ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯ ವಿವಿಧೆಡೆ ವರುಣನ ಅಬ್ಬರ

ಚಾಮರಾಜನಗರದ ದೊಡ್ಡರಸನಕೊಳಕ್ಕೆ ಭಾರಿ ನೀರು
Last Updated 10 ಮೇ 2022, 15:41 IST
ಅಕ್ಷರ ಗಾತ್ರ

ಚಾಮರಾಜನಗರ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ತಡರಾತ್ರಿ, ಮಂಗಳವಾರ ಬೆಳಿಗ್ಗೆ ಧಾರಾಕಾರ ಮಳೆಯಾಗಿದೆ.

ಚಾಮರಾಜನಗರ ತಾಲ್ಲೂಕು, ಯಳಂದೂರು, ಕೊಳ್ಳೇಗಾಲ, ಹನೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಂಗಳವಾರ ಸಂಜೆಯೂ ವರ್ಷಧಾರೆ ಸುರಿದಿದೆ.

ಚಾಮರಾಜನಗರದಲ್ಲಿ ಸೋಮವಾರ ರಾತ್ರಿ 11.30ಕ್ಕೆ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿತು. ಬಳಿಕ ಬೆಳಿಗ್ಗೆ 6 ಗಂಟೆಯವರೆಗೂ ತುಂತುರು ಹನಿಯುತ್ತಿತ್ತು. 6.15ರಿಂದ ಮತ್ತೆ ಧಾರಾಕಾರ ಮಳೆಯಾಗಿದ್ದು, ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಸುರಿಯಿತು.

ವರ್ಷಧಾರೆಯಿಂದಾಗಿ ನಗರದ ಐತಿಹಾಸಿಕ ದೊಡ್ಡರಸನಕೊಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಅರ್ಧಕ್ಕೂ ಹೆಚ್ಚು ಭಾಗ ತುಂಬಿದೆ. ಸೋಮವಾರ ರಾತ್ರಿಯಂತೆ ಇನ್ನು ಒಂದು ದಿನ ಮಳೆ ಬಂದರೆ ಕೊಳ ಭರ್ತಿಯಾಗಲಿದೆ.

ಚಾಮರಾಜನಗರ ತಾಲ್ಲೂಕಿನ ಹಲವು ಕಡೆಗಳಲ್ಲಿ ಜಮೀನುಗಳಿಗೆ ನೀರು ನಿಂತಿದ್ದು, ಬಿತ್ತನೆ ಮಾಡಿರುವ ಬೆಳೆ, ಚಿಗುರೊಡೆದಿರುವ ಪೈರು ಹಾನಿಗೀಡಾಗುವ ಆತಂಕ ಎದುರಾಗಿದೆ.

ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಇಳಿ ಸಂಜೆಯ ಹೊತ್ತಿಗೆ ಹದವಾಗಿ ಮಳೆಯಾಯಿತು.

ಕೃಷಿಕರ ಸಂಭ್ರಮ:ಯಳಂದೂರುತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಉತ್ತಮ ಮಳೆ ಸುರಿಯಿತು. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ವಾತಾವರಣ ತಂಪಾಗಿತ್ತು. ಸಂಜೆ ಗುಡುಗು ಸಿಡಿಲಿನ ನಡುವೆ ತುರುಸಿನ ವರ್ಷಧಾರೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು.

ಗ್ರಾಮೀಣ, ಪಟ್ಟಣ ಪ್ರದೇಶ ಮತ್ತು ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಮಳೆ ಮುಂದುವರಿದಿದೆ.

ಹಣ್ಣು ತರಕಾರಿ ಬೆಳೆಗಾರರು ಕಟಾವಾದ ತರಕಾರಿಗಳನ್ನು ಸಾಗಿಸಲು ಪ್ರಯಾಸ ಪಟ್ಟರು. ಶ್ರಮಿಕರು ಮಳೆಯ ನಡುವೆಯೇ ವಾಹನಗಳಿಗೆ ಸರಕುಗಳನ್ನು ತುಂಬಿದರು.

‘ಸಂಜೆ ತುಂತುರು ಹನಿಗಳಿಂದ ಆರಂಭಗೊಂಡ ಮಳೆ ನಂತರ ಬಿರುಸಾಯಿತು. ಇದರಿಂದ ತೋಟಗಾರಿಕೆ ಬೆಳೆಗಳು ಮತ್ತು ಬೇಸಿಗೆ ಬೆಳೆಗಳಿಗೆ ಜೀವ ಬಂದಂತಾಗಿದೆ’ ಎಂದು ಕೃಷಿಕ ಅಂಬಳೆ ಶಿವಾನಂದಸ್ವಾಮಿ ಹೇಳಿದರು.

ಕೃಷಿಗೆ ಅಡಚಣೆ: ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ ವಿವಿಧ ಕಡೆಗಳಲ್ಲೂ ಮಂಗಳವಾರ ಗಾಳಿ ಸಹಿತ ಮಳೆಯಾಗಿದೆ.

ಹನೂರು ಭಾಗದಲ್ಲಿಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 6 ಗಂಟೆಯವರೆಗೂ ನಿರಂತರವಾಗಿ ಸುರಿಯಿತು. ಏಕಾಏಕಿ ಸುರಿದ ಮಳೆಯಿಂದಾಗಿ ಜನರು ಪರದಾಡುವಂತಾಯಿತು. ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಪಿ.ಜಿ.ಪಾಳ್ಯ, ಹುಣಸೇಪಾಳ್ಯ, ಒಡೆಯರಪಾಳ್ಯದಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಯಿತು.

ಹನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಜೆ ಆರು ಗಂಟೆಯ ನಂತರವೂ ತುಂತುರು ಹನಿ ಬಿದ್ದಿತು.

ಬಾಗಿದ ವಿದ್ಯುತ್‌ ಕಂಬಗಳು

ಯಳಂದೂರು: ತಾಲ್ಲೂಕಿನ ಕಿನಕಹಳ್ಳಿಯಿಂದ ಕೊಳ್ಳೇಗಾಲ ತಾಲ್ಲೂಕಿನ ಎಡಮೋಳೆ ಗ್ರಾಮದವರೆಗೆ ಅಳವಡಿಸಿರುವ ವಿದ್ಯುತ್ ಕಂಬಗಳು ಗಾಳಿ–ಮಳೆಯಿಂದಾಗಿ ಬಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿವೆ.

‘ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಈಚೆಗೆ ಕಂಬಗಳನ್ನು ಹಾಕಲಾಗಿದೆ. ಅಳವಡಿಕೆ ಕಾರ್ಯ ಸಮರ್ಪಕವಾಗಿ ಆಗದಿರುವ ಕಾರಣ ಮಳೆ ಬಂದ ತಕ್ಷಣವೇ ಕಂಬಗಳು ರಸ್ತೆಯ ಉದ್ದಕ್ಕೂ ವಾಲಿ ನಿಂತಿವೆ. ಈ ಬಗ್ಗೆ ನಿಗಮಕ್ಕೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.

ತಕ್ಷಣವೇ ಕಂಬಗಳನ್ನು ಸರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಳೆ; ಸಂತೆ ಅವ್ಯವಸ್ಥೆ

ಸಂತೇಮರಹಳ್ಳಿ: ಮಂಗಳವಾರ ಮುಂಜಾನೆ ಸುರಿದ ಮಳೆಗೆ ಸಂತೆ ಅಸ್ತವ್ಯಸ್ತವಾಯಿತು. ವರ್ಷಧಾರೆಯಲ್ಲೇ ವ್ಯಾಪಾರ ನಡೆಯಿತು. ದಿನಸಿ, ತರಕಾರಿ ನೆನೆದವು.

ಸಂತೆ ಬಯಲಿನಲ್ಲೇ ಮಳೆ ನೀರು ನಿಂತಿತ್ತು. ಇಡೀ ಪರಿಸರ ಕೊಚ್ಚೆಮಯವಾಗಿತ್ತು. ಗ್ರಾಹಕರು ಕೊಚ್ಚೆ ತುಳಿದುಕೊಂಡೇ ಖರೀದಿ ನಡೆಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂತೆಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ವ್ಯಾಪಾರಿಗಳು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT