ಶನಿವಾರ, ಅಕ್ಟೋಬರ್ 23, 2021
21 °C
ಮೆರವಣಿಗೆಗೆ ಅನುಮತಿ ನಿರಾಕರಿಸಿದ ಜಿಲ್ಲಾಡಳಿತದ ವಿರುದ್ಧ ಶ್ರೀ ವಿದ್ಯಾಗಣಪತಿ ಮಂಡಳಿ ಆಕ್ರೋಶ

ಗಣಪತಿ ವಿಸರ್ಜನೆ ಅನಿರ್ದಿಷ್ಟಾವಧಿ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸೋಮವಾರ (ಸೆ.20) ನಡೆಯಬೇಕಿದ್ದ, ನಗರದ ಶ್ರೀವಿದ್ಯಾಗಣಪತಿ ಮಂಡಳಿ ಪ್ರತಿಷ್ಠಾಪಿಸಿರುವ ಭೂಮಂಡಲ ರಕ್ಷ ಗಣಪತಿಯ ವಿಸರ್ಜನೆಯನ್ನು ಅನಿರ್ದಿಷ್ಟಾವಧಿ ಮುಂದೂಡಲು ಮಂಡಳಿಯ ಪ‌ದಾಧಿಕಾರಿಗಳು ಭಾನುವಾರ ನಿರ್ಧರಿಸಿದ್ದಾರೆ. 

ವಿಸರ್ಜನೆಯ ಸಂದರ್ಭದಲ್ಲಿ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಅವಕಾಶ ನೀಡದೇ ಇರುವುದರಿಂದ ಮಂಡಳಿ ಈ ನಿರ್ಧಾರಕ್ಕೆ ಬಂದಿದ್ದು, ಅನುಮತಿ ಕೊಡುವವರೆಗೆ ವಿಸರ್ಜನೆ ಮಹೋತ್ಸವ ಹಮ್ಮಿಕೊಳ್ಳುವುದಿಲ್ಲ ಎಂದು ಮಂಡಳಿಯ ಅಧ್ಯಕ್ಷ ಚಿಕ್ಕರಾಜು ಹಾಗೂ ಇತರ ಪದಾಧಿಕಾರಿಗಳು ಹೇಳಿದ್ದಾರೆ. 

ಮಂಡಳಿಯು ಗಣೇಶ ಹಬ್ಬದ ದಿನ (ಸೆ.10) ಗಣಪತಿಯನ್ನು ಪ್ರತಿಷ್ಠಾಪಿಸಿತ್ತು.  10 ದಿನಗಳ ಬಳಿಕ ಸೋಮವಾರ ವಿಸರ್ಜನೆ ಮಾಡಲು ತೀರ್ಮಾನಿಸಿತ್ತು. ಕೋವಿಡ್‌ ನಿಯಮಗಳನ್ನು ಪಾಲಿಸಿಕೊಂಡು, ಪೂಜೆ, ಕಲಾತಂಡಗಳು ಇಲ್ಲದೇ ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೊಡ್ಡರಸನ ಕೊಳದಲ್ಲಿ ವಿಸರ್ಜನೆ ಮಾಡಲು ಕಾರ್ಯಕ್ರಮ ರೂಪಿಸಿತ್ತು. 

ಜಿಲ್ಲಾಧಿಕಾರಿ ಅವರು ಶನಿವಾರ, ‘ಮೆರವಣಿಗೆಗೆ ಅವಕಾಶ ಇಲ್ಲ. ಕೋವಿಡ್‌ ನಿಬಂಧನೆಗಳಿಗೆ ಒಳಪಟ್ಟು ವಿಸರ್ಜನೆ ಮಾಡಬೇಕು’ ಎಂದು ಮಂಡಳಿಗೆ ನೀಡಿದ್ದ ಅನುಮತಿ ಪತ್ರದಲ್ಲಿ ಹೇಳಿದ್ದರು. 

ಹಿಂದೂ ವಿರೋಧಿ ಧೋರಣೆ ಆರೋಪ: ಭಾನುವಾರ ತುರ್ತು ಸಭೆ ನಡೆಸಿದ ಶ್ರೀ ವಿದ್ಯಾಗಣಪತಿ ಮಂಡಳಿಯ ಪದಾಧಿಕಾರಿಗಳು, ಮೆರವಣಿಗೆ ನಡೆಸಲು ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದ ಜಿಲ್ಲಾಧಿಕಾರಿ ಅವರು ಕೊನೆ ಕ್ಷಣದಲ್ಲಿ ಅನುಮತಿ ನೀಡದೆ ಹಿಂದೂ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮಂಡಳಿಯ ಅಧ್ಯಕ್ಷ ಚಿಕ್ಕರಾಜು ಅವರು ಮಾತನಾಡಿ, ‘ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಸೆ.8ರಂದು ಮೊದಲ ಸಭೆ ನಡೆದಿತ್ತು. 14ರಂದು ನಡೆದಿದ್ದ ಎರಡನೇ ಸಭೆಯಲ್ಲಿ ಮೆರವಣಿಗೆಗೆ ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ಅವರು ಹೇಳಿದ್ದರು. ಸಂಜೆ ಆರು ಗಂಟೆಯ ಒಳಗೆ ವಿಸರ್ಜನೆ ಮಾಡುವಂತೆ ಹೇಳಿದ್ದರು. ಒಂದು ಗಂಟೆ ಹೆಚ್ಚು ಕಡಿಮೆಯಲ್ಲಿ ವಿಸರ್ಜನೆ ಮಾಡುವುದಾಗಿ ಹೇಳಿದ್ದೆವು. ಮಂಗಳವಾದ್ಯ ಬಿಟ್ಟು ಬೇರೆ ಯಾವುದೇ ಕಲಾ ತಂಡಗಳನ್ನು ಮೆರವಣಿಗೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದೆವು. ಮೆರವಣಿಗೆಗೆ ಸಿದ್ಧತೆಗಳನ್ನು ಮಾಡುವಂತೆಯೂ ಹೇಳಿದ್ದರು. ಆದರೆ, ಶನಿವಾರ ಏಕಾಏಕಿ ಕರೆದು ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು’ ಎಂದು ದೂರಿದರು. 

‘ಜಿಲ್ಲಾಡಳಿತ ಅನುಮತಿ ನೀಡುವವರೆಗೂ ನಾವು ಗಣಪತಿ ವಿಸರ್ಜನೆ ಮಾಡುವುದಿಲ್ಲ. ಆರು ತಿಂಗಳು ಆಗಲಿ, ಒಂದು ವರ್ಷ ಆಗಲಿ.. ಗಣಪತಿಗೆ ನಿತ್ಯವೂ ಒಂದೊಂದು ಕುಟುಂಬದ ವತಿಯಿಂದ ಪೂಜೆ ಸಲ್ಲಿಸುತ್ತೇವೆ’ ಎಂದರು. 

‘ಜಿಲ್ಲಾಧಿಕಾರಿಗೆ ಅಧಿಕಾರ ಇದೆ’ 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಡಳಿಯ ಗೌರವ ಕಾರ್ಯದರ್ಶಿ ಎಸ್‌.ಬಾಲಸುಬ್ರಹ್ಮಣ್ಯ ಅವರು, ‘ಜಿಲ್ಲಾಧಿಕಾರಿಗಳು ಮೆರವಣಿಗೆಗೆ ಅವಕಾಶ ನೀಡುವುದಾಗಿ ಹೇಳಿದ ಕಾರಣಕ್ಕೆ ನಾವು ಸಿದ್ಧತೆ ಮಾಡಿಕೊಂಡಿದ್ದೆವು. ಮೆರವಣಿಗೆ ಸಾಗುವ ಬೀದಿಗಳನ್ನು ಸ್ವಚ್ಛಗೊಳಿಸುವಂತೆ ನಗರಸಭೆಗೆ ಅವರು ಸೂಚಿಸಿದ್ದರು. ಜೋತು ಬಿದ್ದಿರುವ ವಿದ್ಯುತ್‌ ತಂತಿಗಳನ್ನು ಸರಿ ಮಾಡುವಂತೆ ಸೆಸ್ಕ್‌ನವರಿಗೆ, ಬಂದೋಬಸ್ತ್‌ ವ್ಯವಸ್ಥೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಆದರೆ, ಶನಿವಾರ ಏಕಾಏಕಿ ಅನುಮತಿ ನೀಡುವುದಿಲ್ಲ ಎಂದು ಹೇಳಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ’ ಎಂದು ದೂರಿದರು. 

‘ಜಿಲ್ಲಾ ಮಟ್ಟದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವುದು ಜಿಲ್ಲಾಧಿಕಾರಿ ಅವರ ವಿವೇಚನೆಗೆ ಬಿಟ್ಟಿದ್ದು. ಐದು ದಿನ ಮಾತ್ರ ಪ್ರತಿಷ್ಠಾಪನೆಗೆ ಅವಕಾಶ ಇರುವುದು. ನಮಗೆ 10 ದಿನಗಳವರೆಗೆ ಅವಕಾಶ ನೀಡಿದ್ದಾರೆ. ಕೋವಿಡ್‌ ನಿಯಮ ಪಾಲಿಸಿಕೊಂಡು ಮೆರವಣಿಗೆ ನಡೆಸಲು ಅವಕಾಶ ನೀಡಬೇಕಾಗಿತ್ತು. ಜಿಲ್ಲಾಧಿಕಾರಿ ಅವರ ಹಿಂದೂ ವಿರೋಧಿ ನೀತಿ ಖಂಡಿಸಿ ಗಣಪತಿ ವಿಸರ್ಜನೆ ಮುಂದೂಡಿದ್ದೇವೆ’ ಎಂದು ಅವರು ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು