ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ| ಚಾಮರಾಜನಗರದಲ್ಲಿ ಕಾಂಗ್ರೆಸ್‌, ಬಿಜೆಪಿ ಸಮಬಲದ ಹೋರಾಟ?

ಗ್ರಾ.ಪಂ ಚುನಾವಣೆ: ಮುಖಂಡರಿಂದ ಫಲಿತಾಂಶದ ವಿಶ್ಲೇಷಣೆ
Last Updated 31 ಡಿಸೆಂಬರ್ 2020, 3:14 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ/ಹನೂರು: ಮತ ಎಣಿಕೆ ಕಾರ್ಯ ವಿಳಂಬವಾಗಿದ್ದರಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶದ ರಾಜಕೀಯ ಚಿತ್ರಣ ಇನ್ನೂ ಸ್ಪಷ್ಟವಾಗಿ ತಿಳಿಯದಿದ್ದರೂ ಬುಧವಾರ ಸಂಜೆಯವರೆಗೂ ಲಭ್ಯವಾದ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಹನೂರಿನಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ಸ್ವಲ್ಪ ಪೈಪೋಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾಡಳಿತ ತಾಲ್ಲೂಕುವಾರು ಚುನಾವಣೆಯನ್ನು ನಡೆಸಿದ್ದರೂ, ರಾಜಕೀಯ ಪಕ್ಷಗಳು ವಿಧಾನಸಭಾ ಕ್ಷೇತ್ರವಾರು ಲೆಕ್ಕಾಚಾರದಲ್ಲಿ ತೊಡಗಿವೆ.

ವಿಧಾನಸಭಾ ಕ್ಷೇತ್ರಗಳ ಆಧಾರದಲ್ಲಿ ನೋಡುವುದಾದರೆ, ಚಾಮರಾಜನಗರ ತಾಲ್ಲೂಕಿನ 43 ಗ್ರಾಮ ಪಂಚಾಯಿತಿಗಳ ಪೈಕಿ, 17 ಪಂಚಾಯಿತಿಗಳು ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಗೆ ಬರುತ್ತವೆ. ಯಳಂದೂರು ತಾಲ್ಲೂಕು ಪೂರ್ತಿಯಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಕೊಳ್ಳೇಗಾಲ ತಾಲ್ಲೂಕಿನ ಹಲವು ಗ್ರಾಮಗಳು ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿದೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಸ್ವಲ್ಪ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಗುಂಡ್ಲುಪೇಟೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್‌ ಕೋಟೆಯಾಗಿರುವ ಯಳಂದೂರು ತಾಲ್ಲೂಕನ್ನು ಒಳಗೊಂಡಿರುವ ಕೊಳ್ಳೇಗಾಲದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಸಮ ಬಲದ ಹೋರಾಟ ತೋರಿದ್ದಾರೆ ಎನ್ನಲಾಗುತ್ತಿದೆ. ಹನೂರಿನಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವಿನಲ್ಲಿ ಮುಂದೆ ಇದ್ದಾರೆ ಎಂದು ತಿಳಿದು ಬಂದಿದೆ. ಮತದಾನಕ್ಕೂ ಪೂರ್ವದಲ್ಲಿ ಹನೂರಿನಲ್ಲಿ ಜೆಡಿಎಸ್‌ ಪರ ಒಲವುಳ್ಳ ಅಭ್ಯರ್ಥಿಗಳು ಉಳಿದ ಎರಡು ಪಕ್ಷಗಳ ಬೆಂಬಲಿತರಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು.

ತಮ್ಮ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ ಎಂಬ ವಿಶ್ವಾಸವನ್ನು ಮೂರೂ ಪಕ್ಷಗಳ ಮುಖಂಡರು ವ್ಯಕ್ತಪಡಿಸಿದ್ದಾರೆ.

ಫಲಿತಾಂಶದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು, ‘ನಮ್ಮ ಪಕ್ಷದ ಬೆಂಬಲಿಗರು 78ರಿಂದ 80 ಗ್ರಾಮ ಪಂಚಾಯಿತಿಗಳಲ್ಲಿ ಬಹುಮತ ಹೊಂದಿದ್ದು, ಅಧಿಕಾರ ಹಿಡಿಯಲಿದ್ದಾರೆ. ನಮ್ಮ ಪರವಾಗಿರುವ 800 ರಿಂದ 1,000 ಅಭ್ಯರ್ಥಿಗಳು ಗೆದ್ದಿರಬಹುದು. ಗುರುವಾರ ಈ ಬಗ್ಗೆ ಸ್ಪಷ್ಟ ಚಿತ್ರ ಸಿಗಲಿದೆ’ ಎಂದು ಹೇಳಿದರು.

‘ಚಾಮರಾಜನಗರ, ಕೊಳ್ಳೇಗಾಲ, ಹನೂರು ಕ್ಷೇತ್ರಗಳಲ್ಲಿ ಬೆಂಬಲಿತ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಗುಂಡ್ಲುಪೇಟೆಯಲ್ಲೂ ನಮ್ಮವರು ಗೆದ್ದಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರು ಪ್ರತಿಕ್ರಿಯಿಸಿ, ‘ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ, ಈ ಸಲ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಸಾಧನೆ ಉತ್ತಮವಾಗಿದೆ. 80ರಿಂದ 90ರಷ್ಟು ಪಂಚಾಯಿತಿಗಳಲ್ಲಿ ಅಧಿಕಾರಕ್ಕೆ ಬರಲಿದ್ದಾರೆ. ಚಾಮರಾಜನಗರದಲ್ಲಿ ಸ್ವಲ್ಪ ಹಿನ್ನಡೆಯಾದಂತೆ ಕಾಣುತ್ತಿದೆ. ಹಾಗಿದ್ದರೂ, 15 ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಬೆಂಬಲಿಗರು ಅಧ್ಯಕ್ಷರಾಗಲಿದ್ದಾರೆ. ಹನೂರಲ್ಲೂ ಉತ್ತಮ ಸಾಧನೆ ಮಾಡಿದ್ದೇವೆ. ಅಂದಾಜು 1000–1,200 ಸ್ಥಾನಗಳಲ್ಲಿ ನಮ್ಮವರು ಗೆದ್ದಿದ್ದಾರೆ’ ಎಂದು ಹೇಳಿದರು.

20–21 ಪಂಚಾಯಿತಿಗಳಲ್ಲಿ ಬಹುಮತ: ಪುಟ್ಟರಂಗಶೆಟ್ಟಿ

ಫಲಿತಾಂಶದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ‘ನನ್ನ ಕ್ಷೇತ್ರದ 26 ಪಂಚಾಯಿತಿಗಳ ಪೈಕಿ 20ರಿಂದ 21 ಪಂಚಾಯಿತಿಗಳನ್ನು ನಮ್ಮ ಬೆಂಬಲಿತ ಅಭ್ಯರ್ಥಿಗಳು ನಿಚ್ಚಳ ಬಹುಮತ ಪಡೆದಿದ್ದಾರೆ. ಪುಣಜನೂರು, ಅಟ್ಟುಗೂಳಿಪುರ, ಹೆಬ್ಬಸೂರು, ಚಂದಕವಾಡಿ, ಆಲೂರು, ನಾಗವಳ್ಳಿ, ಕೂಡ್ಲೂರು, ಶಿವಪುರ, ದೊಡ್ಡಮೋಳೆ, ಹರದನಹಳ್ಳಿ, ಹೆಗ್ಗೋಠಾರ, ಬದನಗುಪ್ಪೆ, ಮಾದಾಪುರ, ಭೋಗಾಪುರ, ಬಿಸಲವಾಡಿ, ಅಮಚವಾಡಿ, ಜ್ಯೋತಿಗೌಡನಪುರ, ವೆಂಕಟಯ್ಯನಛತ್ರ, ಕೊತ್ತಲವಾಡಿ, ನಂಜೇದೇವನಪುರ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದರು.

ಬದಲಾವಣೆ ಬಯಸಿದ್ದಾರೆ:ನಿರಂಜನಕುಮಾರ್‌

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಫಲಿತಾಂಶದ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು, ‘15 ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರು ಜಯ ಸಾಧಿಸಿದ್ದಾರೆ. ಇನ್ನೂ 10 ಪಂಚಾಯಿತಿಗಳಲ್ಲಿ ಗೆಲ್ಲುವ ಸಂಪೂರ್ಣ ಭರವಸೆ ಇದೆ. ಈ ಹಿಂದೆ ಕಾಂಗ್ರೆಸ್ ಬೆಂಭಲಿತರು ಅಧಿಕಾರದಲ್ಲಿದ್ದ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಈ ಸಲ ನಮ್ಮ ಬೆಂಬಲಿಗರು ಅಧಿಕಾರಕ್ಕೆ ಬರಲಿದ್ದಾರೆ. ಗ್ರಾಮೀಣ ಮಟ್ಟದಲ್ಲೂ ಮತದಾರರು ಬದಲಾವಣೆ ಬಯಸಿದ್ದಾರೆ’ ಎಂದು ಹೇಳಿದರು.

ಸಮಬಲದ ಹೋರಾಟ

ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಅವರು ಮಾತನಾಡಿ, ‘19 ಪಂಚಾಯತಿಗಳಲ್ಲಿ ಕಾಂಗ್ರೆಸ್ ಪರವಾದ ಸ್ಪಷ್ಟ ಚಿತ್ರಣ ದೊರೆತಿದೆ. ಇನ್ನು 4ರಿಂದ 5 ಬರುವ ಭರವಸೆ ಇದೆ. ಕ್ಷೇತ್ರದಲ್ಲಿ ಎರಡು ಪಕ್ಷಗಳಿಗೂ ಸಮಬಲ ಹೋರಾಟ ನಡೆದಿರುವ ಸಾಧ್ಯತೆಯಿದ್ದು, ಈಗಾಗಲೇ ಸೋತಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಇದರಿಂದಲೇ, ಮತದಾರರು ಕಾಂಗ್ರೆಸ್ ಪರವಿದ್ದಾರೆ ಎಂಬ ಸಂದೇಶ ರವಾನೆಯಾಗಿದೆ’ ಎಂದು ತಿಳಿಸಿದರು.

ಕಾಂಗ್ರೆಸ್‌ ಬೆಂಬಲಿತರಿಗೇ ಅಧಿಕಾರ: ನರೇಂದ್ರ

ಹನೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಕಾಂಗ್ರೆಸ್‌ ಶಾಸಕ ಆರ್‌.ನರೇಂದ್ರ ಅವರು, ‘ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಲಿತ ಅಭ್ಯರ್ಥಿಗಳೇ ಗೆಲ್ಲುವ ಮೂಲಕ ಪಂಚಾಯಿತಿಗಳಲ್ಲಿ ಅಧಿಕಾರ ಪಡೆದಿದ್ದರು. ಇದುವರೆಗೆ ಬಂದಿರುವ ಫಲಿತಾಂಶ ಗಮನಿಸಿದಾಗ ಈ ಬಾರಿಯೂ ನಮ್ಮ ಪರವಾಗಿರುವ ಅಭ್ಯರ್ಥಿಗಳು ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ’ ಎಂದು ಹೇಳಿದರು.

ಬಿಜೆಪಿ, ಕಾಂಗ್ರೆಸ್‌ ಕನಸು ಛಿದ್ರ

ಜೆಡಿಎಸ್‌ ಮುಖಂಡ ಮಂಜುನಾಥ್‌ ಅವರು ಮಾತನಾಡಿ, ‘ತಾಲ್ಲೂಕಿನಲ್ಲಿ ಜನರು ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಬಿಟ್ಟು, ಜೆಡಿಎಸ್ ಅನ್ನು ಮೂರನೇ ಶಕ್ತಿಯನ್ನಾಗಿ ತರಲು ಈ ಬಾರಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಬಯಸಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಲಿದ್ದಾರೆ. ಜೆಡಿಎಸ್ ಅನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾಂಗ್ರೆಸ್ ಹಾಗೂ ಬಿಜೆಪಿ ಕನಸು ಛಿದ್ರವಾಗಲಿದೆ’ ಎಂದು ಹೇಳಿದರು.

ಹೆಚ್ಚಿನ ಸ್ಥಾನಗಳಲ್ಲಿ ಜಯ

ಬಿಜೆಪಿ ನಾಯಕಿ ಪರಿಮಳ ನಾಗಪ್ಪ ಅವರು ಪ್ರತಿಕ್ರಿಯಿಸಿ, ‘ಕಳೆದ ಬಾರಿಗಿಂತ ಈ ಸಲ ಬೆಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಪಕ್ಷ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವಷ್ಟು ಬಲಹೀನವಾಗಿಲ್ಲ. ಈ ಬಾರಿ ಹೆಚ್ಚಿನ ಪಂಚಾಯಿತಿಗಳಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಹಿಡಿಯುವಂತೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT