ಭಾನುವಾರ, ಆಗಸ್ಟ್ 14, 2022
20 °C
ಕೊಳ್ಳೇಗಾಲ: ಚುನಾವಣೆ ಬಗ್ಗೆ ವ್ಯಕ್ತವಾಗದ ಒಲವು, ಮತದಾನಕ್ಕೆ ಕೆಲವರ ಹಿಂದೇಟು

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹುಸಿ ಭರವಸೆಗಳ ಮೇಲಾಟ

ಅವಿನ್‌ ಪ್ರಕಾಶ್‌ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಪಕ್ಷಗಳ ಪ್ರತಿಷ್ಠೆ, ಹಣ, ಜಾತಿಗಳ ಬಲಾಬಲ ಪರೀಕ್ಷೆಯ ಅಖಾಡವಾಗಿ ಏರ್ಪಟ್ಟಿರುವ ಗ್ರಾಮ ಪಂಚಾಯಿತಿ ಚುನಾವಣಾ ಕಣ ತಾಲ್ಲೂಕಿನಲ್ಲಿ ರಂಗೇರಿದ್ದರೂ, ಕೆಲವು ಮತದಾರರು ಚುನಾವಣೆಯ ಬಗ್ಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿಲ್ಲ.

‘ಭರವಸೆಗಳನ್ನು ನೀಡಿ ಗೆದ್ದವರು ನಂತರ ಎಲ್ಲವನ್ನೂ ಮರೆತು ಬಿಡುತ್ತಾರೆ. ಮತದಾರರತ್ತ ತಿರುಗಿಯೂ ನೋಡುವುದಿಲ್ಲ. ಮತ್ತೆ ನಮ್ಮ ನೆನಪಾಗುವುದು ಮುಂದಿನ ಚುನಾವಣೆಗೇ. ಪರಿಸ್ಥಿತಿ ಹೀಗಿರುವಾಗ ನಮ್ಮ ಹಕ್ಕು ಚಲಾಯಿಸುವುದಾದರೂ ಏತಕ್ಕೆ’ ಎಂಬುದು ಅವರ ಪ್ರಶ್ನೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳು ಇವೆ. ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಅನೈರ್ಮಲ್ಯ ತಾಂಡವವಾಡುತ್ತಿವೆ. ರಸ್ತೆ ಸರಿ ಇಲ್ಲ. ಚರಂಡಿ ವ್ಯವಸ್ಥೆ ಮೊದಲೇ ಇಲ್ಲ. ನೀರಿನ ಪೂರೈಕೆಯಲ್ಲೂ ಸಮಸ್ಯೆ ಇದೆ. ಪ್ರತಿ ಬಾರಿ ಚುನಾವಣೆಗೆ ಸ್ಪರ್ಧಿಸುವವರು ಈ ಸಮಸ್ಯೆಗಳನ್ನು ಸರಿಪಡಿಸುವ ಭರವಸೆಯನ್ನು ನೀಡುವ ಆಶ್ವಾಸನೆಯನ್ನು ನೀಡುತ್ತಾರೆ. ಗೆದ್ದ ನಂತರ ಮರೆಯುತ್ತಾರೆ ಎಂಬುದು ಮತದಾರರ ದೂರು. 

‘ಎರಡು ಮೂರು ಬಾರಿ ಗೆದ್ದಿರುವ ಸದಸ್ಯರು ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಮತ್ತೆ ಹಳೆಯ ಭರವಸೆಗಳು ನೀಡುತ್ತಾ ಮತಬೇಟೆ ಆರಂಭಿಸಿದ್ದಾರೆ. ಹುಸಿ ಭರವಸೆಗಳನ್ನು ನೀಡುತ್ತಾ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಬಂದರೆ ಮಾತ್ರ ಸದಸ್ಯರಿಗೆ ಗ್ರಾಮದ ಜನರು ನೆನಪಾಗುತ್ತಾರೆ ಹೊರತು ಗೆದ್ದ ಮೇಲೆ ಯಾರಿಗೂ ಸಹ ನೆನಪಾಗುವುದಿಲ್ಲ’ ಎಂದು ಗ್ರಾಮಸ್ಥರು ಹೇಳುತ್ತಾರೆ.

ಮುಖಂಡರ ಮೇಲೆ ಸಿಟ್ಟು: ಕೆಲವು ಕಡೆಗಳಲ್ಲಿ ಹಿರಿಯ ಮುಖಂಡರ ಕಾರ್ಯವೈಖರಿಯಿಂದ ಬೇಸತ್ತು, ಯುವ ಜನತೆಯೇ ಸ್ಪರ್ಧಿಸಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಹಿರಿಯರ ಆಡಳಿತದಿಂದ ಬೇಸತ್ತ ಯುವ ಮತದಾರರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯಲು ಬಯಸುತ್ತಿದ್ದಾರೆ. 

‘ಗ್ರಾಮದಲ್ಲಿ ಗೆದ್ದವರು ಯಾರೂ ಸರಿಯಾಗಿ ಅಭಿವೃದ್ಧಿ ಮಾಡಿಲ್ಲ ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಮಗೆ ಬೇಕಾದವರಿಗೆ ಮಾತ್ರ ಕೊಡಿಸುತ್ತಾರೆ’ ಎಂದು ದೂರುತ್ತಾರೆ ಯುವಕರು. 

ಇದಲ್ಲದೇ, ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಊರಿಗೆ ವಾಪಸ್ಸಾಗಿರುವ ಯುವ ಜನರಿಗೆ ಊರ ಹಿರಿಯರ ಮೇಲೆ ಸಿಟ್ಟಿದೆ. ಇದಕ್ಕೆ ಕಾರಣ, ಬೆಂಗಳೂರಿನಿಂದ ಬಂದ ಸಂದರ್ಭದಲ್ಲಿ, ಕೋವಿಡ್‌ ಭಯದಿಂದ ಊರಿಗೆ ಸೇರಿಸಲು ನಿರಾಕರಿಸಿದ್ದು ಮತ್ತು ದಂಡ ವಿಧಿಸಿದ್ದು. 

‘ಕೋವಿಡ್-19 ಸಂದರ್ಭದಲ್ಲಿ ಬೆಂಗಳೂರಿನಿಂದ ಬಂದವರು ಯಾರೂ ಗ್ರಾಮದ ಒಳಗೆ ಪ್ರವೇಶ ಮಾಡಬಾರದು. ಮಾಡಿದರೆ ₹10 ಸಾವಿರ ದಂಡವಿಧಿಸಬೇಕಾಗುತ್ತದೆ ಎಂದು ಊರಿನ ಹೆಬ್ಬಾಗಿಲಿನಲ್ಲಿ ನಾಮಫಲಕ ಹಾಕಿ ತಮಟೆಯನ್ನು ಸಾರಿದ್ದರು. ನಮ್ಮ ಸ್ವ ಗ್ರಾಮಕ್ಕೆ ಬರಬೇಕಾದರೆ ನಾವು ಆ ಸಂದರ್ಭದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದೆವು ಎಂಬುದು ನಮಗೆ ಮಾತ್ರ ಗೊತ್ತಿದೆ. ಈಗ ನಾವು ಬೆಂಗಳೂರಿಗೆ ಕೆಲಸಕ್ಕೆ ಮತ್ತೆ ಹೋಗುತ್ತಿದ್ದೇವೆ. ಗ್ರಾಮಸ್ಥರು ಮತಚಲಾಯಿತಿ ಮಾಡಿ ಹೋಗಿ ಎಂದು ಹೇಳುತ್ತಿದ್ದಾರೆ. ಕಷ್ಟದ ಸಂದರ್ಭದಲ್ಲಿಯೇ ನಮಗೆ ಸಹಾಯ ಸಿಗಲಿಲ್ಲ. ಇನ್ನು ಮತಚಲಾಯಿಸಿದರೆ ಏನು ಸಿಗುತ್ತದೆ?’ ಎಂದು ಪ್ರಶ್ನಿಸುತ್ತಾರೆ ಸತ್ತೇಗಾಲ, ಧನಗೆರೆ, ಸರಗೂರು, ಮಧುವನಹಳ್ಳಿಯ ಹಲವು ಯುವಕರು.

ಅಭಿವೃದ್ದಿಗೆ ಇಲ್ಲದ ಆದ್ಯತೆ: ‘ಗ್ರಾಮ ಪಂಚಾಯಿತಿ ಚುನಾವಣೆ ಬಂದರೆ ಮಾತ್ರ ಅಭಿವೃದ್ದಿ ಮಾಡಲಾಗುವುದು ಎಂಬ ಅದೇ ಸವಕಲು ಭರವಸೆಗಳನ್ನು ನೀಡುತ್ತಾರೆ. ಆದರೆ, ಗೆದ್ದ ಮೇಲೆ ಮತದಾರರ ಕೈಗೆ ತೆಂಗಿನ ಕಾಯಿ ಚಿಪ್ಪು ನೀಡುತ್ತಾರೆ. ಗೆಲ್ಲುವ ಮೊದಲು ಒಂದು ರೀತಿಯ ಹೇಳಿಕೆ, ನಂತರ ಇನ್ನೊಂದು ರೀತಿಯ ಹೇಳಿಕೆ. ಈ ಭರವಸೆಗೆ ಅಂತ್ಯವೇ ಇಲ್ಲ. ಸದಸ್ಯರಾಗಿ ಆಯ್ಕೆಯಾದ ನಂತರ ಕೆಲವರು ತಮ್ಮ ಕುಟುಂಬದವರಿಗೆ ಮತ್ತು ಹತ್ತಿರದ ಸಂಬಂಧಿಗಳಿಗೆ, ಸ್ನೇಹಿತರಿಗೆ ಮಾತ್ರ ಕೆಲಸವನ್ನು ಮಾಡುತ್ತಾರೆಯೇ ವಿನಾ ಗ್ರಾಮಸ್ಥರನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಹೀಗಾಗಿ ಗ್ರಾಮಗಳಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುವುದಿಲ್ಲ’ ಎಂದು ಸರಗೂರು ಗ್ರಾಮದ ಮಂಜುಳ ಅವರು ದೂರಿದರು. 

ರಸ್ತೆ, ಚರಂಡಿ, ಸ್ವಚ್ಛತೆ ಇಲ್ಲ

ತಾಲ್ಲೂಕಿನ ಮಧುವನಹಳ್ಳಿ ಗ್ರಾಮ ಪಂಚಾಯಿತಿ 13 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಿಯಾದ ಮೂಲ ಸೌಕರ್ಯಗಳು ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ಸರಿಯಾಗಿ ರಸ್ತೆ ಇಲ್ಲ, ಇರುವ ಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ. ಚರಂಡಿಯ ನೀರು ರಸ್ತೆಗೆ ಹರಿಯುತ್ತಿದ್ದು ಗಬ್ಬು ನಾರುತ್ತಿದೆ. ಇದರಿಂದ ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಗ್ರಾಮದ ಕೆಲ ಬಡಾವಣೆಗಳಲ್ಲಿ ರಸ್ತೆಯೇ ಇಲ್ಲ. ಮಳೆ ಬಂದರೆ ಸಾಕು, ಇರುವ ರಸ್ತೆಗಳೂ ಕೆಸರು ಗದ್ದೆಯಾಗಿ ಮಾರ್ಪಡಾಗುತ್ತದೆ.

ಹಾಗಿದ್ದರೂ, ಗ್ರಾಮದಲ್ಲಿ ಚುನಾವಣೆಯ ಅಬ್ಬರ ಜೋರಾಗಿದೆ. ಅಭ್ಯರ್ಥಿಗಳು ನೀಡುತ್ತಿರುವ ಭರವಸೆಗಳು ಹಾಗೂ ಘೋಷಣೆಗಳೂ ಆಕರ್ಷಕವಾಗಿವೆ. ಮಧುವನಹಳ್ಳಿ ಒಂದೇ ಅಲ್ಲ, ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಇದೇ ಪರಿಸ್ಥಿತಿ ಇದೆ. 

‘ಚುನಾವಣೆ ಬಂದರೆ ಸಾಕು. ಮುಖಂಡರು ನಮ್ಮ ಮನೆಯ ಬಾಗಿಲ ಬಳಿ ಬರುತ್ತಾರೆ. ಮುಗಿದ ನಂತರ ನಾವು ಅವರ ಮನೆ ಬಾಗಿಲ ಬಳಿ ನಿಂತು ಕೆಲಸ ಮಾಡಿಸಿಕೊಳ್ಳಬೇಕು. ಹೀಗಿರುವಾಗ ನಾವು ಯಾಕೆ ಮತ ಚಲಾಯಿಸಬೇಕು’ ಎಂದು ಮಧುವನಹಳ್ಳಿ ಗ್ರಾಮದ ರಾಧಾ ಅವರು ಪ್ರಶ್ನಿಸಿದರು. 

‘ಚುನಾವಣೆಗೆ ಸ್ಪರ್ಥಿಸಿದ ಸದಸ್ಯರು ಗೆದ್ದ ನಂತರ ಗ್ರಾಮಸ್ಥರ ಕೆಲಸಗಳನ್ನು ಮಾಡಬೇಕು. ಇಲ್ಲದಿದ್ದರೆ, ಅವರು ಇದ್ದೂ, ಇಲ್ಲದಂತೆ’ ಎಂದು ಅದೇ ಗ್ರಾಮದ ಯುವಕ ಪವನ್‌ ಅವರು ಅಭಿಪ್ರಾಯಪಟ್ಟರು. 

ದೂರದ ಊರಿನಲ್ಲಿರುವವರಿಗೆ ಬೇಡಿಕೆ

ಈ ಮಧ್ಯೆ, ಮತದಾನದ ದಿನ ಹತ್ತಿರವಾಗುತ್ತಿದ್ದಂತೆಯೇ ವೃತ್ತಿಯ ಕಾರಣಕ್ಕಾಗಿ ದೂರದ ಊರಿನಲ್ಲಿ ನೆಲೆಸಿರುವವರಿಗೆ ಅಭ್ಯರ್ಥಿಗಳು ದುಂಬಾಲು ಬೀಳುತ್ತಿದ್ದಾರೆ. 

ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ತಾಲ್ಲೂಕಿನ ಯುವಕ ಯುವತಿಯರು ಕೆಲಸ ಮಾಡುತ್ತಿದ್ದಾರೆ. ಅಲ್ಲಿದ್ದರೂ, ಅವರ ಹೆಸರು ಸ್ವಗ್ರಾಮದ ಮತದಾರರ ಪಟ್ಟಿಯಲ್ಲಿದೆ. ಅಭ್ಯರ್ಥಿಗಳು ಸ್ವತಃ ಅವರಿಗೆ ಕರೆ ಮಾಡಿ, ಮತದಾನದ ದಿನದಂದು ಊರಿಗೆ ಬಂದು ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಯುವಕ ಯುವತಿಯರ ಪೋಷಕರನ್ನು ಭೇಟಿ ಮಾಡಿ, ಮಕ್ಕಳನ್ನು ಕರೆಸಿಕೊಂಡು ತಮ್ಮ ಪರ ಮತ ಹಾಕುವಂತೆ ಮಾಡಲು ಮನವೊಲಿಸಲು ಯತ್ನಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು