ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗ್ರಾ.ಪಂ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ ಸಿದ್ಧತೆ ಜೋರು

ಚಾಮರಾಜನಗರ ಜಿಲ್ಲೆಯಲ್ಲೂ ಎರಡು ಹಂತಗಳಲ್ಲಿ ಚುನಾವಣೆ, ಡಿ.30ರಂದು ಫಲಿತಾಂಶ
Last Updated 30 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಹಳ್ಳಿ ರಾಜಕೀಯ ಗರಿಗೆದರಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷಗಳ ಚಿಹ್ನೆಯ ಆಧಾರದಲ್ಲಿ ನಡೆಯದಿದ್ದರೂ, ಪಕ್ಷಗಳು ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಇದೇ ಅವಕಾಶವನ್ನು ಬಳಸಿಕೊಳ್ಳುತ್ತವೆ.

ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳ ಪೈಕಿ 129 ಪಂಚಾಯಿತಿಗಳ 2,157 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮ‌ ಪಂಚಾಯಿತಿಯ ಅಧಿಕಾರದ ಅವಧಿ 2021ರ ನವೆಂಬರ್ 1ರವರೆಗೂ ಇರುವುದರಿಂದ ಅಲ್ಲಿ ಚುನಾವಣೆ ನಡೆಯುವುದಿಲ್ಲ.

ಕಾಂಗ್ರೆಸ್‌, ಬಿಜೆಪಿ ಪೈಪೋಟಿ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಹೆಚ್ಚಿನ ಪೈಪೋಟಿ ಕಂಡು ಬರುತ್ತಿದೆ. ಜೆಡಿಎಸ್‌ ಹೆಚ್ಚು ಸಕ್ರಿಯವಾಗಿಲ್ಲ. ಬಿಎಸ್‌ಪಿಯೂ ದೊಡ್ಡ ಮಟ್ಟಿನ ಸಿದ್ಧತೆ ಮಾಡಿಕೊಂಡಂತೆ ಕಾಣಿಸುತ್ತಿಲ್ಲ.

ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯವಾಗಿ ಆಡಳಿತಾಧಿಕಾರಿಗಳನ್ನು ನೇಮಿಸಿದ ಬಳಿಕ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷ ಸಂಘಟನೆಗೆ ಒತ್ತು ನೀಡಲು ಆರಂಭಿಸಿದ್ದವು.ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ, ಪಂಚಾಯಿತಿ ಆಡಳಿತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಎರಡೂ ಪಕ್ಷಗಳು ಪ್ರಯತ್ನ ಆರಂಭಿಸಿವೆ.

ಪಕ್ಷ ಸಂಘಟನೆಯಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುವ ಕಮಲ ಪಾಳಯ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸಚಿವರನ್ನೇ ಕರೆ ತಂದು ಕಾರ್ಯಕ್ರಮಗಳನ್ನು ಮಾಡುತ್ತಿದೆ.

ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟಕ್ಕೂ ತಲುಪಿಸುವುದಕ್ಕಾಗಿ ಗ್ರಾಮ ಸ್ವರಾಜ್ಯ ಎಂಬ ಸಮಾವೇಶವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದೆ. ಮಂಗಳವಾರ ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಸಮಾವೇಶಗಳು ನಡೆಯಲಿವೆ. ಈ ಸಮಾವೇಶಕ್ಕಾಗಿ ಐವರ ತಂಡವನ್ನು ರಚಿಸಲಾಗಿದೆ. ಕಂದಾಯ ಸಚಿವ ಆರ್‌.ಅಶೋಕ್‌ ನೇತೃತ್ವದ ತಂಡದಲ್ಲಿ ಸಚಿವರಾದ ಎಸ್‌.ಟಿ.ಸೋಮಶೇಖರ್‌, ಎಸ್‌.ಸುರೇಶ್‌ಕುಮಾರ್‌, ಕೆ.ನಾರಾಯಣ ಗೌಡ, ಕೆ.ಗೋಪಾಲಯ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಇದ್ದಾರೆ.

ಇದಲ್ಲದೇ ಪ್ರತಿಯೊಂದು ಜಿಲ್ಲಾ ಪಂಚಾಯಿತಿ ವ್ಯಾಕ್ತಿಯಲ್ಲಿ ಮಹಾ ಶಕ್ತಿ ಕೇಂದ್ರ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಿ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಪಂಚರತ್ನ’ ಎಂಬ ತಂಡವೂ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳೆ ಮತ್ತು ಸಾಮಾನ್ಯ ವರ್ಗದವರು ಇದ್ದಾರೆ.

‘ಪಕ್ಷವು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶವನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲೂ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೇವೆ. ಈಗಾಗಲೇ ಮಹಾಶಕ್ತಿ ಕೇಂದ್ರಗಳ ಎರಡು ಸಭೆಗಳನ್ನು ನಡೆಸಲಾಗಿದೆ. ವಿವಿಧ ಮೋರ್ಚಾಗಳ ಸಭೆ ನಿರಂತರವಾಗಿ ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಕ್ತಿ ಕೇಂದ್ರಗಳು ಸಕ್ರಿಯವಾಗಿವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷ ಬೆಂಬಲಿತ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಗರಿಷ್ಠ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡುವುದು ನಮ್ಮ ಗುರಿ. ಇದಕ್ಕಾಗಿ ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದೆ’ ಎಂದರು.

ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯ ನಂತರ ಸತತ ಹಿನ್ನಡೆ ಅನುಭವಿಸುತ್ತಾ ಬಂದಿರುವ ಕಾಂಗ್ರೆಸ್‌ ಕೂಡ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಒತ್ತು ನೀಡಿದೆ.

ಜಿಲ್ಲಾ ಪಂಚಾಯಿತಿ, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಶಾಸಕರು, ಪಕ್ಷದ ಜಿಲ್ಲಾ ಮುಖಂಡರು, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸದಸ್ಯರು ಸಭೆಗಳನ್ನು ನಡೆಸುತ್ತಿದ್ದಾರೆ.

‘ಗ್ರಾಮ ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ, ಹೋಬಳಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಗುಂಡ್ಲುಪೇಟೆಯಲ್ಲಿ ಈಗಾಗಲೇ ಒಂದು ಸಭೆ ನಡೆದಿದೆ. ಕೊಳ್ಳೇಗಾಲ, ಯಳಂದೂರುಗಳಲ್ಲಿ ನಡೆಯಲಿಕ್ಕಿದೆ. ಪ್ರಚಾರಕ್ಕಾಗಿ ರಾಜ್ಯ ಮಟ್ಟದ ಮುಖಂಡರನ್ನು ಕರೆಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯದಿದ್ದರೂ, ತಳಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಲು ಪ್ರಯತ್ನ ನಡೆಯುತ್ತಿದೆ. ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಪಂಚಾಯಿತಿ ಮಟ್ಟದ ಮುಖಂಡರಿಗೆ ಸೂಚನೆ ನೀಡಿದ್ದೇವೆ. ಜನರಿಗೆ ಹೆಚ್ಚು ಹತ್ತಿರವಿರುವ ಹಾಗೂ ಅವರ ಕೆಲಸಗಳನ್ನು ಮಾಡಿಕೊಡುವವರನ್ನು ಅಭ್ಯರ್ಥಿ ಸ್ಥಾನಕ್ಕೆ ಪರಿಗಣಿಸುವಂತೆ ತಿಳಿಸಿದ್ದೇವೆ’ ಎಂದು ಅವರು ಹೇಳಿದರು.

ಎರಡು ಹಂತದ ಚುನಾವಣೆ

ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಗ್ರಾಮ ಪಂಚಾಯಿತಿ ಚುನಾವಣಾ ವೇಳಾಪಟ್ಟಿಯ ಪ್ರಕಾರ, ಜಿಲ್ಲೆಯಲ್ಲೂ ಎರಡು ಹಂತಗಳಲ್ಲಿ, ಡಿಸೆಂಬರ್‌ 22 ಹಾಗೂ 27ರಂದು ಚುನಾವಣೆ ನಡೆಯಲಿದೆ.

129 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ಡಿ.22ರಂದು ಚಾಮರಾಜನಗರ ತಾಲ್ಲೂಕಿನ 43 ಮತ್ತು ಗುಂಡ್ಲುಪೇಟೆ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ.

ಡಿ.27ರಂದು ಯಳಂದೂರು ತಾಲ್ಲೂಕಿನ 12, ಕೊಳ್ಳೇಗಾಲದ 16 ಹಾಗೂ ಹನೂರು ತಾಲ್ಲೂಕುಗಳ 24 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಡಿ.30ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT