ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ 2.39 ಲಕ್ಷ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ

ಜಿಲ್ಲೆಯಲ್ಲಿ ಅ.14ರಿಂದ ಡಿ.31ರವರೆಗೂ ನಡೆದಿದ್ದ ಅಭಿಯಾನ
Last Updated 17 ಜನವರಿ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ವೈದ್ಯಕೀಯ ಸೇವೆ ಇಲಾಖೆ ಹಮ್ಮಿಕೊಂಡಿದ್ದ ಕಾಲುಬಾಯಿ ಜ್ವರಕ್ಕೆ ಲಸಿಕೆ ಅಭಿಯಾನ ಮುಕ್ತಾಯಗೊಂಡಿದ್ದು, ಶೇ 93ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.

ಕಳೆದ ವರ್ಷ ಪ್ರಕಟವಾದ ಜಾನುವಾರುಗಳ ಗಣತಿಯ ಪ್ರಕಾರ, ಜಿಲ್ಲೆಯಲ್ಲಿ 2,53,205 ಜಾನುವಾರು (ಹಸು, ಎತ್ತು, ಎಮ್ಮೆ, ಕೋಣ), ಈ ಪೈಕಿ 2,39,256ಕ್ಕೆ ಕಾಲುಬಾಯಿ ಜ್ವರ ಬಾರದಂತೆ ಲಸಿಕೆ ಹಾಕಲಾಗಿದೆ.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ (ಎನ್‌ಎಡಿಸಿಪಿ) ಅಡಿಯಲ್ಲಿ ಲಸಿಕೆ ಹಾಕುವ ಅಭಿಯಾನ ಕೈಗೊಳ್ಳಲಾಗಿತ್ತು. ಚಾಮರಾಜನಗರದ ಹಾಲು ಒಕ್ಕೂಟದ (ಚಾಮುಲ್‌) ಸಹಯೋಗದಲ್ಲಿ ಅ.14ರಿಂದ ನ.30ರವರೆಗೆ 45 ದಿನಗಳ ಕಾಲ ಅಭಿಯಾನ ನಡೆದಿತ್ತು. ನಂತರ ಈ ಅವಧಿಯನ್ನು ಡಿ.31ರವರೆಗೂ ವಿಸ್ತರಿಸಲಾಗಿತ್ತು.

ಅಭಿಯಾನ ಮುಕ್ತಾಯಗೊಂಡಿದ್ದು, ಶೇ 93ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಕರುಗಳು, ಗರ್ಭ ಧರಿಸಿರುವ ಹಸುಗಳು ಹಾಗೂ ಅನಾರೋಗ್ಯ ಹೊಂದಿರುವ ರಾಸುಗಳಿಗೆ ಲಸಿಕೆ ಹಾಕಿಲ್ಲ. ಸಾಮಾನ್ಯವಾಗಿ ಆಹಾರವನ್ನು ಮೆಲುಕು ಹಾಕುವ ಎಲ್ಲ ಸಾಕು ಪ್ರಾಣಿಗಳಿಗೂ ಲಸಿಕೆ ಹಾಕಬೇಕು. ಆದರೆ, ಈ ಬಾರಿಯ ಅಭಿಯಾನದಲ್ಲಿ ಮೇಕೆ ಕುರಿಗಳಿಗೆಲಸಿಕೆ ನೀಡಿಲ್ಲ.

‘ಜಿಲ್ಲೆಯಲ್ಲಿ ಈ ಬಾರಿ ಕಾಲು ಬಾಯಿ ಜ್ವರ ಪ್ರಕರಣ ವರದಿಯಾಗಿಲ್ಲ. ಜಿಲ್ಲೆಯಲ್ಲಿರುವ ಶೇ 93ರಷ್ಟು ಜಾನುವಾರುಗಳಿಗೆ ಹಾಕಲಾಗಿದೆ. ಗರ್ಭ ಧರಿಸಿರುವ ಹಸು ಎಮ್ಮೆಗಳು, ಕರುಗಳಿಗೆ ಹಾಗೂ ರೋಗದಿಂದ ಬಳಲುತ್ತಿರುವ ಜಾನುವಾರುಗಳಿಗೆ ಕೊಟ್ಟಿಲ್ಲ. ಶೇ 7ರಷ್ಟು ಜಾನುವಾರುಗಳಿಗೆ ಮುಂದಿನ ಹಂತದಲ್ಲಿ ಲಸಿಕೆ ನೀಡಲಾಗುವುದು’ ಎಂದು ಪಶುಪಾಲನಾ ಇಲಾಖೆ ಹಾಗೂ ವೈದ್ಯಕೀಯ ಸೇವೆಗಳ ಇಲಾಖೆಯ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಗಂಟು ಚರ್ಮ ರೋಗ ನಿಯಂತ್ರಣದಲ್ಲಿ

ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಾನುವಾರುಗಳಲ್ಲಿ ಚರ್ಮರೋಗ ಕಾಣಿಸಿಕೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವೀರಭದ್ರಯ್ಯ ಅವರು ಮಾಹಿತಿ ನೀಡಿದರು.

‘ಈ ರೋಗದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಇದನ್ನು ಲಂಪಿ ಸ್ಕಿನ್‌ ಡಿಸೀಸ್‌ ಎಂದು ಕರೆಯಲಾಗುತ್ತದೆ. ವೈರಸ್‌ ಕಾರಣದಿಂದ ಬರುತ್ತದೆ. ಇದರಿಂದಾಗಿ ಜಾನುವಾರುಗಳ ಪ್ರಾಣಕ್ಕೆ ಅಪಾಯ ಇಲ್ಲ. ಚಿಕಿತ್ಸೆ ಪಡೆದರೆ ಕಡಿಮೆಯಾಗುತ್ತದೆ. ಜಿಲ್ಲೆಯಲ್ಲಿ ಪ್ರಕರಣಗಳು ಕಡಿಮೆಯಾಗಿವೆ’ ಎಂದು ಅವರು ಹೇಳಿದರು.

ಶೇ 90ರಷ್ಟು ಜಾನುವಾರುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ

ಕೇಂದ್ರ ಸರ್ಕಾರದ ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆ (ಎನ್‌ಡಿಡಿಬಿ) ರೂಪಿಸಿರುವ ಜಾನುವಾರುಗಳಿಗೆ (ಹಸು, ಎತ್ತು, ಎಮ್ಮೆ, ಕೋಣ) ಆಧಾರ್‌ ಮಾದರಿಯಲ್ಲಿ 12 ಅಂಕೆಗಳ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಯೋಜನೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ.2,39,256 ಜಾನುವಾರುಗಳ ಪೈಕಿ ಶೇ 90ರಷ್ಟು ಪ್ರಾಣಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗಿದೆ.

ದೇಶದಲ್ಲಿರುವ ಜಾನುವಾರುಗಳ ಸಂಪೂರ್ಣ ಮಾಹಿತಿಯನ್ನು ದಾಖಲಿಸುವ ಉದ್ದೇಶದಿಂದ ರೂಪಿಸಲಾಗಿರುವ ಕಾರ್ಯಕ್ರಮ ಇದಾಗಿದ್ದು, ಎಲ್ಲ ಜಾನುವಾರುಗಳ ಮಾಹಿತಿಗಳನ್ನು ಮೊಬೈಲ್‌ ಇಲ್ಲವೇ ಕಂಪ್ಯೂಟರ್‌ ಮೂಲಕ ತಿಳಿಯಬಹುದು.

ಜಾನುವಾರುಗಳ ಮಾಲೀಕರ ಹೆಸರು, ಅವರ ವಿವರಗಳು, ದನಕರುಗಳ ಆರೋಗ್ಯದ ಸ್ಥಿತಿ ಗತಿ, ಹಾಲು ಉತ್ಪಾದನಾ ಸಾಮರ್ಥ್ಯ,ಹಾಕಿರುವ ಲಸಿಕೆಗಳ ವಿವಿರ, ಗರ್ಭಧಾರಣೆಯ ಮಾಹಿತಿ, ಕರುವಿನ ಜನನ, ಪಶು ಆಹಾರ ಸೇರಿದಂತೆ ಎಲ್ಲ ವಿವರಗಳನ್ನು ಕಲೆ ಹಾಕಿ ‘ಇನಾಫ್‌’ (ಪ್ರಾಣಿಗಳ ಆರೋಗ್ಯ ಮತ್ತು ಉತ್ಪಾದನೆ ಮಾಹಿತಿ ಜಾಲ) ಎಂಬ ಆ್ಯಪ್‌ನಲ್ಲಿ ದಾಖಲು ಮಾಡಲಾಗುತ್ತದೆ. ಜಾನುವಾರುಗಳಿಗೆ ನೀಡಲಾಗುವ 12 ಅಂಕೆಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು ಈ ಎಲ್ಲ ಮಾಹಿತಿಗಳನ್ನು ನೋಡುವುದಕ್ಕೆ ಅವಕಾಶ ಇದೆ.

‘ಕಾಡಂಚಿನ ಪ್ರದೇಶಗಳಲ್ಲಿ ಇನ್ನೂ ಹಲವು ಜಾನುವಾರುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಬೇಕಾಗಿದೆ. ಒಬ್ಬರು 50ರಿಂದ 100ರವರೆಗೆ ಹಸುಗಳನ್ನು ಸಾಕುತ್ತಾರೆ. ಇವುಗಳು ದೇಸಿ ತಳಿಯ ಹಸುಗಳಾಗಿರುವುದರಿಂದ ಅವುಗಳನ್ನು ನಿಯಂತ್ರಿಸುವುದು ಸ್ವಲ್ಪ ಕಷ್ಟ. ಟ್ಯಾಗ್‌ ಹಾಕಲು ಸಾಧ್ಯವಾಗದಿದ್ದರೂ, ಗುರುತಿನ ಸಂಖ್ಯೆ ನೀಡಲಾಗುತ್ತಿದೆ’ ಎಂದು ವೀರಭದ್ರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT