ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಹಂತ: ಇಳಿದ ಚುನಾವಣಾ ಕಾವು

ದಾಖಲೆಯ ಮತದಾನ: ಲೆಕ್ಕಾಚಾರದಲ್ಲಿ ಮುಳುಗಿದ ಅಭ್ಯರ್ಥಿಗಳು, ಮುಖಂಡರು
Last Updated 23 ಡಿಸೆಂಬರ್ 2020, 13:36 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಳ್ಳಿಗಳಲ್ಲಿ ಚುನಾವಣಾ ಕಾವು ಇಳಿಮುಖವಾಗಿದ್ದು, ಅಭ್ಯರ್ಥಿಗಳು ಹಾಗೂ ಮುಖಂಡರು ವಿಶ್ರಾಂತಿ ಪಡೆಯುತ್ತಾ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದರು.

ಎರಡೂ ತಾಲ್ಲೂಕುಗಳಲ್ಲಿ ಉತ್ತಮ ಮತದಾನ ಆಗಿರುವುದು ಅಭ್ಯರ್ಥಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಜನಸಾಮಾನ್ಯರು ಕೂಡ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಅಖಾಡದಲ್ಲಿದ್ದ 3,079 ಮಂದಿಯ ಭವಿಷ್ಯ ಇದೇ 30ರಂದು ಪ್ರಕಟವಾಗಲಿದೆ.

ಪಕ್ಷಗಳ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಮುಖಂಡರು ಎರಡನೇ ಹಂತದ ಚುನಾವಣೆಯತ್ತ ಮುಖ ಮಾಡಿದ್ದು, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ಭಾಗಗಳಲ್ಲಿ ಪ್ರಚಾರಕ್ಕೆ ಹೆಚ್ಚು ಗಮನ ಹರಿಸಿದ್ದಾರೆ.

ವಿಶ್ರಾಂತಿಗೆ ಮೊರೆ ಹೋದರು: ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದ ಬಹುತೇಕ ಅಭ್ಯರ್ಥಿಗಳು ಮತದಾನದ ಮಾರನೇ ದಿನವಾದ ಬುಧವಾರ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆದರು. ತನಗೆ ಯಾರೆಲ್ಲ ಮತ ಹಾಕಿರಬಹುದು, ಪ್ರತಿ ಸ್ಪರ್ಧಿ ಎಷ್ಟು ಮತಗಳನ್ನು ಗಳಿಸಿರಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದರು. ಬೆಂಬಲಿಗರು ಕೂಡ ಅಭ್ಯರ್ಥಿಗಳ ಮನೆಗೆ ತೆರಳಿ, ಚುನಾವಣೆ ಬಗ್ಗೆ ಚರ್ಚಿಸಿದರು.ಹೆಚ್ಚಿನ ಬೆಂಬಲಿಗರಲ್ಲದೇ ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗಳು ಎಂದಿನಂತೆ ತಮ್ಮ ಕೆಲಸಗಳನ್ನು ತೊಡಗಿದರು.

ಸ್ಟ್ರಾಂಗ್‌ ರೂಮ್‌ನಲ್ಲಿ ಭದ್ರ: ಈ ಮಧ್ಯೆ, ಮತದಾನದ ಬಳಿಕ ಮತಪೆಟ್ಟಿಗೆಗಳನ್ನು ಮಸ್ಟರಿಂಗ್‌ ಕೇಂದ್ರಗಳಿಗೆ ವಾಪಸ್‌ ತಂದು ಅಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್‌ ರೂಮಿನಲ್ಲಿ ಇರಿಸಲಾಗಿದೆ. ಮತ ಪೆಟ್ಟಿಗೆಗಳನ್ನು ಇಟ್ಟಿರುವ ಕೊಠಡಿಗಳಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್‌, ಸತ್ಯಮಂಗಲ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೆಎಸ್‌ಎಸ್‌ ಬಾಲಕಿಯರ ಪ್ರೌಢ ಶಾಲೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ), ಗುಂಡ್ಲುಪೇಟೆಯಲ್ಲಿ ಸೇಂಟ್ ಜಾನ್ಸ್‌ ಇಂಗ್ಲಿಷ್‌ ಮಾಧ್ಯಮ ಶಾಲೆ, ಸರ್ಕಾರಿ ದೊಡ್ಡಹುಂಡಿ ಭೋಗಪ್ಪ ಪಿಯು ಕಾಲೇಜು ಮತ್ತು ಜೆಎಸ್‌ಎಸ್‌ ಕಲಾ ಹಾಗೂ ವಾಣಿಜ್ಯ ಕಾಲೇಜುಗಳಲ್ಲಿ ಸ್ಟ್ರಾಂಗ್‌ ರೂಂಗಳನ್ನು‌ ಸ್ಥಾಪಿಸಲಾಗಿದೆ.

ದಾಖಲೆಯ ಮತದಾನ

ಈ ಬಾರಿ ಚಾಮರಾಜನಗರ ತಾಲ್ಲೂಕು ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ದಾಖಲೆಯ ಮತದಾನವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ 1.27ರಷ್ಟು ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹಿಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 82.35 ಹಾಗೂ ಗುಂಡ್ಲುಪೇಟೆಯಲ್ಲಿ ಶೇ 86.52ರಷ್ಟು ಮತದಾನವಾಗಿತ್ತು. ಎರಡೂ ತಾಲ್ಲೂಕುಗಳಲ್ಲಿ ಒಟ್ಟಾಗಿ ಶೇ 84.43ರಷ್ಟು ಮಂದಿ ಮತ ಚಲಾಯಿಸಿದ್ದರು.

ಈ ಸಲ ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 83.94 ಹಾಗೂ ಗುಂಡ್ಲುಪೇಟೆಯಲ್ಲಿ ಶೇ 88.26ರಷ್ಟು ಮಂದಿ ಹಕ್ಕು ಚಲಾಯಿಸಿದ್ದು, ಎರಡೂ ಕಡೆ ಒಟ್ಟಾಗಿ 85.70ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT