ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ

ಶ್ರೀವಿದ್ಯಾ ಗಣಪತಿ ಮಂಡಳಿಯಿಂದ ಸುದರ್ಶನಚಕ್ರ ಗಣಪತಿ ಪ್ರತಿಷ್ಠಾಪನೆ
Published 19 ಸೆಪ್ಟೆಂಬರ್ 2023, 14:21 IST
Last Updated 19 ಸೆಪ್ಟೆಂಬರ್ 2023, 14:21 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಹಿಂದೂಗಳು ಗೌರಿ– ಗಣೇಶ ಹಬ್ಬವನ್ನು ಸೋಮವಾರ  ಸಂಭ್ರಮ ಸಡಗರದಿಂದ ಆಚರಿಸಿದರು.

ಈ ಬಾರಿ ಗೌರಿ ಹಬ್ಬ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿರುವುದರಿಂದ ಜನರು ತಮ್ಮ ಮನೆಗಳಲ್ಲಿ ಗೌರಿ-ಗಣೇಶನ ಮೂರ್ತಿಗಳನ್ನು ಜೊತೆಗೆ ಪ್ರತಿಷ್ಠಾಪಿಸಿ ಪೂಜಿಸಿದರು.

ಮನೆ‌ ಮನೆಗಳಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮನೆಗಳ ಆವರಣವನ್ನು ತಳಿರು, ತೋರಣ, ರಂಗೋಲಿಗಳಿಂದ ಶೃಂಗರಿಸಲಾಗಿತ್ತು.

ಮಧ್ಯಾಹ್ನದ ಹೊತ್ತಿನಲ್ಲಿ ಮೋದಕ, ಕಡುವು, ಉಂಡೆ,  ಚಕ್ಕುಲಿ, ಪಂಚ ಕಜ್ಜಾಯ, ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಮಾಡಿ ಗೌರಿ– ಗಣಪನಿಗೆ ನೈವೇದ್ಯ ಮಾಡಿ, ಮಧ್ಯಾಹ್ನ ಹೋಳಿಗೆಯೂಟ ಸವಿದರು. ಸ್ನೇಹಿತರು, ನೆಂಟರಿಷ್ಟರನ್ನೂ ಮನೆಗೆ ಆಮಂತ್ರಿಸಿ ಹಬ್ಬದ ಊಟ ಬಡಿಸಿದರು. 

ರಾತ್ರಿ ಮತ್ತೆ ಗೌರಿ ಗಣೇಶನನ್ನು ಅರ್ಚಿಸಿ, ಸಮೀಪದ ಕೊಳ, ಕೆರೆ ಇಲ್ಲವೇ ಮನೆಗಳಲ್ಲಿ ಬಕೆಟ್‌ಗಳಲ್ಲಿ ನೀರು ತುಂಬಿಸಿ ಮೂರ್ತಿಗಳನ್ನು ವಿಸರ್ಜನೆ ಮಾಡಿದರು. 

ಬಾಗಿನ ಅರ್ಪಣೆ: ಗೌರಿ ಹಬ್ಬದ ಅಂಗವಾಗಿ ಮನೆಗಳಲ್ಲಿ ಗೌರಿಯನ್ನು ಪೂಜಿಸಿದ ಮಹಿಳೆಯರು ಬಾಗಿನ ಅರ್ಪಿಸಿದರು. ದೇವಾಲಯಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸುಮಂಗಲಿಯರು ಪರಸ್ಪರ ಬಾಗಿನ ವಿನಿಮಯ ಮಾಡಿಕೊಂಡರು. 

ಸಂಘ ಸಂಸ್ಥೆಗಳಿಂದ ಪ್ರತಿಷ್ಠಾಪನೆ: ಸಾರ್ವಜನಿಕ ಗಣೇಶೋತ್ಸವ ಆಯೋಜಿಸುವ ಸಂಘ ಸಂಸ್ಥೆಗಳು ಗಣೇಶನ ವಿಗ್ರಹಗಳನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ಮಾಡಿದವು. ನಗರ, ಪಟ್ಟಣಗಳ ಬಡಾವಣೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಯುವಕರು ತಂಡಕಟ್ಟಿಕೊಂಡು ಗಣಪತಿ ಪ್ರತಿಷ್ಠಾಪಿಸಿ, ಸಾರ್ವಜನಿಕವಾಗಿ ಪೂಜಿಸಿದರು. ಹಲವು ಕಡೆಗಳಲ್ಲಿ ಮಧ್ಯಾಹ್ನ ಅನ್ನದಾನ ವ್ಯವಸ್ಥೆಯನ್ನೂ ಮಾಡಲಾಗಿತ್ತು. 

ಕೆಲವು ಸಂಘ ಸಂಸ್ಥೆಗಳು ಸೋಮವಾರವೇ ಗಣಪತಿ ವಿಸರ್ಜನೆ ಮಾಡಿದರೆ, ಇನ್ನೂ ಕೆಲವು ಸಂಘಟನೆಗಳು, ಮೂರು, ಐದು, ಹತ್ತು ದಿನಗಳ ಕಾಲ ಪೂಜಿಸಿ ನಂತರ ಅದ್ಧೂರಿಯಾಗಿ ರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲು ಯೋಜಿಸಿವೆ.  

ಗೌರಿ ಹಬ್ಬದ ಅಂಗವಾಗಿ ಚಾಮರಾಜನಗರದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರು ಮೊರದ ಬಾಗಿನ ನೀಡಿದರು
ಗೌರಿ ಹಬ್ಬದ ಅಂಗವಾಗಿ ಚಾಮರಾಜನಗರದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರು ಮೊರದ ಬಾಗಿನ ನೀಡಿದರು
ಚಾಮರಾಜನಗರದ ರಾಮಸಮುದ್ರದ ಮನೆಯೊಂದರಲ್ಲಿ ಮಹಿಳೆಯರು ಪ್ರತಿಷ್ಠಾಪಿಸಿರುವ ಗೌರಿಗೆ ಬಾಗಿನ ಅರ್ಪಿಸಿದರು
ಚಾಮರಾಜನಗರದ ರಾಮಸಮುದ್ರದ ಮನೆಯೊಂದರಲ್ಲಿ ಮಹಿಳೆಯರು ಪ್ರತಿಷ್ಠಾಪಿಸಿರುವ ಗೌರಿಗೆ ಬಾಗಿನ ಅರ್ಪಿಸಿದರು
ಸುದರ್ಶನ ಗಣಪತಿ ಪ್ರತಿಷ್ಠಾಪನೆ
ಚಾಮರಾಜನಗರದ ರಥದ ಬೀದಿಯ ಶ್ರೀವಿದ್ಯಾಗಣಪತಿ ಮಂಡಳಿಯ 61ನೇ ವರ್ಷದ ಗಣೇಶ ಪ್ರತಿಷ್ಠಾಪನಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಆರೂವರೆ ಅಡಿ ಎತ್ತರದ ಸುದರ್ಶನ ಗಣಪತಿಯನ್ನು ಮಧ್ಯಾಹ್ನ 12.30ರಿಂದ 1.30ರ ನಡುವಿನ ಅಭಿಜಿತ್ ಮುಹೂರ್ತದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಶ್ರೀವಿದ್ಯಾ ಗಣಪತಿ ಮಂಡಳಿಯ ಅಧ್ಯಕ್ಷ ಕೃಷ್ಣಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವುವಿರಾಟ್ ಮಾತನಾಡಿ ‘ಗೌರಿ-ಗಣೇಶ ಹಬ್ಬವನ್ನು ನಾಡಿನ ಸಂಸ್ಕೃತಿ ಭಾವೈಕ್ಯತೆ ಪ್ರತೀಕವಾಗಿ ಆಚರಿಸಲಾಗುತ್ತಿದೆ. ಶ್ರೀವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ನಗರದ ಎಲ್ಲ ಕೋಮಿನ ಮುಖಂಡರ ಸಹಕಾರದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಈ ವರ್ಷ ವಿಶೇಷವಾಗಿ ಸುದರ್ಶನಚಕ್ರ ಗಣಪತಿಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅ.7ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅ.16 ರಂದು ವಿಸರ್ಜನಾ ಮಹೋತ್ಸವ ನಡೆಯಲಿದೆ’ ಎಂದರು. ಶ್ರೀವಿದ್ಯಾ ಗಣಪತಿ ಮಂಡಳಿಯ ಗೌರವ ಕಾರ್ಯದರ್ಶಿ ಮಹದೇವಣ್ಣ ಗೌರವ ಸಲಹೆಗಾರ ಬಾಲಸುಬ್ರಹ್ಮಣ್ಯಂ ಕಾರ್ಯಾಧ್ಯಕ್ಷ ಮಹದೇವನಾಯಕ ಮಂಜುನಾಥಗೌಡ ಮನೋಜ್ ಪಟೇಲ್ ನಟರಾಜು ನಾರಾಯಣಪ್ರಸಾದ್ ಬಾಲರಾಜ್ ನೂರೊಂದು ಶೆಟ್ಟಿ ಮಹೇಶ್ ಮಹದೇವನಾಯಕ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT