ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ತ್ರಿವಳಿ ಕೊಲೆ ಪೂರ್ವನಿಯೋಜಿತ

15 ಆರೋಪಿಗಳ ಬಂಧನ, ನ್ಯಾಯಾಲಯಕ್ಕೆ ಹಾಜರು– ಎಸ್‌ಪಿ ಎಚ್‌.ಡಿ.ಆನಂದಕುಮಾರ್‌ ಹೇಳಿಕೆ
Last Updated 5 ಜೂನ್ 2020, 4:44 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಮೇ 26ರ ರಾತ್ರಿ ನಡೆದ ಮೂವರ ಕೊಲೆ ಹಾಗೂ ನಾಲ್ಕು ಜನರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ18 ಆರೋಪಿಗಳ ಪೈಕಿ 15 ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.

‘ಇನ್ನ ಅಲಿಯಾಸ್‌ ಇನಾಯತ್‌ ಹಾಗೂ ನೂರುಲ್ಲಾ ತಂಡಗಳ ನಡುವಿನವೈಯಕ್ತಿಕ ದ್ವೇಷ, ಉದ್ಯಮ, ವ್ಯಾಪಾರದ ವಿಚಾರದಲ್ಲಿದ್ದ ವೈಮನಸ್ಸಿನಿಂದ ಈ ಘಟನೆ ನಡೆದಿದೆ.ಪೂರ್ವ ನಿಯೋಜಿತವಾಗಿ ಕೃತ್ಯ ನಡೆಸಲಾಗಿದೆ ಎಂಬುದು ತನಿಖೆಯ ಸಂದರ್ಭದಲ್ಲಿ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಎಚ್‌.ಡಿ.ಆನಂದಕುಮಾರ್‌ ಅವರು ಹೇಳಿದ್ದಾರೆ.

ಅನ್ಸು ಅಲಿಯಾಸ್‌ ಅನ್ಸರ್‌ ಅಲಿ (30) (1ನೇ ಆರೋಪಿ), ಅಸ್ಲಾಂ ಪಾಷ ಅಲಿಯಾಸ್‌ ಅಸ್ಲಾಂ (44) (ಎ2), ಇಕ್ರಂ ಪಾಷ (38) (ಎ3), ಅನೀಸ್‌ ಪಾಷ ಅಲಿಯಾಸ್‌ ಅನೀಸ್‌ (27) (ಎ4), ಸಮೀರ್‌ ಅಲಿಯಾಸ್‌ ಜಮೀರ್‌ (40) (ಎ5), ಇನ್ನ ಅಲಿಯಾಸ್‌ ಇನಾಯತ್‌ (40) (ಎ6), ಅನ್ವರ್‌ ಪಾಷ ಅಲಿಯಾಸ್‌ ಕುರ್ರಂ (28) (ಎ7), ಏಜಾಸ್‌ ಪಾಷ (35) (ಎ8), ಮುದಸ್ಸಿರ್‌ (36) (ಎ9), ಪಾಪು ಅಲಿಯಾಸ್‌ ಫಾರೂಕ್‌ (26) (ಎ10), ಸುಹೇಲ್‌ ಪಾಷ (36) (ಎ11), ಇಂತಿಯಾಜ್‌ ಅಲಿಯಾಸ್‌ ಗಿಡ್ಡು (34) (ಎ12), ಅಲ್ತಾಪ್‌‌ ಪಾಷ (40) (ಎ13), ಮುಜಾಮಿಲ್ (32) (ಎ14)‌ ಮತ್ತು ಅಮ್ಜಾತ್‌ ಪಾಷ (67) (ಎ15) ಬಂಧಿತರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ಅವರು ಘಟನೆಯ ವಿವರಗಳನ್ನು ನೀಡಿದ ಆನಂದಕುಮಾರ್‌ ಅವರು, ‘ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆಗೆ ಒಳಪಡಿಸುವುದಕ್ಕಾಗಿ ಮತ್ತೆ ವಶಕ್ಕೆ ಪಡೆಯಲಾಗುವುದು’ ಎಂದು ಹೇಳಿದರು.

‘ಎರಡೂ ತಂಡಗಳ ನಡುವೆ ಹಲವು ತಿಂಗಳುಗಳಿಂದ ದ್ವೇಷ ಇತ್ತು. ಈ ಹಿಂದೆ ತಂಡವೊಂದರ ಸದಸ್ಯರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾದ ನಂತರ ವೈಮನಸ್ಸು ಹೆಚ್ಚಿತ್ತು. ಮೈಕ್ರೊ ಫೈನಾನ್ಸ್‌ ವಿಚಾರದಲ್ಲೂ ಗಲಾಟೆ ನಡೆಯುತ್ತಿತ್ತು. ಎರಡೂ ತಂಡಗಳಲ್ಲಿ ಹಲವರು ಹೋಟೆಲ್‌ ಡಾಬಾಗಳನ್ನು ಇಟ್ಟಿದ್ದರು. ವ್ಯಾಪಾರದ ವಿಚಾರದಲ್ಲೂ ಪರಸ್ಪದ ದ್ವೇಷ ಕಾರುತ್ತಿದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಅಕ್ರಮ ಹಸುಗಳ ಸಾಗಣೆ ವಿಚಾರದಲ್ಲಿ ವೈಮನಸ್ಸು ಹೆಚ್ಚಾಗಿತ್ತು. ಇನಾಯತ್‌ ಅವರ ತಂಡದ ವ್ಯವಹಾರದ ಬಗ್ಗೆ ನೂರುಲ್ಲಾ ತಂಡ ಮಾಧ್ಯಮಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿತ್ತು ಎಂಬುದು ಕೋಪಕ್ಕೆ ಕಾರಣ. ಈ ಎಲ್ಲ ಕಾರಣಕ್ಕೆ ಕೃತ್ಯ ನಡೆದಿದೆ’ ಎಂದು ಹೇಳಿದರು.

ನಾಲ್ಕು ತಂಡಗಳು: ‘ಆರೋಪಿಗಳ ಬಂಧನಕ್ಕಾಗಿ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಆರಂಭದಲ್ಲಿ ಚಾಮರಾಜನಗರ ಡಿವೈಎಸ್‌ಪಿ ಜೆ.ಮೋಹನ್‌ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ನಂತರ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರಿಂದ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ನಾನು ಕೂಡ ಪ್ರತಿ ದಿನ ಖುದ್ದಾಗಿ ಮಾಹಿತಿ ಕಲೆಹಾಕುತ್ತಿದ್ದೆ. ತನಿಖಾ ತಂಡದ ಸಿಬ್ಬಂದಿ ಹಗಲು ರಾತ್ರಿ ಶ್ರಮವಹಿಸಿ 10 ದಿನಗಳಲ್ಲೇ ಪ್ರಕರಣದ ಬಹುತೇಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಮೂರು ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುತ್ತೇವೆ’ ಎಂದು ಆನಂದಕುಮಾರ್‌ ಅವರು ಹೇಳಿದರು.

ಚಾಮರಾಜನಗರ ಡಿವೈಎಸ್‌ಪಿ ಜೆ.ಮೋಹನ್‌, ಕೊಳ್ಳೇಗಾಲ ಡಿವೈಎಸ್‌ಪಿ ನವೀನ್‌ಕುಮಾರ್‌, ಡಿಸಿಆರ್‌ಬಿ ಡಿವೈಎಸ್‌ಪಿ ಅನ್ಸರ್‌ ಅಲಿ, ಗುಂಡ್ಲುಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಹದೇವಸ್ವಾಮಿ, ಇನ್‌ಸ್ಪೆಕ್ಟರ್‌ಗಳಾದ ರವಿನಾಯಕ್‌ (ಹನೂರು ಠಾಣೆ), ಮನೋಜ್‌ ಕುಮಾರ್‌ (ರಾಮಾಪುರ), ಮಹದೇವಶೆಟ್ಟಿ (ಡಿಸಿಐಬಿ), ರಾಜಣ್ಣ (ಸಿಇಎನ್‌, ಚಾಮರಾಜನಗರ), ಪುಟ್ಟಸ್ವಾಮಿ (ಮಹಿಳಾ ಠಾಣೆ, ಚಾಮರಾಜನಗರ), ಮಂಜು (ಚಾಮರಾಜನಗರ ಗ್ರಾಮಾಂತರ), ಮೋಹನ್‌ಕುಮಾರ್‌ (ಡಿಸಿಆರ್‌ಬಿ), ಸಬ್‌ ಇನ್‌ಸ್ಪೆಕ್ಟರ್‌ಗಳಾದ ಡಿ.ಕೆ.ಲತೇಶ್‌ ಕುಮಾರ್‌ (ಗುಂಡ್ಲುಪೇಟೆ), ಸಿ.ಮಂಜುನಾಥಪ್ರಸಾದ್‌ (ರಾಮಾಪುರ), ಲೋಹಿತ್‌ ಕುಮಾರ್‌ (ಚಾಮರಾಜನಗರ ಗ್ರಾಮಾಂತರ), ಅಶೋಕ್‌ (ಕೊಳ್ಳೇಗಾಲ), ವೀರಭದ್ರಪ್ಪ (ಕೋಳ್ಳೇಗಾಲ ಗ್ರಾಮಾಂತರ), ಲೋಕೇಶ್‌ (ಬೇಗೂರು), ನಾಗೇಶ್ (ಹನೂರು), ವೀರಣ್ಯಾರಾಧ್ಯ (ಮಹದೇಶ್ವರ ಬೆಟ್ಟ), ತಾಜುದ್ದೀನ್‌ ಟಿ.ಎಂ (ಚಾಮರಾಜನಗರ ಪಟ್ಟಣ ಠಾಣೆ)‌ ತನಿಖಾ ತಂಡದಲ್ಲಿದ್ದರು.

ಕರ್ತವ್ಯಲೋಪ ಎಸಗಿದವರ ವಿರುದ್ಧ ಕ್ರಮ: ಘಟನೆ ನಡೆದ ಸ್ಥಳಕ್ಕೆ ಪೊಲೀಸರು ತಲುಪುವಾಗ ತಡವಾಗಿತ್ತು, ಪ್ರಕರಣ ಮುಚ್ಚಿ ಹಾಕಲು ಕೆಲವು ಸಿಬ್ಬಂದಿ ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆನಂದಕುಮಾರ್‌ ಅವರು, ‘ಮೇ 26ರ ರಾತ್ರಿ 8.30ಕ್ಕೆ ಘಟನೆ ನಡೆದಿದೆ. 9.15ಕ್ಕೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಮಾರಣಾಂತಿಕವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ನಮ್ಮ ಸಿಬ್ಬಂದಿಯೇ ಕ್ರಮ ವಹಿಸಿದ್ದಾರೆ. ನಾವು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತೇವೆ. ನಮ್ಮ ಸಿಬ್ಬಂದಿಯಿಂದಲೂ ತಪ್ಪಾಗಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಬಿಗಿ ಬಂದೋಬಸ್ತ್‌: ‘ಈ ಘಟನೆಗೆ ಪ್ರತಿಯಾಗಿ, ಗುಂಡ್ಲುಪೇಟೆಯಲ್ಲಿ ಮತ್ತೆ ಹಿಂಸಾಚಾರ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಡಿವೈಎಸ್‌ಪಿ ನವೀನ್‌ಕುಮಾರ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸಮುದಾಯದ ಮುಖಂಡರ ಶಾಂತಿ ಸಭೆಯನ್ನೂ ನಡೆಸಲಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದನ ಸಾಗಾಟಕ್ಕೆ ತಡೆ ಬಿದ್ದಿದ್ದೇ ಕಾರಣ: ‘ಇನಾಯತ್ ತಂಡ ನಡೆಸುತ್ತಿದ್ದ ದನ ಸಾಗಾಟದ ವಿವರಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡು, ಪೊಲೀಸರು ಆ ವ್ಯವಹಾರಕ್ಕೆ ತಡೆ ಒಡ್ಡಿದ ನಂತರ ಎರಡೂ ತಂಡಗಳ ನಡುವಿನ ದ್ವೇಷ ಹೆಚ್ಚಿತ್ತು. ನೂರುಲ್ಲಾ ನೇತೃತ್ವದ ತಂಡ ಮಾಧ್ಯಮಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದಲೇ ವ್ಯವಹಾರಕ್ಕೆ ತೊಂದರೆಯಾಗಿದೆ ಎಂಬುದು ಇನಾಯತ್‌ ತಂಡದ ಭಾವನೆಯಾಗಿತ್ತು. ಅಲ್ಲಿಂದ ನಂತರವೇ ಎರಡು ತಂಡಗಳ ನಡುವೆ ಜಗಳ ಆರಂಭವಾಗಿತ್ತು. ಇದೇ ಕಾರಣಕ್ಕೆ ಕೃತ್ಯ ಕಾರಣವಾಯಿತು’ ಎಂದು ತನಿಖಾ ತಂಡದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇನಾಯತ್‌ ತಂಡದ ಸದಸ್ಯರು ಮಾರಕಾಸ್ತ್ರಗಳಿಂದ ದಾಳಿ ಮಾಡುವುದಕ್ಕೆ ಬಂದಿದ್ದರು. ಆದರೆ, ನೂರುಲ್ಲಾ ಬೆಂಬಲಿಗರ ಬಳಿ ದೊಣ್ಣೆಯೂ ಇರಲಿಲ್ಲ. ಇಲ್ಲದಿದ್ದರೆ ಘರ್ಷಣೆ ಇನ್ನಷ್ಟು ಜೋರಾಗಿ ದಾಳಿ ಇನ್ನಷ್ಟು ಹೆಣಗಳು ಬೀಳುತ್ತಿದ್ದವು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT