ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಮಳೆ ಕೊರತೆ, ತೆಂಗು ನಾಟಿಗೆ ಕೃಷಿಕರ ಹಿಂದೇಟು!

ನರೇಗಾ ನೆರವು: 8 ಸಾವಿರ ಸಸಿ ವಿತರಣೆಗೆ ಇಲಾಖೆ ಸಿದ್ಧತೆ
Published 13 ಆಗಸ್ಟ್ 2023, 7:23 IST
Last Updated 13 ಆಗಸ್ಟ್ 2023, 7:23 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ತೋಟಗಾರಿಕಾ ಇಲಾಖೆ ತೆಂಗು ಸಸಿ ವಿತರಿಸಲು ಯೋಜನೆ ರೂಪಿಸಿದ್ದು, 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಉತ್ತಮ ನಾಟಿ ತಳಿಯ ತೆಂಗು ವಿತರಿಸಲು ಸಿದ್ಧತೆ ನಡೆಸಿದೆ.

ತಾಲ್ಲೂಕಿನಲ್ಲಿ 750 ಹೆಕ್ಟೇರ್ ಪ್ರದೇಶ ತೆಂಗು ಬೆಳೆಯನ್ನು ಆಕ್ರಮಿಸಿದೆ. ತೆಂಗು ಬೆಳೆಗೆ ಬೇಕಾದ ಹಿತಕರ ವಾತಾವರಣ ಮತ್ತು ಉತ್ತಮ ಮಣ್ಣು ಇಲ್ಲಿದೆ. ನೀರಾವರಿ, ಕಾಲುವೆ ಮತ್ತು ಮಳೆ ಆಶ್ರಯಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿನ ತೆಂಗು ಮತ್ತು ಎಳೆನೀರಿಗೆ ಹೆಚ್ಚಿನ ಬೇಡಿಕೆ ಇದ್ದು, ಉತ್ತಮ ವರಮಾನವೂ ರೈತರ ಕೈಸೇರುತ್ತದೆ.

ಬೆಳೆಗಾರರು ಈಚಿನ ದಿನಗಳಲ್ಲಿ ವಿವಿಧ ನಾಟಿ ಮತ್ತು ಹೈಬ್ರೀಡ್ ಡ್ವಾರ್ಫ್ ತಳಿಗಳನ್ನು ಮಾರುಕಟ್ಟೆಯಲ್ಲಿ ಕೊಂಡು ನಾಟಿ ಮಾಡುತ್ತಿದ್ದಾರೆ. 3–4 ವರ್ಷಗಳಲ್ಲಿ ಫಲ ನೀಡುವ ಸಸಿಗಳು ಮಾರಾಟಕ್ಕೆ ಬಂದಿವೆ. ಇವು ಎಳನೀರು ಪಡೆಯಲು ಬಳಕೆಯಾದರೆ, ಐದಾರು ವರ್ಷಕ್ಕೆ ಫಲ ಬಿಡುವ ಎಲ್ಲ ಹವಾಮಾನ, ನೀರಿಗೂ ಹೊಂದಿಕೊಳ್ಳುವ ದೀರ್ಘ ಕಾಲ ಬದುಕುವ ನಾಟಿ ಸಸಿಗಳನ್ನು ತೆಂಗಿನ ಕಾಯಿ ಪಡೆಯಲು ನಾಟಿ ಮಾಡಲಾಗುತ್ತದೆ.

ನಾಟಿಗೆ ಹಿಂದೇಟು: ‘ಈ ಸಲ ಮುಂಗಾರು ಮಳೆ ಕೊರತೆ ಬಾಧಿಸಿದೆ. ಭೂಮಿ ತಂಪಾಗಿಲ್ಲ. ಜಮೀನು ಹದ ಮಾಡಲು ಬೇಸಾಯಗಾರ ಮನಸ್ಸು ಮಾಡಿಲ್ಲ. ತೆಂಗು, ಕಂಗು, ಹಣ್ಣಿನ ಗಿಡ ನೆಡಲು ಯಾವುದೇ ಯೋಜನೆ ರೂಪಿಸಿಲ್ಲ. ಹಾಗಾಗಿ, ಭೂಮಿಯನ್ನು ಬಿತ್ತನೆಗೆ ಅಣಿ ಮಾಡಿದ್ದೇವೆ. ಮಳೆ ಕೈಕೊಟ್ಟರೆ, ತೆಂಗು ಹಾಕಿದರೂ ಪ್ರಯೋಜನ ಇಲ್ಲ. ಹಾಗಾಗಿ, ಬಿತ್ತನೆ ಅವಧಿಯನ್ನು ಮುಂದೂಡಿದ್ದೇವೆ’ ಎನ್ನುತ್ತಾರೆ ಮಲಾರಪಾಳ್ಯ ರೈತ ಪ್ರದೀಪನಾಯಕ್.

ನರೇಗಾ ನೆರವು: ರಾಜು ರೈತರಿಗೆ ಈ ಬಾರಿ 8 ಸಾವಿರ ನಾಟಿ ತೆಂಗಿನ ಗಿಡ ವಿತರಿಸಲು ಸಿದ್ಧತೆ ನಡೆಸಲಾಗಿದೆ. ಗಿಡಕ್ಕೆ ₹75 ದರ ನಿಗದಿ ಪಡಿಸಲಾಗಿದೆ. ಆದರೆ ರೈತರಿಂದ ಇನ್ನೂ ನಿರೀಕ್ಷಿಸಿದಷ್ಟು ಬೇಡಿಕೆ ಬಂದಿಲ್ಲ. ಕೃಷಿಕರಿಗೆ ನರೇಗಾ ಯೋಜನೆಯಡಿ ತೆಂಗು ಅಭಿವೃದ್ಧಿಗೆ ಒಳಪಡುವ ತಾಕಿನಲ್ಲಿ ಕಳೆ ಕುರುಚಲು ಗಿಡ ತೆರವು ಗುಂಡಿ ತೆಗೆಯುವುದು ಮುಚ್ಚುವುದು ಮಣ್ಣು ಗೊಬ್ಬರ ಸುರಿಯುವುದು ನೀರು ಸಂರಕ್ಷಣೆ ಬಂಡ್ ನಿರ್ಮಾಣ ಜೀವಂತ ಬೇಲಿ ನಿರ್ಮಾಣ ಸಸಿ ನಿರ್ವಹಣೆಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಡಿ ನೆರವು ಕಲ್ಪಿಸಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT