ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕಾಂಗ್ರೆಸ್‌ನಿಂದ ‘ಗೋ ಬ್ಯಾಕ್‌ ಮೋದಿ’ ಚಳವಳಿ

ಬರ ಪರಿಹಾರ ನೀಡದ್ದಕ್ಕೆ ಮುಖಂಡರು, ಕಾರ್ಯಕರ್ತರ ಆಕ್ರೋಶ
Published 14 ಏಪ್ರಿಲ್ 2024, 4:48 IST
Last Updated 14 ಏಪ್ರಿಲ್ 2024, 4:48 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಬರುತ್ತಿರುವುದನ್ನು ವಿರೋಧಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಶನಿವಾರ ನಗರದಲ್ಲಿ ರಾಜ್ಯಕ್ಕೆ ಬರ ಪರಿಹಾರ ನೀಡದ ಮೋದಿ ಗೋ ಬ್ಯಾಕ್ ಚಳವಳಿ ನಡೆಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. 

ಕಾಂಗ್ರೆಸ್ ಬಾವುಟ ಹಿಡಿದಿದ್ದ ಕಾರ್ಯಕರ್ತರು ಮತ್ತು ಮುಖಂಡರು ಮೋದಿ ವಿರುದ್ದ ಘೋಷಣೆ ಕೂಗಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣ ನೀಡುವಂತೆ ಮನವಿ ಸಲ್ಲಿಸಿತ್ತು. ಕೇಂದ್ರ ಸಚಿವರನ್ನೂ ವೈಯಕ್ತಿಕವಾಗಿ  ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಹಾಗಿದ್ದರೂ, ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ’ ಎಂದು ದೂರಿದರು. 

‘ಬರ ಪರಿಹಾರಕ್ಕಾಗಿ ಸೆಪ್ಟೆಂಬರ್‌ನಲ್ಲಿ ಮನವಿ ಸಲ್ಲಿಸಿದ್ದೇವೆ. ಬರ ಅಧ್ಯಯನ ತಂಡ ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದೆ. ಅದೇ ತಿಂಗಳು ಕೇಂದ್ರಕ್ಕೆ ₹17,901 ಕೋಟಿ ಪರಿಹಾರ ಬಿಡುಗಡೆಗೆ ಪ್ರಸ್ತಾವ ಸಲ್ಲಿದ್ದೇವೆ. ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ ? ಇದು ಕನ್ನಡಿಗರ ಪ್ರಶ್ನೆಯಾಗಿದ್ದು, ಮೋದಿಯವರು ಇದಕ್ಕೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು. 

‘ನೆರೆ ಬಂದಾಗ ಪರಿಸ್ಥಿತಿ ಅಧ್ಯಯನ ಮಾಡಲು ಬಾರದ ಮೋದಿಯವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಚಾರಕ್ಕೆ ರಾಜ್ಯಕ್ಕೆ ಬರುತ್ತಿರುವುದು ದುರಂತ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಬ್ಬರದ ಪ್ರಚಾರಕ್ಕೆ ರಾಜ್ಯ ಜನರು ತಕ್ಕ ಉತ್ತರ ನೀಡಿದ್ದಾರೆ. ಈಗ ಲೋಕಸಭಾ ಚುನಾವಣೆಯಲ್ಲಿ ಬರ ಪರಿಹಾರ ನೀಡದ ರಾಜ್ಯದ ಜನರನ್ನು ವಂಚಿಸಿರುವ ಬಿಜೆಪಿ ಹಾಗೂ ಮೋದಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಮರಿಸ್ವಾಮಿ ಹೇಳಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್, ಎಸ್‌ಸಿ ಘಟಕದ ಅಧ್ಯಕ್ಷ ಸೋಮೇಶ್ವರ್, ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ, ಮುಖಂಡರಾದ ರವಿಗೌಡ, ಮುತ್ತಿಗೆ ದರೆ, ನಲ್ಲೂರು ಮಹದೇವಸ್ವಾಮಿ, ನಗು ಮೋಹನ್, ನಾಗವಳ್ಳಿ ನಾಗಯ್ಯ, ಬಸುಮರಿ, ಪಿ.ಶೇಖರ್, ಅಯ್ಯನಪುರ ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT