ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇಶ್ವರ ಬೆಟ್ಟ, ಕೊಳ್ಳೇಗಾಲದಲ್ಲಿ ಭರ್ಜರಿ ಮಳೆ

ಹನೂರು, ಗುಂಡ್ಲುಪೇಟೆ, ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲೂ ವರ್ಷಧಾರೆ
Published 20 ಮೇ 2024, 5:29 IST
Last Updated 20 ಮೇ 2024, 5:29 IST
ಅಕ್ಷರ ಗಾತ್ರ

ಕೊಳ್ಳೇಗಾಲ/ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾನುವಾರ ಮಧ್ಯಾಹ್ನ ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ.

ಮಹದೇಶ್ವರ ಬೆಟ್ಟದಲ್ಲಿ ಸತತ ಎರಡು ಗಂಟೆಗಳ ಕಾಲ ಎಡೆಬಿಡದೆ ಸುರಿದಿದೆ. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ನಾಲ್ಕು ಗಂಟೆಯವರೆಗೆ ಸುರಿಯಿತು. ನಂತರವೂ ಇಳಿಸಂಜೆಯವರೆಗೆ ಸೋನೆ ಮಳೆಯಾಯಿತು.

ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಯ 108 ಅಡಿ ಪ್ರತಿಮೆ ಇರುವ ಜಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಲಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ತಡೆಗೋಡೆ ಸಮೀಪ ನೀರು ಹರಿದು, ಕೆಳಗಡೆ ಇರುವ ಹಲವಾರು ಮನೆಗಳಿಗೆ ನುಗ್ಗಿತು. ಯಾವುದೇ ಅನಾಹುತವಾಗಿಲ್ಲ.

ಕೊಳ್ಳೇಗಾಲ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಮಧ್ಯಾಹ್ನ 2.30ಗೆ ಆರಂಭವಾದ ಮಳೆ 3.30ವರೆಗೂ ಧಾರಾಕಾರವಾಗಿ ಸುರಿಯಿತು. ನಂಜನಕಟ್ಟೆಯಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿತು. ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಲ್ಲೂ ನೀರು ಹರಿದು ನಿವಾಸಿಗಳು ಪರದಾಡಿದರು.

ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಸುರಿಯಿತು. 10 ದಿನಗಳಿಂದ ಮಳೆಯಾಗುತ್ತಿದ್ದರೂ, ತಾಲ್ಲೂಕಿನಲ್ಲಿ ಈ ಪ್ರಮಾಣದ ಮಳೆಯಾಗಿದ್ದು ಇದೇ ಮೊದಲು.

ಚರಂಡಿಗಳಲ್ಲಿ ನೀರು ಉಕ್ಕೇರಿತು. ರಸ್ತೆ ಹೊಂಡ ಗುಂಡಿಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ಕಷ್ಟವಾಯಿತು. ಶಾಲಾ ಕಾಲೇಜುಗಳ ಆಟದ ಮೈದಾನಗಳಲ್ಲಿ ನೀರು ತುಂಬಿತು.

ಡಾ.ರಾಜಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆಗಳು ಜಲಾವೃತವಾದವು.  ಕೆಲವೆಡೆ ಮರದ ಕೊಂಬೆಗಳು ಮುರಿದುಬಿದ್ದಿವೆ. ಇನ್ನು ಕೆಲವು ಕಡೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿದೆ‌.

ನಗರದ ಮಹದೇಶ್ವರ ಕಾಲೇಜು ಸಮೀಪದ ರಸ್ತೆ ನೀರಿನಿಂದ ಜಲಾವೃತವಾಗಿದ್ದು ಬಡಾವಣೆಯ ನಿವಾಸಿಗಳು ಸಂಚರಿಸಲು ಕಿರಿಕಿರಿ ಅನುಭವಿಸಿದರು. ಮಹದೇಶ್ವರ ಕಾಲೇಜು ಕ್ರೀಡಾಂಗಣ ಜಲಾವೃತವಾಗಿತ್ತು.

ಈ ಕ್ರೀಡಾಂಗಣದಲ್ಲಿ ಸೋಮವಾರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಳೆಯಿಂದಾಗಿ ಕ್ರೀಡಾಂಗಣ ಒದ್ದೆಯಾಗಿದ್ದು, ಟೂರ್ನಿ ಸ್ಥಗಿತಗೊಂಡಿದೆ.

ಬಿರುಸಿನ ಮಳೆಯಿಂದ ಕೊಳ್ಳೇಗಾಲದ ಮಹದೇಶ್ವರ ಕಾಲೇಜು ಸಮೀಪದ ರಸ್ತೆ ನೀರಿನಿಂದ ಜಲಾವೃತವಾಗಿತ್ತು
ಬಿರುಸಿನ ಮಳೆಯಿಂದ ಕೊಳ್ಳೇಗಾಲದ ಮಹದೇಶ್ವರ ಕಾಲೇಜು ಸಮೀಪದ ರಸ್ತೆ ನೀರಿನಿಂದ ಜಲಾವೃತವಾಗಿತ್ತು

ತಾಲ್ಲೂಕಿನ ಸತ್ತೇಗಾಲ, ಜಾಗೇರಿ, ಜಕ್ಕಳಿ, ಕೆಂಪನಪಾಳ್ಯ, ಲಕ್ಕರಸನ ಪಾಳ್ಯ, ಟಿಸಿ ಹುಂಡಿ, ಲಿಂಗನಪುರ, ಮಧುವನಹಳ್ಳಿ , ದೊಡ್ಡಿಂದುವಾಡಿ, ಮತ್ತಿಪುರ , ಚಿಕ್ಕಲ್ಲೂರು, ನರಿಪುರ, ಸರಗೂರು, ಗುಂಡೆಗಾಲ, ಉತ್ತಂಬಳ್ಳಿ, ಗೊಬ್ಬಳಿಪುರ, ಹಾಲಳ್ಳಿ, ಟಗರಪುರ, ಚಿಲುಕವಾಡಿ, ಕುಂತೂರು, ಸುರಪುರ, ಕುಣಗಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭರ್ಜರಿ ಮಳೆಯಾಗಿದೆ.

ಯಳಂದೂರು– ಸಾಧಾರಣ ಮಳೆ: ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಸಾಮಾನ್ಯ ಮಳೆಯಾಗಿದೆ. ಮಧ್ಯಾಹ್ನ ಕಾಡಂಚಿನ ಪ್ರದೇಶಗಳಲ್ಲಿ ದಿನವಿಡೀ ಮೋಡ ಮುಚ್ಚಿದ ವಾತಾವರಣ  ಇತ್ತು. ಮಧ್ಯಾಹ್ನ ತುಂತರು ಮಳೆ ಎರಡು ಗಂಟೆಗಳ ಕಾಲ ಸುರಿಯಿತು. ಕೆಸ್ತೂರು, ಹೊನ್ನೂರು ಸುತ್ತಮುತ್ತಲೂ ಮಳೆಯಾಗಿದೆ.

ಪಟ್ಟಣದಲ್ಲೂ ದಿನವಿಡೀ ಬಿಸಿಲು ಮತ್ತು ಮೋಡ ಮುಸುಕಿದ ಸ್ಥಿತಿ ಇತ್ತು. ಗಾಳಿಯ ಜೊತೆ ತುಂತುರು ಮಳೆಯಾಯಿತು.  ಬಿಳಿಗಿರಿರಂಗನಬೆಟ್ಟದಲ್ಲೂ ಅರ್ಧ ಗಂಟೆ ಮಳೆಯಾಗಿದೆ.

ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳ ವಿವಿಧ ಕಡೆಗಳಲ್ಲೂ ಹದವಾಗಿ ವರ್ಷಧಾರೆಯಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಬಾರದ ಮಳೆ: ಭಾನುವಾರ ದಿನವಿಡೀ ಮೋಡ ಕವಿದ ವಾತಾವರಣ ಇದ್ದರೂ ಚಾಮರಾಜನಗರದಲ್ಲಿ ಮಳೆಯಾಗಲಿಲ್ಲ. ಬಿಸಿಲು ಹೆಚ್ಚಿಲ್ಲದಿದ್ದುರಿಂದ ವಾತಾವರಣ ತಂಪಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT