ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಸುಸಜ್ಜಿತ ಆಸ್ಪತ್ರೆಗೆ ಹೆಚ್ಚಿದ ಕೂಗು

ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಗುತ್ತಿಲ್ಲ ಚಿಕಿತ್ಸೆ
Last Updated 8 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕು ಕೇಂದ್ರವಾದ ಹನೂರು ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆಯೊಂದನ್ನು ನಿರ್ಮಿಸಬೇಕು ಎಂಬ ಕೂಗು ಈಗ ಮತ್ತೆ ಎದ್ದಿದೆ.

ತಾಲ್ಲೂಕಿನ ಹಲಗಾಪುರ ಗ್ರಾಮದಲ್ಲಿ ಶನಿವಾರ ಮಿನಿಲಾರಿಯೊಂದು ಮಗುಚಿ ಬಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಅವರಿಗೆ ತಾಲ್ಲೂಕು ಕೇಂದ್ರದಲ್ಲಿ ಚಿಕಿತ್ಸೆ ಲಭ್ಯವಾಗದೆ, ಕೊಳ್ಳೇಗಾಲ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಬೇಕಾಗಿ ಬಂದ ನಂತರ ತಾಲ್ಲೂಕಿನ ಜನರು ಸ್ಥಳೀಯವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಸುಸಜ್ಜಿತ ಆಸ್ಪತ್ರೆಯ ಅಗತ್ಯದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಹನೂರು ಬಗ್ಗೆ ಜನಪ್ರತಿನಿಧಿಗಳು, ಆಡಳಿತ ನಿರ್ಲಕ್ಷ್ಯ ತಾಳಿರುವುದರಿಂದ ಹೋರಾಟದ ಅಗತ್ಯವಿದೆ ಎಂದೂ ಪ್ರತಿಪಾದಿಸಿದ್ದಾರೆ.

ತಮಿಳುನಾಡಿನೊಂದಿಗೆ ಹೊಂದಿಕೊಂಡಿರುವ, ಅರಣ್ಯ ಗುಡ್ಡಗಾಡು ಪ್ರದೇಶಗಳಿಂದ ಆವೃತವಾಗಿರುವ ಹನೂರನ್ನು ಪ್ರತ್ಯೇಕ ತಾಲ್ಲೂಕು ಎಂದು ಘೋಷಣೆ ಮಾಡಿ ಮೂರು ವರ್ಷಗಳಾಗುತ್ತಿದ್ದರೂ, ತಾಲ್ಲೂಕು ಕೇಂದ್ರದಲ್ಲಿರುವ ಯಾವ ಸೌಲಭ್ಯವೂ ಅಲ್ಲಿಲ್ಲ. ತಹಶೀಲ್ದಾರ್‌ ಅವರ ಕಚೇರಿಯೊಂದು ಹನೂರಿನಲ್ಲಿದೆ.

ಗುಣಮಟ್ಟದ ಸೇವೆ ಮರೀಚಿಕೆ: ಹನೂರು ತಾಲ್ಲೂಕಿನಲ್ಲಿಗುಣಮುಟ್ಟದ ಆರೋಗ್ಯ ಸೇವೆಯೂ ಲಭ್ಯವಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರವಷ್ಟೇ ಇದೆ. ಎಲ್ಲ ತಾಲ್ಲೂಕುಗಳಲ್ಲಿ 100 ಹಾಸಿಗೆಗೆಳ ಆಸ್ಪತ್ರೆ ಇರಬೇಕು ಎಂಬುದು ಸರ್ಕಾರದ ನಿಲುವು. ಹನೂರು ಪ್ರತ್ಯೇಕ ತಾಲ್ಲೂಕು ಆಗಿ ಮೂರು ವರ್ಷಗಳಾದರೂ ಇಲ್ಲಿನ ಆಸ್ಪತ್ರೆ ಮೇಲ್ದರ್ಜೆಗೆ ಏರಿಲ್ಲ.

ವಿಶಾಲವಾದ ಆವರಣ ಹೊಂದಿರುವ ಪ್ರಾಥಮಿಕ ಕೇಂದ್ರದಲ್ಲಿ ಹೆರಿಗೆ ಕೊಠಡಿ, ಹೊರರೋಗಿಗಳ ತಪಸಣಾ ಕೇಂದ್ರ ಬಿಟ್ಟು ಬೇರೆ ಯಾವ ಸೌಲಭ್ಯವೂ ಇಲ್ಲ. ದಿನದ 24 ಗಂಟೆ ಸೇವೆ ಎಂಬುದು ನಾಮಫಲಕದ ಮುದ್ರಣಕ್ಕೆ ಮಾತ್ರ ಸೀಮಿತವಾಗಿದೆ. ರಾತ್ರಿ 8ರ ಬಳಿಕ ಬಾಗಿಲು ಮುಚ್ಚಿರುತ್ತದೆ ಎಂಬುದು ಪಟ್ಟಣ ನಿವಾಸಿಗಳ ದೂರು.

ಕೊಳ್ಳೇಗಾಲ ತಾಲ್ಲೂಕಿನಿಂದ ಪ್ರತ್ಯೇಕಗೊಂಡಿರುವಹನೂರು ತಾಲ್ಲೂಕು ಭೌಗೋಳಿಕವಾಗಿ ಹೆಚ್ಚು ವಿಸ್ತಾರವನ್ನು ಹೊಂದಿದೆ.ಹನೂರು, ಲೊಕ್ಕನಹಳ್ಳಿ ಹಾಗೂ ರಾಮಾಪುರ ಎಂಬ ಮೂರು ಹೋಬಳಿಗಳನ್ನು ಹೊಂದಿದೆ. ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2011ರ ಜನಗಣತಿ ಪ್ರಕಾರ, 11 ಸಾವಿರ ಜನಸಂಖ್ಯೆ ಇತ್ತು. ಈಗ ಈ ಸಂಖ್ಯೆ 15 ಸಾವಿರ ದಾಟಿರುವ ಸಾಧ್ಯತೆ ಇದೆ (ಇಡೀ ತಾಲ್ಲೂಕಿನ ಜನಸಂಖ್ಯೆಯ ನಿಖರ ಮಾಹಿತಿ ಲಭ್ಯವಾಗಿಲ್ಲ).

ಬಡ ಜನರೇ ಹೆಚ್ಚಾಗಿರುವ ತಾಲ್ಲೂಕಿನಲ್ಲಿ ಆರೋಗ್ಯ ಸೇವೆಗಾಗಿ ಜನರು ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆ, ಚಾಮರಾಜನಗರದ ಜಿಲ್ಲಾಸ್ಪತ್ರೆ ಅಥವಾ ಮೈಸೂರನ್ನು ಅವಲಂಬಿಸಬೇಕಾಗಿದೆ.

ದಶಕದ ಕೂಗು‌: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂಬ ಕೂಗು ದಶಕದಿಂದಲೂ ಕೇಳಿ ಬರುತ್ತಿದೆ. 2018ರ ವರ್ಷಾರಂಭದಲ್ಲಿ ಹನೂರು ತಾಲ್ಲೂಕು ಕೇಂದ್ರವಾದ ಮೇಲಂತೂ ಸಾಕಷ್ಟು ಹೋರಾಟಗಳು, ಪ್ರತಿಭಟನೆಗಳು ನಡೆದರೂ ಫಲಿತಾಂಶ ಮಾತ್ರ ಶೂನ್ಯ.

2019ರ ಡಿಸೆಂಬರ್‌ 14ರಂದು ಸುಳ್ವಾಡಿಯಲ್ಲಿ ನಡೆದ ವಿಷ ಪ್ರಸಾದ ಪ್ರಕರಣದ ನಂತರ, ತಾಲ್ಲೂಕಿಗೆ ಅತ್ಯಾಧುನಿಕ ಆಸ್ಪತ್ರೆಯ ಅಗತ್ಯದ ಬಗ್ಗೆ ಹಲವು ಬಾರಿ ಚರ್ಚೆ, ಹೋರಾಟವೂ ನಡೆದಿದೆ. ಸುಳ್ವಾಡಿ ಹಾಗೂ ಸುತ್ತಮುತ್ತಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲ ಪಡಿಸುವ ಪ್ರಯತ್ನ ನಡೆಯಿತಾದರೂ ತಾಲ್ಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಗಳು ನಡೆದಿಲ್ಲ.

ಸುಳ್ವಾಡಿ ಪ್ರಕರಣದಲ್ಲಿ 127ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ಹನೂರಿನಲ್ಲಿ ತುರ್ತು ಚಿಕಿತ್ಸೆ ಕೊಡಿಸಲು ಆಸ್ಪತ್ರೆ ಇಲ್ಲದೆ ಇದ್ದುದರಿಂದ (ಕಾಮಗೆರೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೆಲವರಿಗೆ ಚಿಕಿತ್ಸೆ ಸಿಕ್ಕಿತ್ತು) ಕೊಳ್ಳೇಗಾಲಕ್ಕೆ ಕರೆದುಕೊಂಡು ಹೋಗಬೇಕಾಯಿತು. ಶನಿವಾರ ಸಂಭವಿಸಿದ ಅಪಘಾತದ ಪ್ರಕರಣದಲ್ಲೂ ಇದೇ ಪುನರಾವರ್ತನೆಯಾಯಿತು. ಗಾಯಾಳುಗಳಿಗೆ ಹನೂರು ಪ್ರಾಥಮಿಕ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಯಷ್ಟೇ ಲಭಿಸಿತ್ತು. ಹೆಚ್ಚಿನ ಚಿಕಿತ್ಸೆಗೆ ಕಾಮಗೆರೆ ಹೋಲಿಕ್ರಾಸ್‌ ಆಸ್ಪತ್ರೆ, ಕೊಳ್ಳೇಗಾಲ ಉಪವಿಭಾಗ ಹಾಗೂ ಮೈಸೂರಿನ ಆಸ್ಪತ್ರೆಗೆ ಕಳುಹಿಸಬೇಕಾಯಿತು.

ಅಗತ್ಯ ಯಾಕೆ?: ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟ ಹನೂರು ತಾಲ್ಲೂಕಿನಲ್ಲಿದೆ. ಹೊಗೆನಕಲ್‌ ಜಲಪಾತ, ಚಿಕ್ಕಲ್ಲೂರು ಸೇರಿದಂತೆ ಇತರೆ ಪ್ರೇಕ್ಷಣೀಯ ಸ್ಥಳಗಳೂ ಇಲ್ಲಿವೆ. ಸಾವಿರಾರು ಪ್ರವಾಸಿಗರು, ಭಕ್ತರು ಬರುತ್ತಿರುತ್ತಾರೆ. ತುರ್ತು ಅಥವಾ ಅಪಘಾತ ನಡೆದಾಗ ಚಿಕಿತ್ಸೆ ನೀಡಲು ಉತ್ತಮವಾದ ಆಸ್ಪತ್ರೆ ಇಲ್ಲ. ತಾಲ್ಲೂಕು ಆಸ್ಪತ್ರೆ ನಿರ್ಮಾಣವಾದರೆ ಇಂತಹ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಜನರಿಗೂ ಉತ್ತಮ ಚಿಕಿತ್ಸೆ ಲಭ್ಯವಾಗುತ್ತದೆ.

ಇಲಾಖೆಗೆ ಪ್ರಸ್ತಾವ: ‘ಎಲ್ಲ ತಾಲ್ಲೂಕುಗಳಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಇರಬೇಕು ಎಂದು ಸರ್ಕಾರದ ಆದೇಶ ಇದೆ. ಹನೂರು ಪ್ರತ್ಯೇಕ ತಾಲ್ಲೂಕು ಎಂದು ಘೋಷಿಸಿರುವುದರಿಂದ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಈ ಕುರಿತು ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಆರ್.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಸಕರ ವೈಫಲ್ಯ’

ಇಲ್ಲಿನ ಶಾಸಕರು ಹ್ಯಾಟ್ರಿಕ್ ಜಯಗಳಿಸಿರುವುದಾಗಿ ಹೇಳುತ್ತಾರೆ. ಆದರೆ ತಾಲ್ಲೂಕು ಕೇಂದ್ರವಾಗಿ ಮೂರು ವರ್ಷವಾದರೂ ಒಂದು ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರುತ್ತಾರೆ ಜೆಡಿಎಸ್‌ ಮುಖಂಡ ಎಂ.ಆರ್‌.ಮಂಜುನಾಥ್‌.

‘ಸುಳ್ವಾಡಿ ದುರಂತದ ಸಮಯದಲ್ಲಿ ಹನೂರಿನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆತಿದ್ದರೆ ಅಷ್ಟು ಪ್ರಮಾಣದ ಸಾವು ಸಂಭವಿಸುತ್ತಿರಲಿಲ್ಲ. ಅವಘಡಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ಜನಪ್ರತಿನಿಧಿಯಾದವರು ಅದನ್ನು ಎದುರಿಸಲು ಸಿದ್ಧರಿರಬೇಕು. ಇಲ್ಲಿನ ಶಾಸಕರು ಉತ್ತಮ ಆರೋಗ್ಯ ಸೇವೆ ಕಲ್ಪಿಸಿಲ್ಲ. ಆಸ್ಪತ್ರೆ ನಿರ್ಮಿಸಲು ಇನ್ನು ಎಷ್ಟು ಸಾವು ನೋವುಗಳು ಸಂಭವಿಸಬೇಕು’ ಎಂದು ಅವರು ಪ್ರಶ್ನಿಸಿದರು.

ನಿರಂತರ ಪ್ರಯತ್ನ: ಆರ್‌.ನರೇಂದ್ರ

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹನೂರು ಶಾಸಕ ಆರ್‌.ನರೇಂದ್ರ ಅವರು, ‘ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದೇನೆ. ಈವರೆಗೆ ಸರ್ಕಾರಕ್ಕೆ ನಾಲ್ಕೈದು ಬಾರಿ ಮನವಿ ಸಲ್ಲಿಸಿದ್ದೇನೆ’ ಎಂದರು.

‘ಕಾಂಗ್ರೆಸ್‌, ಜೆಡಿಎಸ್‌ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆಗೆ ಅನುಮೋದನೆ ಸಿಕ್ಕಿತ್ತು. ಆದರೆ, ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅದನ್ನು ತಡೆಹಿಡಿದಿದೆ.ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳಾವಕಾಶವಿದೆ. ಇರುವ ಸ್ಥಳದಲ್ಲೇ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬಹುದು. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾಪ ಮಾಡಲು ತೀರ್ಮಾನಿಸಿದ್ದೆ. ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿಯವರಿಗೂ ಪತ್ರ ಬರೆದಿದ್ದೇನೆ’ ಎಂದು ಅವರು ಹೇಳಿದರು.

‘ತಾಲ್ಲೂಕು ಆಸ್ಪತ್ರೆ ನಿರ್ಮಾಣವಾಗುತ್ತಿದ್ದಂತೆ ಎಲ್ಲ ಆರೋಗ್ಯ ಸೇವೆಗಳು ಲಭ್ಯವಾಗಲಿವೆ. ಆರೋಗ್ಯ ಸೌಲಭ್ಯದ ಜೊತೆಗೆ ತಾಲ್ಲೂಕು ಕೇಂದ್ರದಲ್ಲಿ ಇತರೆ ಕಚೇರಿಗಳನ್ನು ಶೀಘ್ರದಲ್ಲೇ ತೆರೆಯುವಂತೆ ಮನವಿ ಮಾಡಿದ್ದೇನೆ. ಶೀಘ್ರದಲ್ಲೇ ಎಲ್ಲವೂ ಅನುಷ್ಠಾನಕ್ಕೆ ಬರಲಿವೆ’ ಎಂದು ನರೇಂದ್ರ ಅವರು ಭರವಸೆ ನೀಡಿದರು.

ಜನರು ಏನಂತಾರೆ?

ಆಕಸ್ಮಿಕ ಅವಘಡಗಳು ಸಂಭವಿಸಿದರೆ ನಾವು ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸಬೇಕಿದೆ.ತುರ್ತು ಸಂದರ್ಭದಲ್ಲಿ ಇಲ್ಲಿಗೆ ಬಂದರೆ ಪ್ರಥಮ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಕಳುಹಿಸುತ್ತಾರೆ. ಆಸ್ಪತ್ರೆ ಎಂಬುದು ಇಲ್ಲಿ ನೆಪ ಮಾತ್ರಕ್ಕೆ ಇದೆ. ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ರೋಗಿಗಳು ಸಾವಿಗೀಡಾಗಿರುವ ಪಕ್ರರಣಗಳು ಸಂಭವಿಸಿವೆ

–ರಾಜು, ಹನೂರು ನಿವಾಸಿ

ರಾತ್ರಿ ವೇಳೆ ಅವಘಡಗಳು ಸಂಭವಿಸಿದರೆ ಇಲ್ಲಿ ಚಿಕಿತ್ಸೆ ಸಿಗುವದೇ ಕಷ್ಟ. ಚಿಕಿತ್ಸೆಗಾಗಿ ನಾವು ಕಾಮಗೆರೆ ಅಥವಾ ಕೊಳ್ಳೇಗಾಲಕ್ಕೆ ಹೋಗಬೇಕು. ಇಲ್ಲಿ ಸರ್ಕಾರಿ ಆಸ್ಪತ್ರೆ ಇದ್ದೂ, ಜನರ ಪಾಲಿಗೆ ಇಲ್ಲದಂತಾಗಿದೆ.

–ಕೃಷ್ಣ, ಹನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT