ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 ವಿರುದ್ಧ ಸಮರಕ್ಕೆ ಸಿದ್ಧವಾದ ಸುಸಜ್ಜಿತ ಚಾಮರಾಜನಗರ ಜಿಲ್ಲಾಸ್ಪತ್ರೆ

98 ಹಾಸಿಗೆ ಆಸ್ಪತ್ರೆ, 14 ಹಾಸಿಗೆಗಳ ಐಸಿಯು, 11 ವೆಂಟಿಲೇಟರ್‌ಗಳ ಸೌಕರ್ಯ
Last Updated 29 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ಹಾಗೂ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದ ಜಿಲ್ಲಾಸ್ಪತ್ರೆ (ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ) ಈಗ ಕೋವಿಡ್‌–19ರ ನೆಪದಲ್ಲಿ ಸುಸಜ್ಜಿತವಾಗಿದೆ.

ಕೊರೊನಾ ವೈರಸ್‌ ನೀಡುವ ಸವಾಲನ್ನು ಎದುರಿಸುವುದಕ್ಕಾಗಿ ಸರ್ಕಾರದ ಸೂಚನೆಯಂತೆ ಜಿಲ್ಲಾಸ್ಪತ್ರೆಯ ಒಂದು ಭಾಗವನ್ನು (ಹಳೆಯ ಕಟ್ಟಡವನ್ನು) ಕೋವಿಡ್‌ ಆಸ್ಪತ್ರೆಯನ್ನಾಗಿ ಜಿಲ್ಲಾಡಳಿತ ಪರಿವರ್ತಿಸಿದ್ದು, ಕಾರ್ಪೊರೇಟ್‌ ಆಸ್ಪತ್ರೆಗಳಿಗೆ ಸರಿ ಸಮಾನವಾಗುವಂತೆ 98 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಿದೆ.

ಇದರಲ್ಲಿ 14 ಹಾಸಿಗೆಗಳ ವಿಶೇಷ ತೀವ್ರ ನಿಗಾ ಘಟಕವೂ ಇದೆ. ಜಿಲ್ಲಾಸ್ಪತ್ರೆಯ ನಿಯಂತ್ರಣದಲ್ಲೇ ಏಳು ವೆಂಟಿಲೇಟರ್‌ಗಳಿದ್ದು (ಮೂರು ಹಳೆಯದು ಮತ್ತು ನಾಲ್ಕು ಹೊಸದಾಗಿ ಖರೀದಿ ಮಾಡಿರುವುದು), ಕೋವಿಡ್‌ ಆಸ್ಪತ್ರೆಗಾಗಿ ಜೆಎಸ್‌ಎಸ್‌ ಆಸ್ಪತ್ರೆಯ ನಾಲ್ಕು ವೆಂಟಿಲೇಟರ್‌ಗಳನ್ನು ಮೀಸಲಿಡಲಾಗಿದೆ. ಹಾಗಾಗಿ, ಕೋವಿಡ್‌–19 ಚಿಕಿತ್ಸೆಗಾಗಿ 11 ವೆಂಟಿಲೇಟರ್‌ಗಳ ಸೌಲಭ್ಯ ಲಭ್ಯವಾದಂತಾಗಿದೆ. ಡಯಾಲಿಸಿಸ್‌ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಗಳೂ ಇಲ್ಲಿವೆ.

ಚಿಕಿತ್ಸೆಯ ಮೂರು ಹಂತ: ಕೋವಿಡ್‌–19 ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಮೂರು ಹಂತದ ವ್ಯವಸ್ಥೆ ಮಾಡಲಾಗಿದೆ. ತಲಾ 200 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಕಾಳಜಿ ಕೇಂದ್ರಗಳನ್ನು (ಸಿಸಿಸಿ) (ಕ್ವಾರಂಟೈನ್‌ ಕೇಂದ್ರ) ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಹಾಗೂ ಬೇಡರಪುರದಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ.

‘ಜಿಲ್ಲಾಸ್ಪತ್ರೆಯಲ್ಲೇ ಸ್ಥಾಪಿಸಲಾಗಿರುವ ಕೋವಿಡ್‌ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಪೈಕಿ 60 ಹಾಸಿಗೆಗಳಿರುವ ವಿಭಾಗವನ್ನು ಕೋವಿಡ್‌ ಆರೋಗ್ಯ ಕೇಂದ್ರ (ಡಿಸಿಎಚ್‌ಸಿ) ಎಂದು ಗುರುತಿಸಲಾಗಿದೆ. 24 ಹಾಸಿಗೆಗಳನ್ನು ಕೋವಿಡ್‌ ಆಸ್ಪತ್ರೆಗೆ (ಡಿಸಿಎಚ್‌) ಮೀಸಲಿಡಲಾಗಿದೆ. ಇನ್ನು 14 ಹಾಸಿಗೆಗಳ ತೀವ್ರ ನಿಗಾ ಘಟಕ ಸ್ಥಾಪಿಸಲಾಗಿದೆ’ ಎಂದು ಚಾಮರಾಜನಗರ ವೈದ್ಯಕೀಯ ಕಾಲೇಜಿನ ಡೀನ್‌ ಹಾಗೂ ನಿರ್ದೇಶಕ ಡಾ.ಸಂಜೀವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

200 ಹಾಸಿಗೆಗಳ ಕಾಳಜಿ ಕೇಂದ್ರದಲ್ಲಿ ಶಂಕಿತರನ್ನು ಕ್ವಾರಂಟೈನ್‌ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿರುವ 60 ಹಾಸಿಗೆಗಳ ವಿಭಾಗದಲ್ಲಿ ಕೋವಿಡ್‌ ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಇರಿಸಿ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. 24 ಹಾಸಿಗೆಗಳ ವಿಭಾಗದಲ್ಲಿ ಸೋಂಕು ದೃಢಪಟ್ಟವರನ್ನು ಇರಿಸಲಾಗುತ್ತದೆ. ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವವರ ಚಿಕಿತ್ಸೆಗೆ ಐಸಿಯು ಬಳಸಲಾಗುತ್ತದೆ.

‘ರಾಜ್ಯ ಸರ್ಕಾರ ಆಸ್ಪತ್ರೆ ಕೋವಿಡ್‌ ಸ್ಥಾಪನೆಗೆ ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ.98 ಹಾಸಿಗೆಗಳ ಪೈಕಿ 54 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ನಾಲ್ಕು ವೆಂಟಿಲೇಟರ್‌ಗಳು ಬಂದಿದೆ. ಒಟ್ಟು 11 ವೆಂಟಿಲೇರ್‌ ಲಭ್ಯವಾದಂತೆ ಆಗಿದ್ದು, ಏಳನ್ನು ಕೋವಿಡ್‌–19 ಚಿಕಿತ್ಸೆಗೆ ಮೀಸಲಿಟ್ಟು, ನಾಲ್ಕನ್ನು ಇತರ ರೋಗಿಗಳ ಚಿಕಿತ್ಸೆಗೆ ಬಳಸಲು ನಿರ್ಧರಿಸಲಾಗಿದೆ’ ಎಂದು ಡಾ.ಸಂಜೀವ್‌ ವಿವರಿಸಿದರು.

‘ನಮ್ಮಲ್ಲಿ ಕೋವಿಡ್‌–19 ಪ್ರಕರಣಗಳು ಇಲ್ಲ. ಹಾಗಿದ್ದರೂ, ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಕಾರ್ಪೊರೇಟ್‌ ಆಸ್ಪತ್ರೆಗಳಲ್ಲಿ ಇರುವ ರೀತಿಯ ಐಸಿಯು ಹಾಗೂ ವೈದ್ಯಕೀಯ ಸೇವೆ ನಮ್ಮಲ್ಲಿ ಲಭ್ಯವಾಗಬೇಕು ಎಂಬ ಆಶಯ ನಮ್ಮದಾಗಿತ್ತು. ಅದರಂತೆ ಉತ್ತಮ ಸೌಕರ್ಯಗಳುಳ್ಳ ಆಸ್ಪತ್ರೆ ಸ್ಥಾಪನೆ ಮಾಡಿದ್ದೇವೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌ ನೆಪದಲ್ಲಿ ಸಿಕ್ಕ ಸೌಲಭ್ಯ

ಜಿಲ್ಲೆಯಲ್ಲಿ ಬಹುಪಾಲು ಜನರು ಆರೋಗ್ಯ ಸೇವೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಜಿಲ್ಲಾಸ್ಪತ್ರೆಗೆ ಬರುವವರೇ ಹೆಚ್ಚು. ಐಸಿಯು, ವೆಂಟಿಲೇಟರ್‌ಗಳ ಕೊರತೆ ಆಸ್ಪತ್ರೆಯನ್ನು ತೀವ್ರವಾಗಿ ಬಾಧಿಸುತ್ತಿತ್ತು.

ಸುಳ್ವಾಡಿ ವಿಷ ಪ್ರಸಾದ ಪ್ರಕರಣವು ಜಿಲ್ಲೆಯ ಆರೋಗ್ಯ ಸೇವೆಯ ಹುಳುಕುಗಳನ್ನು ಬಟಾಬಯಲು ಮಾಡಿತ್ತು. ಕೊಳ್ಳೇಗಾಲ ಹಾಗೂ ಚಾಮರಾಜನಗರದಲ್ಲಿ ಅಗತ್ಯವಾದ ವೆಂಟಿಲೇಟರ್ ಸೌಲಭ್ಯ ಇಲ್ಲದೇ ಇದ್ದುದರಿಂದ ವಿಷ ಪ್ರಸಾದ ಸೇವಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದ ಜನರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತ ಚಿಕಿತ್ಸೆ ಕೊಡಿಸಿತ್ತು.

ಆ ಬಳಿಕ ಜಿಲ್ಲೆಯಲ್ಲಿರುವ ಆರೋಗ್ಯ ಸೇವೆಯನ್ನು ಇನ್ನಷ್ಟು ಉತ್ತಮ ಪಡಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ವೆಂಟಿಲೇಟರ್‌ ಇರುವ ಆಂಬುಲೆನ್ಸ್‌ಗಳು, ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ವೆಂಟಿಲೇಟರ್‌ಗಳನ್ನು ಪೂರೈಸಬೇಕು, ಐಸಿಯುಗಳ ಸಾಮರ್ಥ್ಯ ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ, ಇತ್ತೀಚಿನವರೆಗೂ ಅಂತಹ ಬೆಳವಣಿಗೆಗಳು ಆಗಿರಲಿಲ್ಲ.

ಕೊರೊನಾ ವೈರಸ್‌ ರಾಜ್ಯಕ್ಕೆ ದಾಳಿ ಇಡುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಮುತುವರ್ಜಿ ತೋರಿತು. ಅದರ ಫಲವೇ ಸುಸಜ್ಜಿತ ಆಸ್ಪತ್ರೆ.

ಕೋವಿಡ್‌–19ರ ಹಾವಳಿ ಮುಗಿದ ನಂತರ, ಹೊಸ ವೆಂಟಿಲೇಟರ್‌ಗಳು, ಐಸಿಯುಗಳು ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಉಪಯೋಗಕ್ಕೂ ಸಿಗಲಿದೆ. ಜಿಲ್ಲೆಯಲ್ಲಿ ಸಿಗುತ್ತಿರುವ ಆರೋಗ್ಯ ಸೇವೆ ಇನ್ನಷ್ಟು ಉತ್ತಮವಾಗಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

***

ಕೋವಿಡ್‌–19 ಕಾರಣಕ್ಕೆ ಸ್ಥಾ‍ಪಿಲಾಗಿರುವ ಸುಸಜ್ಜಿತ ಆಸ್ಪತ್ರೆ ಜಿಲ್ಲೆಗೊಂದು ಆಸ್ತಿಯಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸವಾಲನ್ನೂ ಎದುರಿಸಬಹುದು

- ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ

***

ಸದ್ಯ ನಮ್ಮ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯಗಳೂ ಇವೆ. ಸಿಬ್ಬಂದಿ ಕೊರತೆ ಸ್ವಲ್ಪ ಇದೆ. ಮುಂದಿನ ದಿನಗಳಲ್ಲಿ ಅದು ಕೂಡ ಬಗೆಹರಿಯಲಿದೆ

- ಡಾ.ಸಂಜೀವ್‌, ವೈದ್ಯಕೀಯ ಕಾಲೇಜಿನ ಡೀನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT