ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ: 24,375 ರೈತರ ನೋಂದಣಿ

ಜುಲೈ 31ರಂದು ಕಂತು ಪಾವತಿಸಲು ಕೊನೆಯ ದಿನಾಂಕ, ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ರೈತರಿಂದ ಅರ್ಜಿ
Last Updated 5 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಗೆ (ಬೆಳೆ ವಿಮೆ) ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ 24,375 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ ದುಪ್ಪಟ್ಟು ಹೆಚ್ಚಳವಾಗಿದೆ. 2018ರಲ್ಲಿ 10,052 ರೈತರು ನೋಂದಣಿ ಮಾಡಿಕೊಂಡಿದ್ದರು.

ಮಳೆ ಆಶ್ರಿತ ಮತ್ತು ನೀರಾವರಿ ಆಶ್ರಿತವಾದ 16 ಬೆಳೆಗಳಿಗೆ ಫಸಲ್‌ ಬಿಮಾ ಯೋಜನೆ ಅನ್ವಯವಾಗುತ್ತದೆ. ವಿವಿಧ ಬೆಳೆಗಳಿಗೆ ವಿಮೆ ಕಂತು ಪಾವತಿಸಲು ಬೇರೆ ಬೇರೆ ಗಡುವುಗಳನ್ನು ನಿಗದಿ ಪಡಿಸಲಾಗಿತ್ತು. ತೊಗರಿ, ಹುರುಳಿ, ಭತ್ತ, ರಾಗಿ ಮತ್ತು ಹತ್ತಿ ಬೆಳೆಗಳಿಗೆ ಕಂತು ಪಾವತಿಸಲು ಜುಲೈ 31ರಂದು ಕೊನೆಯ ದಿನವಾಗಿತ್ತು.

‘ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆ ಬಂದಿಲ್ಲ. ಬೆಳೆಯೂ ಸರಿಯಾಗಿ ಆಗಿಲ್ಲ. ನಷ್ಟ ಆಗಬಹುದು ಎಂಬ ಭಾವನೆ ರೈತರಲ್ಲಿ ಬಂದಿದೆ. ಹಾಗಾಗಿ, ಹೆಚ್ಚು ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಮರಾಜನಗರ ಹೆಚ್ಚು, ಹನೂರು ಕಡಿಮೆ: ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರು ವಿಮೆ ನೋಂದಣಿ ಮಾಡಿಸಿಕೊಂಡಿದ್ದರೆ, ಹನೂರು ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ರೈತರು ವಿಮಾ ಕಂತು ಪಾವತಿಸಿದ್ದಾರೆ. ಚಾಮರಾಜನಗರದಲ್ಲಿ 13,864 ರೈತರು ನೋಂದಣಿ ಮಾಡಿಸಿದ್ದಾರೆ. ಹನೂರಿನಲ್ಲಿ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ ಕೇವಲ 50.

ಸಂಖ್ಯೆ ಕಡಿಮೆ:ಕೃಷಿ ಪ್ರಮುಖ ಕಸುಬಾಗಿರುವ ಈ ಜಿಲ್ಲೆಯಲ್ಲಿ 2,12,196 ರೈತರಿದ್ದಾರೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ. ಈ ಪೈಕಿ ಎರಡೂವರೆ ಎಕರೆಗಿಂತಲೂ (1 ಹೆಕ್ಟೇರ್‌) ಕಡಿಮೆ ಜಮೀನು ಇರುವ ಅತಿ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲಾಖೆಯ ಪ್ರಕಾರ ಇವರು 1,34,251 ಮಂದಿ ಇದ್ದಾರೆ. ಎರಡೂವರೆಯಿಂದ ಐದು ಎಕರೆಗಳಷ್ಟು ಜಮೀನು ಹೊಂದಿರುವ ಸಣ್ಣ ರೈತರು 52,943 ಮಂದಿ ಇದ್ದಾರೆ. ಉಳಿದವರು ದೊಡ್ಡ ಕೃಷಿಕರು.

ಜಿಲ್ಲೆಯಲ್ಲಿರುವ ರೈತರ ಒಟ್ಟು ಸಂಖ್ಯೆಯನ್ನು ಪರಿಗಣಿಸಿದರೆ, ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿರುವ ಸಂಖ್ಯೆ ತುಂಬಾ ಕಡಿಮೆ. ಯೋಜನೆ ಬಗ್ಗೆ ಇಲಾಖೆ ಸಾಕಷ್ಟು ಪ್ರಚಾರ ಮಾಡಿದರೂ ಅದು ರೈತರಿಗೆ ತಲುಪುತ್ತಿಲ್ಲ. ರೈತರಲ್ಲಿ ಇನ್ನೂ ಈ ಬಗ್ಗೆ ಅರಿವು ಮೂಡಿಲ್ಲ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

‘ತಾಂತ್ರಿಕ ಕಾರಣದಿಂದ 2016–17ನೇ ಸಾಲಿನ ಬೆಳೆ ವಿಮೆ ಹಣ ಪಾವತಿ ಮಾಡುವುದು ತಡವಾಗಿತ್ತು. ವಿಮೆ ಪರಿಹಾರ ತಕ್ಷಣಕ್ಕೆ ಸಿಗುವುದಿಲ್ಲ ಎಂಬ ಭಾವನೆ ರೈತರಲ್ಲಿದೆ. ಅದರಿಂದಾಗಿ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

‘ಸರಳೀಕರಣಗೊಳಿಸಿ, ಗೊಂದಲ ನಿವಾರಿಸಿ’

ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವುದಕ್ಕೆ ರೈತ ಮುಖಂಡರು ಹಲವು ಕಾರಣಗಳನ್ನು ನೀಡುತ್ತಾರೆ.

‘ವಿಮೆ ನೋಂದಣಿ ಮಾಡುವುದಕ್ಕೆ ಕೃಷಿ ಇಲಾಖೆ ಹಲವು ದಾಖಲೆಗಳನ್ನು ಕೇಳುತ್ತದೆ. ಬಹುತೇಕ ರೈತರು ಖಾತೆಯನ್ನು ಹೊಂದಿರುವುದಿಲ್ಲ. ಖಾತೆ ಇದ್ದವರು ಕೂಡ ಪಹಣಿ ಪಡೆಯಲು ತಾಲ್ಲೂಕು ಕಚೇರಿ ಮುಂದೆ ದಿನಗಟ್ಟಲೆ ಕಾಯಬೇಕು. ಒಂದು ಬ್ಯಾಂಕ್‌ನಲ್ಲಿ ಸ್ವೀಕರಿಸುವ ದಾಖಲೆಗಳನ್ನು ಇನ್ನೊಂದು ಬ್ಯಾಂಕ್‌ ಸ್ವೀಕರಿಸುವುದಿಲ್ಲ’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರ ಜೊತೆಗೆ ಯೋಜನೆಯ ಬಗ್ಗೆ ಎಲ್ಲ ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಯಾವ ಭಾಗದ ರೈತರು ಯಾವ ಬೆಳೆಗೆ ವಿಮೆ ಪಾವತಿಸಬೇಕು ಎಂಬ ಬಗ್ಗೆ ಗೊಂದಲಗಳಿವೆ. ನೋಂದಣಿ ಮಾಡಿಕೊಂಡವರಿಗೆ ಬೆಳೆ ಪರಿಹಾರ ಬರುವುದು ವಿಳಂಬವಾಗುತ್ತದೆ. ಸರ್ಕಾರ ಇಡೀ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬೇಕು. ಯೋಜನೆ ಬಗ್ಗೆ ರೈತರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಲು ಯತ್ನಿಸಬೇಕು’ ಎಂದು ಅವರು ಹೇಳಿದರು.

ಯಾವ ಬೆಳೆಗಳಿಗೆ ವಿಮಾ ಸೌಲಭ್ಯ?
ಮಳೆ ಆಶ್ರಿತ ಬೆಳೆಗಳು:
ಉದ್ದು, ಹೆಸರು, ಸೂರ್ಯಕಾಂತಿ, ಮುಸುಕಿನ ಜೋಳ, ಜೋಳ, ಸಜ್ಜೆ, ನೆಲಗಡಲೆ, ಅಲಸಂದೆ, ತೊಗರಿ, ಹುರುಳಿ, ರಾಗಿ ಮತ್ತು ಹತ್ತಿ

ನೀರಾವರಿ ಬೆಳೆಗಳು: ಈರುಳ್ಳಿ, ಸಜ್ಜೆ, ಮುಸುಕಿನ ಜೋಳ ಮತ್ತು ಭತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT