ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಈಡೇರಿದ ರೈತರ ಬಹುದಿನಗಳ ಬೇಡಿಕೆ, ಕೆರೆಗಳಿಗೆ ಹರಿದು ಬರಲಿದೆ ನೀರು

ಬೇಗೂರು ಹೋಬಳಿಯ ಐದು ಕೆರೆಗಳಿಗೆ ಹರಿದು ಬರಲಿದೆ ನೀರು, 26ರಂದು ಯೋಜನೆಗೆ ಚಾಲನೆ
Last Updated 22 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಹೋಬಳಿ ರೈತರ ಬಹುದಿನಗಳ ಬೇಡಿಕೆ ಈಡೇರುವ ಸಮಯ ಬಂದಿದೆ. ಕಮರಹಳ್ಳಿ ಕೆರೆಯಿಂದ ಹೋಬಳಿಯ ಉಳಿದ ಐದು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದೇ 26ರಂದು ಉದ್ಘಾಟನೆಗೊಳ್ಳಲಿದೆ.

ಕಮರಹಳ್ಳಿ ಕೆರೆಯಿಂದರಾಘವಾಪುರ, ಗರಗನಹಳ್ಳಿ, ಹಳ್ಳದ ಮಾದಳ್ಳಿ, ಅಗತಗೌಡನಹಳ್ಳಿ ಮತ್ತು ಮಳವಳ್ಳಿ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಚಾಲನೆ ನೀಡಲಿದ್ದಾರೆ.

ನಂಜನಗೂಡು ತಾಲ್ಲೂಕಿನಗಾಂಧಿ ಗ್ರಾಮ ಏತ ನೀರಾವರಿ ಯೋಜನೆ ಅಡಿಯಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.ಒಟ್ಟು ₹67.50 ಕೋಟಿ ವೆಚ್ಚದ ಯೋಜನೆಯಲ್ಲಿ ನಂಜಗೂಡು ತಾಲ್ಲೂಕಿನ ಮೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಒಂಬತ್ತು ಕೆರೆಗಳಿಗೆ ನೀರು ತುಂಬಿಸುವ ಗುರಿ ಹೊಂದಲಾಗಿತ್ತು.

ಈಗಾಗಲೇ ಮೊದಲ ಹಂತದ ಯೋಜನೆಯಲ್ಲಿ ಕಬಿನಿ ನದಿಯಿಂದ ಬೇಗೂರು ಹೋಬಳಿಯಚಿಕ್ಕಾಟಿ, ಬೆಳಚವಾಡಿ, ಕರಮಹಳ್ಳಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಕಮರಹಳ್ಳಿ ಕೆರೆಯಿಂದ ಉಳಿದ ಐದು ಕೆರೆಗಳಿಗೆ ಪೈಪ್‌ಮೂಲಕ ನೀರು ಹರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ಸಚಿವರಾಗಿದ್ದ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರು ಯೋಜನೆಯನ್ನು ತಾಲ್ಲೂಕಿಗೆ ಮಂಜೂರು ಮಾಡಿಸಿದ್ದರು. ಅವರ ನಿಧನದ ನಂತರ ಅವರ ಪತ್ನಿ ಎಂ.ಸಿ.ಮೋಹನಕುಮಾರಿ ಅವರು ಉಪಚುನಾವಣೆಯಲ್ಲಿ ಗೆದ್ದು ಯೋಜನೆ ಕಾರ್ಯರೂಪಕ್ಕೆ ತರಲು ಯತ್ನಿಸಿ ಚಿಕ್ಕಾಟಿ ಕೆರೆ ಮತ್ತು ಬೆಳಚವಾಡಿ ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಕಮರಹಳ್ಳಿ ಕೆರೆ ತುಂಬುವುದರೊಳಗೆ ವಿಧಾನಸಭಾ ಚುನಾವಣೆ ಎದುರಾಗಿ ಅವರು ಸೋತಿದ್ದರು. ಆ ನಂತರ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ಕೆರೆಗೆ ನೀರು ಬಿಡಿಸಲು ಯಶಸ್ವಿಯಾದರು. ಈಗ ಉಳಿದ ಕೆರೆಗಳಿಗೂ ನೀರು ಹರಿಸಲಾಗುತ್ತಿದೆ.

‘ತಾಲ್ಲೂಕಿನ ಬೇಗೂರು ಭಾಗದಲ್ಲಿ ಸಾಮಾನ್ಯವಾಗಿ ಕಡಿಮೆ ಮಳೆಯಾಗುತ್ತದೆ. ಹೀಗಾಗಿ, ಮಳೆಗಾಲದಲ್ಲೂ ಈ ಭಾಗದ ಕೆರೆಗಳು ತುಂಬುವುದಿಲ್ಲ‌. ಇದೀಗ ಬೇಗೂರು ಭಾಗದ ಕೆರೆಗಳು ತುಂಬುತ್ತಿರುವುದರಿಂದ ಅಂತರ್ಜಲ ಅಭಿವೃದ್ಧಿ ಆಗುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉಪಯುಕ್ತವಾಗಲಿದೆ’ ಎಂದು ಪ್ರಗತಿಪರ ರೈತ ರಾಘವಾಪುರ ದೇವಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರ್ವಭಾವಿ ಸಭೆ: ಈ ಮಧ್ಯೆ, ಶಾಸಕ ಸಿ.ಎಸ್‌.ನಿರಂಜನಕುಮಾರ್ ಅವರು ಭಾನುವಾರ ಕೆರೆ ಪ್ರದೇಶದ ರೈತರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.

ಯೋಜನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಇದು ಎರಡನೇ ಹಂತದ ಕೆರೆ ತುಂಬಿಸುವ ಯೋಜನೆ. ಈಗಾಗಲೇ ಮೂರು ಕೆರೆಗಳು ಭರ್ತಿಯಾಗಿವೆ. ಉಳಿದ ಕೆರೆಗಳಿಗೆ ನೀರು ಹರಿವುದಕ್ಕಾಗಿ ರೈತರು ಬಹಳ ದಿನಗಳಿಂದ ಕಾಯುತ್ತಿದ್ದರು. ಅದೀಗ ಸಾಕಾರವಾಗುತ್ತಿದೆ. ಇದರಿಂದ ಈ ಭಾಗದ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ’ ಎಂದು ಹೇಳಿದರು.

220 ಕೆ.ವಿ ಸ್ಥಾವರ ಉದ್ಘಾಟನೆ:ಬೇಗೂರು ಹೋಬಳಿಯ ಕಮರಹಳ್ಳಿ ಕೆರೆಯ ಬಳಿಯಲ್ಲಿ ಕೆಪಿಟಿಸಿಎಲ್‌ ನಿರ್ಮಿಸಿರುವ ಬಹುಕೋಟಿ ವೆಚ್ಚದ 220 ಕೆ.ವಿ ಸಾಮರ್ಥ್ಯದ ವಿದ್ಯುತ್‌ ವಿತರಣಾ ಕೇಂದ್ರವನ್ನೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT