ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ

Published 6 ಮಾರ್ಚ್ 2024, 6:28 IST
Last Updated 6 ಮಾರ್ಚ್ 2024, 6:28 IST
ಅಕ್ಷರ ಗಾತ್ರ

ಚಾಮರಾಜನಗರ: ಸರ್ಕಾರಿ ನೌಕರರು ಕೆಲಸದ ಒತ್ತಡ ಹಾಗೂ ಇನ್ನಿತರ ಸಮಸ್ಯೆಗಳತ್ತ ಬೊಟ್ಟು ಮಾಡದೇ ಆಯಾ ದಿನಗಳ ಕೆಲಸಗಳನ್ನು ಅದೇ ದಿನ ಪೂರ್ಣಗೊಳಿಸುವ ನೈಪುಣ್ಯ ಹೆಚ್ಚಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ ಎಂ. ಸಲಹೆ ನೀಡಿದರು. 

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ದೈನಂದಿನ ಕೆಲಸಗಳಲ್ಲಿ ಸರ್ಕಾರಿ ನೌಕರರಿಗೆ ಒತ್ತಡಗಳು ಸಹಜ. ಈ ಒತ್ತಡಗಳಿಗೆ ಏನು ಕಾರಣ ಎಂಬುದನ್ನು ನಾವೇ ಹುಡುಕಬೇಕಾಗಿದೆ. ಸರ್ಕಾರಿ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದಕ್ಕಾಗಿ ಕೆಲಸಗಳನ್ನು ಕಷ್ಟಪಟ್ಟು ಮಾಡದೇ ಇಷ್ಟಪಟ್ಟು ಮಾಡಬೇಕು. ಆಗ ಮಾತ್ರ ಸರ್ಕಾರಿ ಸೇವೆ ಸಾರ್ಥಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು. 

‘ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ನಮ್ಮಲ್ಲಿ ಉತ್ಸಾಹ ಚಿಗುರೊಡೆಯುತ್ತದೆ. ಕ್ರೀಡೆಯು ನೌಕರರಲ್ಲಿ ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಲಿದೆ’ ಎಂದು ಶ್ರೀಧರ ಅವರು ತಿಳಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮಾತನಾಡಿ, ‘ಒತ್ತಡದ ಕರ್ತವ್ಯ ನಿರ್ವಹಣೆಯ ನಡುವೆ ವೈಯಕ್ತಿಕ ಆರೋಗ್ಯಕ್ಕೂ ನೌಕರರು ಗಮನ ಕೊಡಬೇಕು. ಆರೋಗ್ಯದ ಹಿತದೃಷ್ಠಿಯಿಂದ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಮಾತನಾಡಿ, ‘ನಮ್ಮ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಕ್ರೀಡಾಕೂಟ ಸಹಕಾರಿ. ವೃತ್ತಿಜೀವನದಲ್ಲಿ ಎದುರಾಗುವ ಒತ್ತಡ ಸನ್ನಿವೇಶಗಳನ್ನು ಸಮರ್ಪಕವಾಗಿ ನಿಭಾಯಿಸಲು ನೌಕರರು ಮುಂದಾಗಬೇಕು. ಕ್ರೀಡಾಕೂಟದಿಂದ ನೌಕರರಲ್ಲಿ ಬಾಂಧವ್ಯ, ಹೊಂದಾಣಿಕೆ ಹೆಚ್ಚಾಗುತ್ತದೆ’ ಎಂದರು. 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿ.ರಮೇಶ್, ನಗರಸಭೆ ಆಯುಕ್ತ ಎಸ್.ವಿ. ರಾಮದಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ರಮೇಶ್, ಜಿಲ್ಲಾ ಶಾಖೆಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಸ್. ಮಹದೇವಸ್ವಾಮಿ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು. 

ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣಪತ್ರಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT