ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಟಿಯಲ್ಲಿ ಕಳ್ಳಬೇಟೆ ಯತ್ನ: ಐವರ ಬಂಧನ, ಬಂದೂಕು ವಶ

ಮೂವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನವರು, ಒಬ್ಬರು ಬೆಂಗಳೂರಿನವರು
Last Updated 27 ಜುಲೈ 2021, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ವನ್ಯಪ್ರಾಣಿಗಳನ್ನು ಬೇಟೆಯಾಡುವುದಕ್ಕಾಗಿ ಕಾರಿನಲ್ಲಿ ಬಂದೂಕು ಹಾಗೂ ಇತರ ಶಸ್ತ್ರಾಸ್ತ್ರಗಳೊಂದಿಗೆ ಸಂಚರಿಸುತ್ತಿದ್ದ ಐವರನ್ನು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ‌ದ ಚಾಮರಾಜನಗರ ಪ್ರಾದೇಶಿಕ ವಲಯದ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ಬಂಧಿತರಲ್ಲಿ ಮೂವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನವರು. ಒಬ್ಬರು ತಾಲ್ಲೂಕಿನ ಬಡಗಲಪುರದವರು. ಇನ್ನೊಬ್ಬರು ಬೆಂಗಳೂರಿನ ಮಲ್ಲೇಶ್ವರದವರು. ಆರೋಪಿಗಳಿಂದ ಎರಡು ಬಂದೂಕು (ಒಂದು ಪರವಾನಗಿ ಇರುವ, ಇನ್ನೊಂದು ಪರವಾನಗಿ ಹೊಂದಿಲ್ಲದ) ಆರು ಸಜೀವ ಕ್ಯಾಟ್ರಿಜ್‌ಗಳು ಹಾಗೂ ಚೂರಿ, ಕತ್ತಿ, ಅರ, ತಲೆಯಲ್ಲಿ ಧರಿಸುವ ಬ್ಯಾಟರಿ ಲೈಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹರಗ ಗ್ರಾಮದ ಕಿಶನ್‌ಕುಮಾರ್‌ (34), ಸೋಮವಾರಪೇಟೆಯ ಧನಂಜಯ್‌ (30), ಕುಮಾರಹಳ್ಳಿ ಗ್ರಾಮದ ಆಶಿಕ್‌ (30), ಚಾಮರಾಜನಗರ ತಾಲ್ಲೂಕಿನ ಬಡಗಲಪುರದ ಗೋವಿಂದರಾಜು (29) ಹಾಗೂ ಬೆಂಗಳೂರಿನ ಮಲ್ಲೇಶ್ವರದ ಪ್ರಮೋದ್‌ (27) ಬಂಧಿತರು.

‘ಉಪ ವಲಯ ಅರಣ್ಯಾಧಿಕಾರಿ ಹರ್ಷ, ಗಾರ್ಡ್‌ ಶ್ವೇತಾದ್ರಿ ಹಾಗೂ ವಾಚರ್‌ ಫೈರೋಜ್‌ ಅವರು ಸೋಮವಾರ ಮುಂಜಾವು ಮೂರು ಗಂಟೆ ಸುಮಾರಿಗೆ ತಾಲ್ಲೂಕಿನ ವಡ್ಗಲ್‌ಪುರದಲ್ಲಿ ಗಸ್ತು ತಿರುಗುತ್ತಿದ್ದಾಗ, ಅನುಮಾನಾಸ್ಪದವಾಗಿ ಅರಕಲವಾಡಿ ಕಡೆಯಿಂದ ಚಾಮರಾಜನಗರದತ್ತ ಬರುತ್ತಿದ್ದ ಸಿಲ್ವರ್‌ ಬಣ್ಣದ ಟಾಟಾ ಇಂಡಿಕಾ ಕಾರನ್ನು ತಡೆದು ನೋಡಿದಾಗ ಅದರಲ್ಲಿ ಐವರು ಇದ್ದರು. ಅವರನ್ನು ವಿಚಾರಿಸಿ, ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಎರಡು ಬಂದೂಕು ಹಾಗೂ ಆರು ಸಜೀವ ಕ್ಯಾಟ್ರಿಜ್‌ಗಳು ಪತ್ತೆಯಾದವು’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ಕುಮಾರ್‌ ಅವರು ತಿಳಿಸಿದ್ದಾರೆ.

ಇದೇ ಆರೋಪಿಗಳು ಇನ್ನೊಂದು ಸ್ವಿಫ್ಟ್‌ ಡಿಸೈರ್‌ ಕಾರನ್ನು ಬೇರೆ ಕಡೆಯಲ್ಲಿ ನಿಲ್ಲಿಸಿದ್ದರು. ಅದನ್ನು ಪರಿಶೀಲಿಸಿದಾಗ ಬೇಟೆಯಾಡಲು ಬಳಸುವ ಸಾಮಗ್ರಿಗಳಾದಚೂರಿ, ಕತ್ತಿ, ಅರ, ತಲೆಯಲ್ಲಿ ಧರಿಸುವ ಬ್ಯಾಟರಿ ಲೈಟ್‌ಗಳು ಕಂಡು ಬಂದವು ಎಂದು ಅಧಿಕಾರಿಗಳು ಹೇಳಿದ್ದಾರೆ. ‌

ವನ್ಯಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಜೊತೆಯಲ್ಲಿಟ್ಟು ಆರೋಪಿಗಳು ಸಂಚರಿಸುತ್ತಿದ್ದರು. ಅವರನ್ನು ಬಂಧಿಸುವುದರ ಜೊತೆಗೆ ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸಂತೋಷ್‌ ಕುಮಾರ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT