ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರೆ ಹಬ್ಬ: ಹೊಡೆದಾಟಕ್ಕಿಲ್ಲಿ ಸಗಣಿಯೇ ಆಯುಧ!

ಚಾಮರಾಜನಗರ: ದೀಪಾವಳಿ ಸಮಯದಲ್ಲಿ ಗಡಿ ಭಾಗ ತಾಳವಾಡಿಯಲ್ಲಿ ಸಾಮರಸ್ಯ ಸಾರುವ ವಿಶಿಷ್ಟ ಆಚರಣೆ
Last Updated 14 ನವೆಂಬರ್ 2020, 7:14 IST
ಅಕ್ಷರ ಗಾತ್ರ
ADVERTISEMENT
""
""

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಗುಮಟಾಪುರ ಗ್ರಾಮದಲ್ಲಿ ದೀಪಾವಳಿ ಸಮಯದಲ್ಲಿ ವಿಶಿಷ್ಟವಾದ ಹಬ್ಬವೊಂದು ಚಾಲ್ತಿಯಲ್ಲಿದೆ. ಹಬ್ಬ ಎಂದರೆ ಇದೊಂದು ವಿಲಕ್ಷಣ ರೀತಿಯ ಕಾದಾಟ. ಈ ಬಡಿದಾಟ ದ್ವೇಷದ್ದಲ್ಲ. ಬದಲಿಗೆ ಸಾಮರಸ್ಯದ್ದು!

ಅಂದ ಹಾಗೆ, ಬಡಿದಾಟ ಅಂದ ಮೇಲೆ ಕೈಯಲ್ಲೊಂದು ಆಯುಧ ಬೇಕಲ್ಲ? ಇಲ್ಲೂ ಆಯುಧ ಇದೆ. ಅದು ಕತ್ತಿ, ಗುರಾಣಿ ಬಂದೂಕಲ್ಲ. ಹಸುಗಳ ಸಗಣಿ!

ಲೋಡುಗಟ್ಟಲೆ ಸಗಣಿಯನ್ನು ರಾಶಿ ಹಾಕಿ ಅದನ್ನು ದೊಡ್ಡ ದೊಡ್ಡ ಉಂಡೆಗಳನ್ನಾಗಿ ಮಾಡಿ ಯುವಕರು, ವಯಸ್ಕರನ್ನೆದೆ ಎಲ್ಲರೂ ಪರಸ್ಪರ ಎರಚಾಡಿಗೊಂಡು ಹೊಡೆದಾಡುವುದು ಈ ಹಬ್ಬದ ವೈಶಿಷ್ಟ್ಯ. ಈ ಆಚರಣೆಗೆ ‘ಗೋರೆ ಹಬ್ಬ’ ಎಂದು ಹೆಸರು. ಪ್ರತಿ ವರ್ಷ ದೀಪಾವಳಿಯ ಮರುದಿನ ಇದನ್ನು ಆಚರಿಸಲಾಗುತ್ತದೆ. ಜಾತಿ, ಧರ್ಮ, ಮೇಲೆ ಕೀಳು ಎಂಬ ಭೇದ ಭಾವ ಇಲ್ಲದೇ ಎಲ್ಲರೂ ಇದರಲ್ಲಿ ಭಾಗವಹಿಸುತ್ತಾರೆ. ಹಾಗಾಗಿ, ಇದು ಸಾಮಾಜಿಕ ಸಾಮರಸ್ಯ ಸಾರುವ ಹಬ್ಬ ಎಂದೇ ಗುರುತಿಸಿಕೊಂಡಿದೆ.

ಹಬ್ಬಕ್ಕಾಗಿ ರಾಶಿ ಹಾಕಲಾಗಿದ್ದ ಸಗಣಿ

ಕನ್ನಡಿಗರ ಹಬ್ಬ: ತಾಳವಾಡಿ ತಾಲ್ಲೂಕು ತಮಿಳುನಾಡಿನಲ್ಲಿದ್ದರೂ ಅಲ್ಲಿರುವವರು ಬಹುತೇಕರು ಕನ್ನಡಿಗರು. ತಾಳವಾಡಿಯು ಚಾಮರಾಜನಗರದಿಂದ 23 ಕಿ.ಮೀ ದೂರದಲ್ಲಿದೆ.ತಾಲ್ಲೂಕಿನಲ್ಲಿ 35ಕ್ಕೂ ಹೆಚ್ಚು ಗ್ರಾಮಗಳಿದ್ದು, ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಬ್ಬದಲ್ಲಿ ಕನ್ನಡಿಗರೇ ಹೆಚ್ಚು ಪಾಲ್ಗೊಳ್ಳುತ್ತಾರೆ. ಒಂದರ್ಥದಲ್ಲಿ ಇದು ಕನ್ನಡಿಗರದ್ದೇ ಹಬ್ಬ.ಗುಮಟಾಪುರ ಗ್ರಾಮ ಮಾತ್ರವಲ್ಲದೇ ಬೇರೆ ಬೇರೆ ಊರಿನ ಜನರೂ ಸಗಣಿ ಎರಚಾಟದಲ್ಲಿ ಭಾಗಿಯಾಗುತ್ತಾರೆ.

ಶತಮಾನದಿಂದಲೂ ಆಚರಣೆ: ಗೋರೆ ಹಬ್ಬದ ಆಚರಣೆಗೆ ಶತಮಾನದ ಇತಿಹಾಸವಿದೆ.ಪ್ರತಿ ವರ್ಷ ಬಲಿ ಪಾಡ್ಯಮಿಯ ಮರುದಿನ ಈ ಹಬ್ಬ ನಡೆಯುತ್ತದೆ. ಗ್ರಾಮದಲ್ಲಿರುವ ಬೀರೇಶ್ವರ ದೇವಾಲಯದ ಹಿಂಭಾಗದಲ್ಲಿ ಸಗಣಿ ಕಾದಾಟ ನಡೆಯುತ್ತದೆ. ಈ ಬಾರಿ ಮಂಗಳವಾರ (ನ.17) ನಡೆಯಲಿದೆ.

ಚಾಡಿಕೋರನ ಮೆರವಣಿಗೆ

ಆಚರಣೆಗೆ ಪವಾಡದ ನಂಟು

ಗೋರೆಹಬ್ಬದ ಆಚರಣೆ ಹಿಂದೆ ಪವಾಡದ ಕಥೆ ಇದೆ.ಗ್ರಾಮದಲ್ಲಿದ್ದ ಜಮೀನ್ದಾರನೊಬ್ಬನ ಬಳಿ ಬೀರಪ್ಪ ಎಂಬ ವ್ಯಕ್ತಿ ಜೀತ ಮಾಡುತ್ತಿದ್ದ. ಆತನಿಗೆ ದೇವರ ಮೇಲೆ ಭಯ ಭಕ್ತಿ ಹೆಚ್ಚು. ಅವನು ಜಮೀನ್ದಾರನ ಮನೆಯ ಮಗನಂತೆಯೇ ಇದ್ದ. ಬೀರಪ್ಪ ಮೃತಪಟ್ಟ ನಂತರ ಆತ ಬಳಸುತ್ತಿದ್ದ ಬೆತ್ತ ಹಾಗೂ ಜೋಳಿಗೆಯನ್ನು ಜಮೀನ್ದಾರ ತಿಪ್ಪೆಗೆ ಎಸೆಯುತ್ತಾನೆ.

ತಿಪ್ಪೆಯಲ್ಲಿದ್ದ ಕಸ ತೆರವುಗೊಳಿಸುವ ಸಂದರ್ಭದಲ್ಲಿ ಎತ್ತಿನ ಗಾಡಿಯ ಚಕ್ರಕ್ಕೆ ಕಲ್ಲೊಂದು ಸಿಕ್ಕಿ ಒಡೆಯುತ್ತದೆ. ಅದರಲ್ಲಿ ರಕ್ತ ಸುರಿಯಲು ಆರಂಭವಾಗುತ್ತದೆ. ಆ ಬಳಿಕ, ಜಮೀನ್ದಾರ ಬೀರಪ್ಪನ ಬೆತ್ತ ಹಾಗೂ ಜೋಳಿಗೆಗಾಗಿ ಹುಡುಕಾಟ ನಡೆಸುತ್ತಾನೆ. ಆದರೆ, ಅದು ಸಿಗುವುದಿಲ್ಲ. ಅದೇ ಕಲ್ಲಿನ ರೂಪ ಪಡೆದಿದೆ ಎಂಬುದು ಪ್ರತೀತಿ.

‘ಆ ಘಟನೆಯ ನಂತರಗ್ರಾಮಸ್ಥರ ಕನಸಿನಲ್ಲಿ ಕಾಣಿಸಿಕೊಳ್ಳುವ ಬೀರಪ್ಪ, ದೀಪಾವಳಿಯ ನಂತರ ಗೋರೆ ಹಬ್ಬ ಮಾಡಬೇಕು ಎಂದು ಹೇಳುತ್ತಾನೆ. ಹಾಗಾಗಿ, ತಿಪ್ಪೆ ಗುಂಡಿ ಇದ್ದ ಜಾಗದಲ್ಲೇ ಊರವರು ಸೇರಿ ಬೀರಪ್ಪನ ದೇವಸ್ಥಾನ ನಿರ್ಮಿಸುತ್ತಾರೆ. ಅಂದಿನಿಂದಲೇ ಈಹಬ್ಬಆಚರಣೆಯಲ್ಲಿದೆ’ ಎಂದು ಹೇಳುತ್ತಾರೆ ಗ್ರಾಮಸ್ಥರು.

ಗೋರೆ ಹಬ್ಬದ ಇನ್ನೊಂದು ವಿಶೇಷ ಎಂದರೆ ಚಾಡಿಕೋರನ ಮೆರವಣಿಗೆ. ಚಾಡಿಕೋರನನ್ನು (ಕೊಂಡಿಗೆಕಾರ ಎಂಬ ಹೆಸರೂ ಇದೆ) ಕತ್ತೆಯ ಮೇಲೆ ಕೂರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಚಾಡಿಕೋರ ಹುಲ್ಲಿನ ಮೀಸೆ, ದಾಡಿ ಹಾಗೂ ಹಂಬುಸೊಪ್ಪಿನ ಹಾರ ಧರಿಸಿರುತ್ತಾನೆ. ಹಿಂದೆ ಎಲ್ಲ, ಮೆರವಣಿಗೆಯುದ್ದಕ್ಕೂ ಚಾಡಿಕೋರ ಕೆಟ್ಟ ಪದಗಳಿಂದ ಬೈಯುತ್ತಾ ಸಾಗುತ್ತಿದ್ದ. ಈಗ ಬೈಗುಳ ಇಲ್ಲದೇ ಸಾಂಪ್ರದಾಯಿಕ ಮೆರವಣಿಗೆಗೆ ಚಾಡಿಕೋರನ ಪಾತ್ರ ಸೀಮಿತವಾಗಿದೆ.

ಊರಿನ ಒಂದೆರಡು ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ, ಚಾಡಿಕೋರನನ್ನು ಬೀರೇಶ್ವರ ದೇವಾಲಯಕ್ಕೆ ಕರೆದುಕೊಂಡು ಬಂದು ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮುಕ್ತಾಯಗೊಳಿಸಲಾಗುತ್ತದೆ.

ಆ ಬಳಿಕ ನಡೆಯುವುದು ಸಗಣಿ ಎರಚಾಟ. ದೇವಾಲಯದ ಅರ್ಚಕ ಸಗಣಿ ರಾಶಿಗೆ ಪೂಜೆ ಸಲ್ಲಿಸುತ್ತಿದ್ದಂತೆ ಯುವಕರು, ವಯಸ್ಕರು ಎರಡು ತಂಡಗಳನ್ನು ರಚಿಸಿಕೊಂಡು ಸಗಣಿ ಹೊಡೆದಾಟಕ್ಕೆ ಸಜ್ಜಾಗುತ್ತಾರೆ. ಜನರ ಕೇಕೆ, ಶಿಳ್ಳೆ ಅರಚಾಟ ಕೂಗಾಟದ ನಡುವೆ ಒಂದು ಗಂಟೆಗೂ ಹೆಚ್ಚುಕಾಲ ಕಾದಾಟ ನಡೆಯುತ್ತದೆ. ಆ ಬಳಿಕ ಗ್ರಾಮದ ಗೊಂಡೆಕಾರನಗುಡ್ಡದಲ್ಲಿ ಚಾಡಿಕೋರನ ಪ್ರತಿಕ್ರಿತಿಯನ್ನು ದಹಿಸಲಾಗುತ್ತದೆ. ನಂತರ ಸಗಣಿ ಕಾದಾಟದಲ್ಲಿ ಪಾಲ್ಗೊಂಡವರೆಲ್ಲರೂ ಕೆರೆಯಲ್ಲಿ ಸ್ನಾನ ಮಾಡಿ ಹಬ್ಬಕ್ಕೆ ತೆರೆ ಎಳೆಯುತ್ತಾರೆ.

ಊರು ಸುಭಿಕ್ಷವಾಗಬೇಕಾದರೆ ಚಾಡಿಕೋರರು ನಾಶವಾಗಬೇಕು ಎಂಬ ಉದ್ದೇಶದಿಂದ ಪ್ರತಿಕೃತಿಯನ್ನು ದಹಿಸಲಾಗುತ್ತದೆ ಎಂದು ಹೇಳುತ್ತಾರೆ ಊರಿನ ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT