ಶನಿವಾರ, ಆಗಸ್ಟ್ 13, 2022
26 °C
ಕೋವಿಡ್‌ ತಡೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮ: ಎರಡು ತಾಲ್ಲೂಕುಗಳಲ್ಲಿ 80 ಸೋಂಕಿತ ಮತದಾರರು–ಜಿಲ್ಲಾಧಿಕಾರಿ ಮಾಹಿತಿ

ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಮಂಗಳವಾರ (ಡಿ.22) ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. 

ಚಾಮರಾಜನಗರ ತಾಲ್ಲೂಕಿನ 43 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳು ಸೇರಿ 77 ಪಂಚಾಯಿತಿಗಳ 1,241 ಸ್ಥಾನಗಳಿಗೆ ಮಂಗಳವಾರ ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 3079 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  

ಕೋವಿಡ್‌–19 ತಡೆಗೆ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಮತದಾನಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು. 

ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಕೋವಿಡ್ ತಡೆಗಾಗಿ ಚುನಾವಣಾ ಆಯೋಗ ರೂಪಿಸಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಪ್ರತಿ ಮತಗಟ್ಟೆ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಲಾಗುತ್ತದೆ. ಮತದಾನಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಕೈಗಳನ್ನು ಶುಚಿಗೊಳಿಸಿಕೊಳ್ಳಲು ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ನೀಡಲಾಗುವುದು’ ಎಂದರು. 

ಮತದಾರರ ಗುರುತಿನ ಚೀಟಿ ಸೇರಿದಂತೆ ಸರ್ಕಾರ ನೀಡುವ 22 ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು ಎಂದು ಅವರು ತಿಳಿಸಿದರು. 

80 ಸೋಂಕಿತರು: ‘ಚಾಮರಾಜನಗರದಲ್ಲಿ 60 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 60 ಮಂದಿ ಸೇರಿದಂತೆ ಒಟ್ಟು 80 ಕೋವಿಡ್‌ಗೆ ತುತ್ತಾಗಿರುವ ಮತದಾರರು ಇದ್ದಾರೆ. ಚುನಾವಣೆಯಲ್ಲಿ ಮತದಾನ ಮಾಡುವ ಆಶಯವನ್ನು ವ್ಯಕ್ತಪಡಿಸಿದರೆ ಅವರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗುವುದು. ಸಂಜೆ 4ರಿಂದ 5 ಗಂಟೆಯವರೆಗೆ ಇವರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೋಂಕಿತರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯೇ ಮತಗಟ್ಟೆಗೆ ಕರೆದುಕೊಂಡು ಬರಲಿದ್ದಾರೆ. ನಂತರ ಅವರನ್ನು ಕರೆದುಕೊಂಡು ಹೋಗಲಿದ್ದಾರೆ. ಇವರು ಮತದಾನ ಮಾಡುವ ಸಂದರ್ಭದಲ್ಲಿ ಮತಗಟ್ಟೆ ಸಿಬ್ಬಂದಿಗೆ ಪಿಪಿಇ ಕಿಟ್‌ ಸೇರಿದಂತೆ ಇತರ ಸುರಕ್ಷಿತ ಸಲಕರಣೆಗಳನ್ನು ಪೂರೈಸಲಾಗುವುದು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.  

‘ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್ ಅಥವಾ ಫೇಸ್‌ಶೀಲ್ಡ್ ಹಾಗೂ ‌ಗ್ಲೌಸ್ ಧರಿಸಬೇಕು. ಪೋಲಿಂಗ್ ಏಜೆಂಟರು ಸಹ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲಾಗುವುದು’ ಎಂದರು.

‘ಎರಡೂ ತಾಲ್ಲೂಕುಗಳಲ್ಲಿ 614 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಗುಂಡ್ಲುಪೇಟೆಯಲ್ಲಿ 54 ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ 65 ಸೂಕ್ಷ್ಮ ಮತಗಳನ್ನು ಗುರುತಿಸಲಾಗಿದೆ. ಇಲ್ಲಿ ಮತದಾನದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗುವುದು. ಭದ್ರತೆಯನ್ನೂ ಒದಗಿಸಲಾಗುವುದು’ ಎಂದು ಮಾಹಿತಿ ನೀಡಿದರು. 

ಮಸ್ಟರಿಂಗ್‌ ಕಾರ್ಯ ಸೋಮವಾರ (ಡಿ.21) ನಡೆಯಲಿದೆ. ಮತಗಟ್ಟೆ ಅಧಿಕಾರಿಗಳಿಗೆ ಅಂಚೆ ಮತಪತ್ರದ ಮೂಲಕ ಮತಚಲಾಯಿಸಲು ಅನುಕೂಲವಾಗುವಂತೆ ಆಯಾ ಮಸ್ಟರಿಂಗ್‌ ಕೇಂದ್ರದಲ್ಲಿ ಮತದಾನ ಸೌಲಭ್ಯ ಕೇಂದ್ರ ಸ್ಥಾಪಿಸಲಾಗಿದೆ. ಮಸ್ಟರಿಂಗ್‌ ಕೇಂದ್ರಕ್ಕೆ ಬರುವುದಕ್ಕಾಗಿ ಸಿಬ್ಬಂದಿಗೆ 110 ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡಲಾಗಿದೆ. 

ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಇದ್ದರು. 

ಮದ್ಯಮಾರಾಟ ನಿಷೇಧ

ಮೊದಲ ಹಂತದ ಚುನಾವಣೆ ನಡೆಯುವ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭಾನುವಾರ (ಡಿ.20) ಮಧ್ಯರಾತ್ರಿ 12 ಗಂಟೆಯಿಂದ ಅನ್ವಯವಾಗುವಂತೆ  22ರ ಮಧ್ಯರಾತ್ರಿ 12ರವರೆಗೆ ಹಾಗೂ ಎರಡನೇ ಹಂತದ ಚುನಾವಣೆ ನಡೆಯುವ ಕೊಳ್ಳೇಗಾಲ, ಯಳಂದೂರು ಮತ್ತು ಹನೂರು ತಾಲ್ಲೂಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿ.25 ರ ಮಧ್ಯರಾತ್ರಿ 12 ಗಂಟೆಯಿಂದ 27ರ ಮಧ್ಯರಾತ್ರಿ 12ರವರೆಗೆ ಮತ್ತು ಮತ ಎಣಿಕೆ ನಡೆಯುವ ಸಂದರ್ಭದಲ್ಲಿ ಡಿ.29 ರ ಮಧ್ಯರಾತ್ರಿ 12 ಗಂಟೆಯಿಂದ 30ರ ಮಧ್ಯರಾತ್ರಿ 12ರವರೆಗೆ ಜಿಲ್ಲೆಯಾದ್ಯಂತ ಎಲ್ಲ ಮದ್ಯ ಮಾರಾಟ, ಸಾಗಾಣಿಕೆ, ವಿತರಣೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಹೇಳಿದರು. 

ರಜೆ ನೀಡಲು ಆದೇಶ

ಚಾಮರಾಜನಗರ: ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ಮತ ಕ್ಷೇತ್ರದಲ್ಲಿರುವ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ, ಅನುದಾನ ರಹಿತ ವಿದ್ಯಾ ಸಂಸ್ಥೆಗಳು ಎಲ್ಲ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಕೇಂದ್ರ ಸರ್ಕಾರದ ಕಚೇರಿಗಳು, ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು, ಸಹಕಾರಿ ರಂಗದ ಸಂಸ್ಥೆಗಳ ಎಲ್ಲ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು, ರಾಷ್ಟ್ರೀಕೃತ ಇತರೆ ಬ್ಯಾಂಕುಗಳು ಇನ್ನಿತರ ಎಸ್ಟಾಬ್ಲಿಷ್‌‌ಮೆಂಟ್‌ಗಳಲ್ಲಿ ಕಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಡಿ. 22ರಂದು ವೇತನ ಸಹಿತ ರಜೆ ನೀಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.