದರು.  

‘ಜನವರಿ 26ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ ಹಿಂಸಾಚಾರ ನಡೆಸಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ ದೀಪು ಸಿದು ಅವರಿಗೆ ಮರಣದಂಡನೆ ವಿಧಿಸಬೇಕು’ ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಮೈಸೂರು–ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು, ‘ದೆಹಲಿಯಲ್ಲಿ ಎರಡು ತಿಂಗಳಿನಿಂದ ಶಾಂತಿಯುತ ನಡೆಯುತ್ತಿದ್ದ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಚಳವಳಿಗೆ ಬಂದ ದೀಪು ಸಿದು ಅವರು ಹೋರಾಟಗಾರರು ಹಾಗೂ ಸರ್ಕಾರ ನಡುವೆ ಮಾತುಕತೆಯ ವಿಚಾರವನ್ನು ಧಿಕ್ಕರಿಸಿ ತನ್ನದೇ ಆದ ದುಷ್ಟಕೂಟವನ್ನು ಕಟ್ಟಿ ಹೈಜಾಕ್ ಮಾಡಿ ರೈತರ ಹೋರಾಟಕ್ಕೆ ಕಪ್ಪು ಚುಕ್ಕಿ ಉಂಟು ಮಾಡಲು ಯತ್ನಿಸಿದ್ದಾರೆ’ ಎಂದು ದೂರಿದರು. 

‘ಬಂಧನಕ್ಕೆ ಒಳಗಾಗಿರುವ ದೀಪು ಅವರು ರಾಜಕೀಯ ಕಾರಣಕ್ಕೆ ಅಥವಾ ವೈಯಕ್ತಿಕ ಪ್ರಚಾರಕ್ಕಾಗಿಯೂ ಈ ಕೃತ್ಯ ಮಾಡಿರಬಹುದು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಸಬೇಕು. ಈ ಕೃತ್ಯ ಎಸಗಿರುವ ಎಲ್ಲರನ್ನೂ ಕೆಂಪುಕೋಟೆ ಮುಂದೆ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಶಾಂತಿಯುತ ರೈತ ಚಳವಳಿಯ ದಿಕ್ಕುತಪ್ಪಿಸಿ ದೇಶದ್ರೋಹದ ಕೆಲಸ ಮಾಡುವವರಿಗೆ ಇದು ಎಚ್ಚರಿಕೆ ಗಂಟೆಯಾಗಬೇಕು’ ಎಂದರು.

ನಾಗರಾಜು ಮೂಡ್ಲಪುರ, ಪಟೇಲ್ ‌ಶಿವಮೂರ್ತಿ, ರೇವಣ್ಣ, ಕುರುಬೂರು ಸಿದ್ದೇಶ್, ಶಿವಮಲ್ಲಪ್ಪ, ಎಸ್.ನಾಗರಾಜು ಮರಿಯಾಲ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು