ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಕೊಯ್ಲಿಗೆ ಬಂದ ಭತ್ತ: ಖರೀದಿ ಕೇಂದ್ರದತ್ತ ಚಿತ್ತ

ಮಳೆಯಿಂದಾಗಿ ಕಟಾವಿಗೆ ಹಿನ್ನಡೆ; ಬಿಸಿಲು ಬಂದ ನಂತರ ಕೊಯ್ಲಿಗೆ ಸಿದ್ಧತೆ
Last Updated 24 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಯಳಂದೂರು:ಮುಂಗಾರಿನಲ್ಲಿ ನಾಟಿಯಾದ ಭತ್ತ ಕೊಯ್ಲಿಗೆ ಬಂದಿದೆ. ಮಳೆಯ ಕಾರಣಕ್ಕೆ ಕಟಾವು ಸ್ವಲ್ಪ ವಿಳಂಬವಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರ ಇನ್ನೂ ಕ್ರಮ ಕೈಗೊಳ್ಳದಿರುವುದು ರೈತರನ್ನು ಚಿಂತೆಗೆ ದೂಡಿದೆ.

ಪ್ರತಿ ವರ್ಷವೂ ಖರೀದಿ ಕೇಂದ್ರ ತೆರೆಯಲು ಸರ್ಕಾರ ವಿಳಂಬ ಮಾಡುತ್ತದೆ. ಕೇಂದ್ರ ಆರಂಭವಾಗುವುದಕ್ಕೂ ಮುನ್ನ ಬಹುತೇಕ ರೈತರು ಭತ್ತವನ್ನು ಮಾರಾಟ ಮಾಡುತ್ತಾರೆ. ಈ ವರ್ಷವಾದರೂ ಕಟಾವು ಆರಂಭವಾಗುವಾಗಲೇ ಖರೀದಿ ಕೇಂದ್ರ ತೆರೆಯಬೇಕು ಎಂಬುದು ರೈತರ ಆಗ್ರಹ.

ನಿರಂತರ ಮಳೆಯಾಗಿದ್ದರಿಂದ ಜಿಲ್ಲೆಯಾದ್ಯಂತ ರಾಗಿ ಬೆಳೆಗೆ ಹಾನಿಯಾಗಿತ್ತು. ಗದ್ದೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಭತ್ತದ ಬೆಳೆಗೂ ಹಾನಿಯಾಗುವ ಆತಂಕವನ್ನು ರೈತರು ಎದುರಿಸಿದ್ದರು. ಆದರೆ, ನಾಲ್ಕೈದು ದಿನಗಳಿಂದ ಮಳೆಯಾಗದಿರುವುದು ಅವರ ಆತಂಕವನ್ನು ದೂರ ಮಾಡಿದೆ. ಜಮೀನಿನಲ್ಲಿ ನೀರಿನ ತೇವಾಂಶ ಆರಲು ಆರಂಭಿಸಿದ್ದು, ರೈತರು ಕಟಾವು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

'ಭತ್ತವನ್ನು ಕೊಯ್ಲು ಮಾಡುವ ಸಮಯ ಈಗಾಗಲೇ ಆಗಿದೆ. ಇನ್ನೂ ಮಳೆ ಬಂದರೆ ಭತ್ತದ ಇಳುವರಿ ಕುಸಿಯಲಿದೆ. ಅಕ್ಕಿಗಾಗಿ ಖರೀದಿಸುವವರು ಅರ್ಧ ಬೆಲೆಗೆ ಕೇಳುತ್ತಾರೆ. ತೇವಾಂಶ ಹೆಚ್ಚಾದರೆ, ಭತ್ತವನ್ನು ಕೆಲ ಸಮಯ ಇಡಲು ಗ್ರಾಮೀಣ ಭಾಗದ ಕೃಷಿಕರಿಗೆ ಸ್ಥಳಾಭಾವ ಉಂಟಾಗುತ್ತದೆ’ ಎಂದು ಹೊನ್ನೂರಿನ ರೈತ ಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ತುಳಸಿ ಹಬ್ಬದ ನಂತರ ಭತ್ತ ಕೊಯ್ಲಿಗೆ ರೈತರು ಮುಂದಾಗುತ್ತಿದ್ದರು. ಮಳೆ ಬಂದಿದ್ದರಿಂದ ಕಟಾವಿಗೆ ಹಿನ್ನಡೆಯಾಗಿದೆ. ಬಹುಬೇಗ ಖರೀದಿ ಕೇಂದ್ರಆರಂಭಿಸಿದರೆ ರೈತರಿಗೆ ಪ್ರಯೋಜನ ಆಗಲಿದೆ’ ಎಂದು ಅವರು ಹೇಳಿದರು.

‘ಶೇ 90ಕ್ಕೂ ಹೆಚ್ಚಿನ ಸಂಖ್ಯೆಯ ಸಣ್ಣ ಹಿಡುವಳಿದಾರರು ಇದ್ದಾರೆ. ಬೇಗ ಭತ್ತ ಖರೀದಿ ಕೇಂದ್ರ ಆರಂಭ ಆಗದಿದ್ದರೆ, ಮತ್ತಷ್ಟು ನಷ್ಟ ಆಗಲಿದೆ. ಕಳೆದ ವರ್ಷ ಕ್ವಿಂಟಲ್‌ಗೆ ₹ 1,868 ಬೆಂಬಲ ಬೆಲೆ ನಿಗದಿ ಮಾಡಲಾಗಿತ್ತು. ಈ ವರ್ಷ ₹ 1,940ಕ್ಕೆ ಸಚಿವ ಸಂಪುಟಅನುಮೋದನೆ ನೀಡಿದೆ. ಧಾರಣೆ ಏರಿಕೆ ಆಗಿದ್ದರೂ ಖರೀದಿ ಕೇಂದ್ರವನ್ನು ಇನ್ನೂ ನಿಗದಿ ಮಾಡಿಲ್ಲ. 2020ರಲ್ಲೂ ಕೊನೆ ಹಂತದಲ್ಲಿ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಆ ವೇಳೆಗೆ ಬೇಸಾಯಗಾರರು ಖಾಸಗಿ ವ್ಯಕ್ತಿಗಳಿಗೆ ಭತ್ತ ಮಾರಾಟ ಮಾಡಿದ್ದರು' ಎಂದುಕೆಸ್ತೂರು ನಾಗರಾಜು ತಿಳಿಸಿದರು.

ಎಲ್ಲ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರವನ್ನು ಕೊಯ್ಲಿಗೂ ಮೊದಲು ಆರಂಭ ಮಾಡಬೇಕು ಎಂಬುದು ಅನ್ನದಾತರ ಒತ್ತಾಯ.

ಗುರಿ ಮೀರಿದ ಸಾಧನೆ, ಬಂಗಾರದ ಬೆಳೆ

ಜಿಲ್ಲೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಬಾರಿಯ ಮುಂಗಾರಿನಲ್ಲಿ 10,400 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. 10,600 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

ಮುಂಗಾರು ಮಳೆ ಮತ್ತು ಕಾಲುವೆ ನೀರಿನ ಸಮೃದ್ಧತೆಯಿಂದ ಬಂಗಾರದ ಬೆಳೆ ಅರಳಿದೆ. ಮಿನಿಲಾಂಗ್, ಸಿದ್ದಸಣ್ಣ, ಜೋತಿ ಮತ್ತಿತರ ತಳಿಯ ಭತ್ತ ಬೆಳೆದಿದ್ದು, ರೋಗ-ರುಜಿನದ ಕಾಟ ತಪ್ಪಿದೆ. ಎಲ್ಲ ಕಡೆಗಳಲ್ಲೂ ಹೊಂಬಣ್ಣಕ್ಕೆ ತಿರುಗಿರುವ ಭತ್ತ ಗದ್ದೆಗಳಲ್ಲಿ ತೊನೆದಾಡುತ್ತಿದ್ದು, ಕಟಾವಿಗೆ ಸಿದ್ಧವಾಗಿದೆ.

––

ಭತ್ತ ಖರೀದಿಗಾಗಿ ರೈತರ ನೋಂದಣಿ ಮಾಡಲು ಸೂಚನೆ ಬಂದಿದ್ದು, ಕಾರ್ಯ ಪಡೆಯ ಸಭೆ ನಡೆಸಿ, ಕೇಂದ್ರಗಳನ್ನು ತೆರೆಯಲಾಗುವುದು
ಯೋಗಾನಂದ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT