ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ | ತೈಲ ಬೆಲೆ ಏರಿಕೆ: ಬಿಜೆಪಿ ಪ್ರತಿಭಟನೆ

Published 20 ಜೂನ್ 2024, 14:27 IST
Last Updated 20 ಜೂನ್ 2024, 14:27 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪೆಟ್ರೋಲ್ ಮತ್ತು ಡೀಸೆಲ್ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮ ಖಂಡಿಸಿ ಬಿಜೆಪಿ ಮಂಡಲ ಕಾರ್ಯಕರ್ತರು  ಪಟ್ಟಣದಲ್ಲಿ ಗುರುವಾರ  ದ್ವಿಚಕ್ರ ವಾಹನವನ್ನು ಹಗ್ಗದಲ್ಲಿ ಎಳೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಹಳೆಬಸ್ ನಿಲ್ದಾಣದಿಂದ  ಜಾಥಾ ಹೊರಟ ಬಿಜೆಪಿ ಮುಖಂಡರು, ಎಂಡಿಸಿಸಿ ಬ್ಯಾಂಕ್ ಮುಂಭಾಗ ಮಾನವ ಸರಪಳಿ ನಿರ್ಮಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ತಾಲ್ಲೂಕು ಕಚೇರಿ ಮುಂದೆ ಜಮಾವಣೆಗೊಂಡಾಗ,  ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸಲು ಆಗುತ್ತಿಲ್ಲ.  ಬಹೀಗಾಗಿ ಪೆಟ್ರೋಲ್,ಡೀಸೆಲ್, ಅಬಕಾರಿ , ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ. ಜನರಿಗೆ ತೀವ್ರ ಹೊರೆಯಾಗುತ್ತಿದೆ ಒಬ್ಬರಿಂದ ಹಣ ಕಿತ್ತು ಮತ್ತೊಬ್ಬರಿಗೆ ಗ್ಯಾರಂಟಿ ಯೋಜನೆಯಲ್ಲಿ ನೀಡುತ್ತಿರುವ ಕ್ರಮ ಖಂಡನೀಯ ಎಂದರು.

ತಾಲ್ಲೂಕಿನಲ್ಲಿ ಕಾಂಗ್ರೆಸ್ ಶಾಸಕರು ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಅಭಿವೃದ್ಧಿ ಶೂನ್ಯ. ಬಿಜೆಪಿ ಅವಧಿಯ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡುತ್ತಿದ್ದಾರೆ. ಮಡಹಳ್ಳಿ ರಸ್ತೆ ಹಾಗು ಕುಸಿದ ಚರಂಡಿ ದುರಸ್ತಿ ಆಗಿಲ್ಲ, ಕೆರೆಗಳಿಗೆ ನೀರು ತುಂಬಿಸಿಲ್ಲ.  ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆದ ಸರ್ಕಾರ ಆಗಿದ್ದರೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಕುರುಬರಹುಂಡಿ ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಎನ್.ಮಲ್ಲೇಶ್, ಹಿರೀಕಾಟಿ ಸೋಮಶೇಖರ್,  ಎಲ್.ಸುರೇಶ್, ಮಾಧ್ಯಮ ಸಂಚಾಲಕ ಶಿಂಡನಪುರ ಮಂಜುನಾಥ್, ನಾಗುಸ್ವಾಮಿ, ಹಂಗಳ ಪ್ರಣಯ್, ಶಿವಪುರ ನಮೋ ಮಂಜು  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT