ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ: ದೇಸಿ ಕಲೆಗಳ ಪಸರಿಸುತ್ತಿರುವ ಗ್ರಾಮೀಣ ಪ್ರತಿಭೆ

ಗುಂಡ್ಲುಪೇಟೆ ತಾಲ್ಲೂಕಿನ ಕಲಾವಿದ ನಾರಾಯಣಸ್ವಾಮಿ
Published : 1 ಅಕ್ಟೋಬರ್ 2024, 15:55 IST
Last Updated : 1 ಅಕ್ಟೋಬರ್ 2024, 15:55 IST
ಫಾಲೋ ಮಾಡಿ
Comments

ಗುಂಡ್ಲುಪೇಟೆ: ತಾಲ್ಲೂಕಿನ ಮದ್ದಯ್ಯನಹುಂಡಿ ಗ್ರಾಮದ ಕಲಾವಿದ ನಾರಾಯಣ ಸ್ವಾಮಿ ನೆಲದ ದೇಸಿ ಕಲೆಗಳನ್ನು ನಾಡಿನೆಲ್ಲೆಡೆ ಪಸರಿಸುವ ಕಾರ್ಯದಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿದ್ದು ಕಲೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಮೊದಲ ತಲೆಮಾರಿನ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ನಾರಾಯಣಸ್ವಾಮಿ ಸಂಗೀತ ಸೇವೆ ಮಾಡುತ್ತಿದ್ದು ಸಂಗೀತ ಆಸಕ್ತಿ ಇರುವವರೆಗೂ ಕಲೆ ಧಾರೆ ಎರೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಶಾಲಾ ಕಾಲೇಜು ದಿನಗಳಲ್ಲಿ ಹಾಗೂ ಎನ್ಎಸ್ಎಸ್‌ ಹಾಗೂ ಎನ್‌ಸಿಸಿಯಲ್ಲಿ ಸಕ್ರಿಯವಾಗಿದ್ದ ಅವಧಿಯಲ್ಲಿ ಕಲಿತ ಕಲೆಗಳತ್ತ ಆಸಕ್ತಿ ಬೆಳೆಸಿಕೊಂಡು ಸಂಗೀತ ಕಲೆಯನ್ನು ಮೈಗೂಡಿಸಿಕೊಂಡಿರುವ ನಾರಾಯಣ ಸ್ವಾಮಿ ಬಹುಮುಖ ಪ್ರತಿಭೆಯೂ ಹೌದು.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಪ್ರೌಢಶಾಲಾ ಮತ್ತು ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಮೈಸೂರು ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಬಳಿಕ ಗಂಗೂಬಾಯಿ ಹಾನಗಲ್ ವಿವಿಯಲ್ಲಿ ಸಂಗೀತ ವ್ಯಾಸಂಗ ಮಾಡಿದ್ದಾರೆ.

ಇಂಗ್ಲಿಷ್ ವಿಷಯ ಹಾಗೂ ಸಂಗೀತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕುಟುಂಬದಲ್ಲಿ ಮೊದಲ ತಲೆಮಾರಿನ ಸಂಗೀತ ಕಲಾವಿದರಾಗಿ ಬೆಳೆದಿದ್ದಾರೆ ನಾರಾಯಣ ಸ್ವಾಮಿ.

ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿರುವ ಅವರು, ಪದ್ಮಪಾಣಿ ಲಲಿತಕಲಾ ಅಕಾಡೆಮಿ ಸ್ಥಾಪಿಸಿ ಕಳೆದ ಹತ್ತು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಿಂದೂಸ್ತಾನಿ ಸಂಗೀತ, ಕೀ ಬೋರ್ಡ್, ಹಾರ್ಮೋನಿಯಂ ತರಬೇತಿ ನೀಡುತ್ತಿದ್ದಾರೆ. ಸುಗಮ ಸಂಗೀತದ ಪ್ರಕಾರಗಳಾದ ಭಾವಗೀತೆ, ಭಕ್ತಿ, ಗೀತೆ, ಜನಪದ ಗೀತೆ, ತತ್ವಪದ ಸೇರಿದಂತೆ ದೇಶಭಕ್ತಿ ಗೀತೆಯ ತರಬೇತಿಯನ್ನೂ ನೀಡುತ್ತಿದ್ದಾರೆ.

ಕೇಂದ್ರ ಯುವ ಜನ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ರಾಷ್ಟ್ರೀಯ ಮತ್ತು ದಕ್ಷಿಣ ವಿಭಾಗ ಮಟ್ಟದ ಅಂತರ ವಿಶ್ವವಿದ್ಯಾಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಬುದ್ದನೆಡೆಗೆ’, ‘ರಾಕ್ಷಸ’, ‘ದೂತ ವಾಕ್ಯ’, ‘ದೂತ ಘಟೋದ್ಗಜ’, ‘ಪೂನಾ ಒಪ್ಪಂದ’, ‘ಸಂವಿಧಾನ’, ‘ದೇವ ವೃದ್ಧರು’ ಇತ್ಯಾದಿ ನಾಟಕಗಳಲ್ಲಿ ಅಭಿನಯಿಸಿ ಸಂಗೀತ ನಿರ್ದೇಶನದಲ್ಲೂ ಯಶಸ್ವಿಯಾಗಿದ್ದಾರೆ.

ಸಮಾನತೆಯ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೀದಿನಾಟಕಗಳನ್ನು ಪ್ರದರ್ಶಿಸಿದ್ದಾರೆ. ಪ್ರಬುದ್ಧ ಭಾರತ, ದಮ್ಮದೀಪ, ದಮ್ಮಪದ, ಬಹುಜನ ನಾಯಕ, ಹೋರಾಟದ ಗೀತೆಗಳು ಸೇರಿದಂತೆ ಹಲವು ದೇಶಭಕ್ತಿಯ ಗೀತೆಗಳಿಗೆ ಧ್ವನಿಯಾಗಿದ್ದಾರೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ನೀಡುವಲ್ಲೂ ತೊಡಗಿಸಿಕೊಂಡಿದ್ದಾರೆ.

ನಾಡ ಹಬ್ಬ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರತಿಭೆ ಅನಾವರಣಗೊಳಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ಕಾಲೇಜು ದಿನಗಳಲ್ಲಿ ಕಲಿತ ಕಲೆಗಳು ಕಲಾಕ್ಷೇತ್ರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು. ಕಲೆಯನ್ನು ಅಪ್ಪಿಕೊಂಡರೆ ಯಶಸ್ವಿಯಾಗಬಹುದು ಎಂಬ ಪಾಠ ಕಲಿತಿದ್ದೇನೆ. ಕಲೆ ಯಾರ ಸ್ವತ್ತೂ ಅಲ್ಲ, ಶ್ರಮ ಮತ್ತು ತಾಳ್ಮೆ ಇದ್ದರೆ ಕಲೆಯನ್ನು ಸಿದ್ಧಿಸಿಕೊಳ್ಳಬಹುದು. ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ವೃತ್ತಿ ಮಾಡುತ್ತಿದ್ದರೂ ಕಲೆಯ ಅಭಿರುಚಿ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ ನಾರಾಯಣಸ್ವಾಮಿ.

ನಾರಾಯಣ ಸ್ವಾಮಿ
ನಾರಾಯಣ ಸ್ವಾಮಿ
ಕಾಲೇಜು ದಿನಗಳಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿಯಲ್ಲಿ ಸಕ್ರಿಯ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಂಗೀತ ತರಬೇತಿ ಹಲವು ನಾಟಕಗಳಲ್ಲಿ ಅಭಿನಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT