ಚಾಮರಾಜನಗರ: ತೀವ್ರ ಮಳೆ ಕೊರತೆಯ ಪರಿಣಾಮ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಕೊಳವೆ ಬಾವಿಗಳಲ್ಲಿ ನೀರಿನ ಒರತೆ ಬತ್ತಿದ್ದು ಜನ–ಜಾನುವಾರುಗೆ ಕುಡಿಯಲು ಹಾಗೂ ಕೃಷಿಗೆ ನೀರಿನ ಕೊರತೆ ಎದುರಾಗಿದೆ.

ಜಿಲ್ಲೆಯಲ್ಲಿ ಸರಾಸರಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. 2023ರಲ್ಲಿ ಭೂಮಟ್ಟದಿಂದ ಕೆಳಗೆ 11.16 ಮೀಟರ್ಗೆ ಲಭ್ಯವಾಗುತ್ತಿದ್ದ ನೀರು 2025ರಲ್ಲಿ (ಅಕ್ಟೋಬರ್ವರೆಗಿನ ಮಾಹಿತಿ) 13.66 ಮೀಟರ್ಗೆ ಇಳಿದಿದೆ. ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಅಂತರ್ಜಲ ಮಟ್ಟ 2.2 ಮೀಟರ್ ಕುಸಿತವಾಗಿದೆ.

‘ಜಿಲ್ಲಾ ಅಂತರ್ಜಲ ಇಲಾಖೆ ನೀಡಿರುವ ಅಂಕಿ ಅಂಶಗಳು ಅಧ್ಯಯನದ ಉದ್ದೇಶಕ್ಕೆ ಇರುವ ಕೊಳವೆ ಬಾವಿಗಳಲ್ಲಿರುವ ಅಂತರ್ಜಲ ಮಟ್ಟವಾಗಿದೆ. ಈ ಕೊಳವೆ ಬಾವಿಗಳಿಂದ ನೀರೆತ್ತಲಾಗುವುದಿಲ್ಲ, ಬದಲಾಗಿ ಪ್ರತಿ ತಿಂಗಳು ಸಂಗ್ರಹವಿರುವ ನೀರಿನ ಪ್ರಮಾಣವನ್ನು ಆಧರಿಸಿ ಅಂತರ್ಜಲ ಮಟ್ಟವನ್ನು ಅಳೆಯಲಾಗುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

‘ವಾಸ್ತವವಾಗಿ ಜಿಲ್ಲೆಯಲ್ಲಿ ಕನಿಷ್ಠ 500 ರಿಂದ 600 ಅಡಿಗಳಿಗೆ ಅಂತರ್ಜಲ ಮಟ್ಟ ಕುಸಿದಿದ್ದು ಕೊಳವೆಬಾವಿಗಳಲ್ಲಿ ನೀರಿನ ಒರತೆ ಕಡಿಮೆಯಾಗಿದೆ. ಮಳೆಗಾಲದಲ್ಲೇ ಸಮಸ್ಯೆ ಕಾಡುತ್ತಿದ್ದು ಬೇಸಗೆಯಲ್ಲಿ ಬೋರ್ವೆಲ್ಗಳು ಸಂಪೂರ್ಣ ಬತ್ತಿಹೋಗುವ ಆತಂಕ ಎದುರಾಗಿದೆ’ ಎನ್ನುತ್ತಾರೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಗತಿಪರ ರೈತ ರಮೇಶ್.

ಹನೂರಿನಲ್ಲಿ ಗಂಭೀರ

ಜಿಲ್ಲೆಯಲ್ಲಿ ಅತಿ ಹೆಚ್ಚು ಅಂತರ್ಜಲ ಕುಸಿದಿರುವುದು ಹನೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ. ಹನೂರಿನಲ್ಲಿ 2023ರಲ್ಲಿ 10.69 ಮೀಟರ್ ಆಳದಲ್ಲಿ ದೊರೆಯುತ್ತಿದ್ದ ಅಂತರ್ಜಲ 2025ರಲ್ಲಿ 20.11 ಮೀಟರ್ಗೆ ಇಳಿದಿದೆ. ಗುಂಡ್ಲುಪೇಟೆಯಲ್ಲಿ 17.06 ಮೀಟರ್ಗೆ ದೊರೆಯುತ್ತಿದ್ದ ಅಂತರ್ಜಲ 18.17 ಮೀಟರ್ಗೆ ಇಳಿದಿದೆ.

ಹನೂರು ತಾಲ್ಲೂಕಿನಲ್ಲಿ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅಂತರ್ಜಲ ಮಟ್ಟ ಬರೋಬ್ಬರಿ 9.42 ಮೀಟರ್ ಕೆಳಗೆ ಕುಸಿದಿರುವುದು ಆತಂಕಕಾರಿ ಬೆಳವಣಿಗೆ. ಅಂಕಿ–ಅಂಶಗಳನ್ನು ವಿಶ್ಲೇಷಿಸಿದರೆ ಹನೂರಿನಲ್ಲಿ ಎರಡು ವರ್ಷಗಳ ಹಿಂದೆ 500 ಅಡಿ ಆಳದಲ್ಲಿ ದೊರೆಯುತ್ತಿದ್ದ ನೀರು 1,000 ಅಡಿ ಆಳಕ್ಕೆ ತಲುಪಿದೆ ಎಂದು ಹೇಳಬಹುದು ಎನ್ನುತ್ತಾರೆ ತಜ್ಞರು.

ಮಳೆ ಕೊರತೆ

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಭಾರಿ ಮಳೆ ಕೊರತೆ ಅಂತರ್ಜಲ ಕುಸಿತಕ್ಕೆ ಪ್ರಮುಖ ಕಾರಣ. ಜ.1ರಿಂದ ನ.10ರವರೆಗೆ ಜಿಲ್ಲೆಯಲ್ಲಿ ಸರಾಸರಿ 724 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಕೇವಲ 583 ಮಿ.ಮೀ ಮಳೆಯಾಗಿದ್ದು ಶೇ 20ರಷ್ಟು ಮಳೆ ಕೊರತೆ ಉಂಟಾಗಿದೆ.

‘ಚಾಮರಾಜನಗರ ತಾಲ್ಲೂಕಿನಲ್ಲಿ ವಾಡಿಕೆ 713 ಮಿ.ಮೀಗೆ 554 ಮಿ.ಮಿ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 726 ಮಿ.ಮೀ ವಾಡಿಕೆಗೆ 667, ಕೊಳ್ಳೇಗಾಲ 784 ಮಿ.ಮೀ ವಾಡಿಕೆಗೆ 637, ಹನೂರು 686 ಮಿ.ಮೀ ವಾಡಿಕೆಗೆ 551, ಯಳಂದೂರು 810 ಮಿ.ಮೀ ವಾಡಿಕೆಗೆ ಕೇವಲ 530 ಮಿ.ಮೀ ಮಾತ್ರ ಮಳೆಯಾಗಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಬಿತ್ತನೆಯೂ ಕುಸಿತ

‘ಮಳೆ ಕೊರತೆಯಿಂದ ಬಿತ್ತನೆ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 28,163 ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ 23,548 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ನಡೆದಿದ್ದು ಶೇ 83.61ರಷ್ಟು ಗುರಿ ಸಾಧನೆಯಾಗಿದೆ. ಚಾಮರಾಜನಗರ (ಶೇ 110) ಹಾಗೂ ಗುಂಡ್ಲುಪೇಟೆಯಲ್ಲಿ (ಶೇ 102) ಗುರಿ ಮೀರಿ ಬಿತ್ತನೆ ನಡೆದಿದ್ದರೆ ಹನೂರು ತಾಲ್ಲೂಕಿನಲ್ಲಿ ಕೇವಲ 38.22ರಷ್ಟು ಬಿತ್ತನೆ ನಡೆದಿದ್ದು ಶೇ 62ರಷ್ಟು ಕೊರತೆ ಉಂಟಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ 61.42, ಯಳಂದೂರು ತಾಲ್ಲೂಕಿನಲ್ಲಿ ಶೇ 63.75ರಷ್ಟು ಬಿತ್ತನೆಯಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪೂರ್ಣಿಮಾ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ತೀವ್ರ ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತವಾಗಿದೆ. ಹನೂರು ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಇಳಿಕೆಯಾಗಿದ್ದು ಸಮಸ್ಯೆ ಗಂಭೀರವಾಗಿದೆ.
–ಶೋಭಾರಾಣಿ ಪಿ.ಎಸ್, ಜಿಲ್ಲಾ ಅಂತರ್ಜಲ ಇಲಾಖೆ ಅಧಿಕಾರಿ

‘ಜಲ ಸಾಕ್ಷರತೆ ಮೂಡಿಸಿ’

‘ಮಳೆಗಾಲದಲ್ಲಿ ಬಿದ್ದ ನೀರನ್ನು ಭೂಮಿಗೆ ಇಂಗಿಸುವ ಕೆಲಸ ಮಾಡಬೇಕು ಗ್ರಾಮಾಂತರ ಭಾಗಗಳಲ್ಲಿ ಕೃಷಿಗೆ ಪ್ರಮುಖ ನೀರಿನ ಮೂಲಗಳಾಗಿರುವ ಕೆರೆ ಕಟ್ಟೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಬೇಕು ರೈತರಲ್ಲಿ ಜಲ ಸಾಕ್ಷರತೆ ಮೂಡಿಸಬೇಕು. ಹನೂರು ತಾಲ್ಲೂಕಿನಲ್ಲಿ ಕಾವೇರಿ ನದಿ ಹರಿದರೂ ಅಲ್ಲಿ ಕೆರೆ–ಕಟ್ಟೆ ಚೆಕ್ಡ್ಯಾಂಗಳನ್ನು ನಿರ್ಮಾಣ ಮಾಡದೆ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿಯುತ್ತಿದೆ. ಆಳುವ ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹನೂರು ತಾಲ್ಲೂಕು ಸಂಪೂರ್ಣ ಬರಡಾಗಿದೆ. ಜನಜಾನುವಾರುಗಳಿಗೂ ಕುಡಿಯಲು ನೀರಿನ ತತ್ವಾರ ಎದುರಾಗಿದೆ’ ಎನ್ನುತ್ತಾರೆ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್.

ಅಂತರ್ಜಲ ಮಟ್ಟ (ಮೀಟರ್ಗಳಲ್ಲಿ)

ತಾಲ್ಲೂಕು; 2023;2025

ಚಾಮರಾಜನಗರ; 10.69;12.93

ಗುಂಡ್ಲುಪೇಟೆ; 17.06;18.17

ಕೊಳ್ಳೇಗಾಲ; 11.46;9.01

ಹನೂರು; 10.69;20.11

ಯಳಂದೂರು; 7.42;8.07

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.