ಗುರುವಾರ , ಆಗಸ್ಟ್ 11, 2022
21 °C
ಸಂತೇಮರಹಳ್ಳಿ: ಪ್ಲಾಸ್ಟಿಕ್‌ ಚೀಲದಿಂದ ಹಗ್ಗ ತಯಾರಿಸಿ ತಾಯಿಯನ್ನು ಸಾಕುತ್ತಿರುವ ಮಹದೇವಮ್ಮ

ಅಂಗವೈಕಲ್ಯಕ್ಕೆ ಕುಗ್ಗದೆ ಬದುಕು ಕಟ್ಟಿಕೊಂಡ ಧೀರೆ

ಮಹದೇವ್‌ ಹೆಗ್ಗವಾಡಿಪುರ‌ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಅಂಗವೈಕಲ್ಯ ಎಂಬುದು ದೇಹಕ್ಕೆ ವಿನಾ ಮನಸ್ಸಿಗಲ್ಲ ಎಂಬ ಮಾತಿಗೆ ಉದಾಹರಣೆಯಾಗಿ ನಿಲ್ಲುತ್ತಾರೆ, ಹೋಬಳಿಯ ಬಡಗಲಮೋಳೆ ಗ್ರಾಮದ ಮಹದೇವಮ್ಮ.

ಮಹದೇವಮ್ಮ ಅವರಿಗೆ ಈಗ 40ರ ಹರೆಯ. ಇನ್ನೂ ಮದುವೆಯಾಗಿಲ್ಲ. ವಯಸ್ಸಾದ ತಾಯಿ ಜೊತೆಯಲ್ಲಿದ್ದಾರೆ. ಹುಟ್ಟುವಾಗಲೇ ಬಲ ಕಾಲು ಊನವಾಗಿರುವುದರಿಂದ ಅವರಿಗೆ ಹೆಚ್ಚು ದೂರು ನಡೆಯಲು ಆಗುವುದಿಲ್ಲ. ಬೇರೆ ಊರುಗಳಿಗೆ ಹೋಗುವುದಕ್ಕೆ ಆಗುವುದಿಲ್ಲ. ಅಂಗವಿಕಲ ಹಾಗೂ ಹಿರಿಯ ನಾಗಕರಿರ ಸಬಲೀಕರಣ ಇಲಾಖೆಯಿಂದ ಬರುವ ಮಾಸಾಶನ ಬಿಟ್ಟರೆ ಬೇರೆ ಸಂಪಾದನೆ ಇಲ್ಲ.   

ತಮ್ಮನ್ನು ಹಾಗೂ ತಾಯಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇರುವುದರಿಂದ ಹೆಚ್ಚು ಹಣ ಸಂಪಾದನೆಗಾಗಿ ಯಾವುದಾದರೂ ಉದ್ಯೋಗ ಹುಡುಕುವುದು ಮಹದೇವಮ್ಮ ಅವರಿಗೆ ಅನಿವಾರ್ಯವಾಯಿತು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಹಗ್ಗ ತಯಾರಿಸುವ ಕಾಯಕ. ದಿನನಿತ್ಯ ಗೋಣಿ ಚೀಲಗಳಿಂದ ಪ್ಲಾಸ್ಟಿಕ್ ಹಗ್ಗ ತಯಾರಿಸಿ, ಅವುಗಳನ್ನು ಮಾರಾಟ ಮಾಡಿ, ಬಂದಿರುವ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ತಾಯಿಯನ್ನೂ ಸಲಹುತ್ತಿದ್ದಾರೆ. 

ಮಹದೇವಮ್ಮ ಅವರಿಗೆ ಬಾಲ್ಯದಲ್ಲಿ ಓದುವ–ಬರಹ ಕಲಿಯುವ ಆಸೆ ಇತ್ತು. ಆದರೆ, ಶಾಲೆಗಾಗಿ ಕುದೇರಿಗೆ ಹೋಗಬೇಕಿತ್ತು. ಒಂದೂವರೆ ಕಿ.ಮೀ ಸಾಗಬೇಕಿತ್ತು. ನಡೆಯಲು ಸಾಧ್ಯವಿಲ್ಲದೇ ಇದ್ದುದರಿಂದ ಶಿಕ್ಷಣ ಪಡೆಯುವ ಕನಸು ಕಮರಿ ಹೋಯಿತು. ದಿನಗಳು ಉರುಳಿದಂತೆ ತಂದೆ ಮರಣ ಹೊಂದಿ, ತಾಯಿಗೆ ವಯಸ್ಸಾಗುತ್ತಿದ್ದಂತೆ ಕುಟುಂಬದ ಬಂಡಿ ಸಾಗಿಸುವ ಜವಾಬ್ದಾರಿ ಮಹದೇವಮ್ಮನ ಮೇಲೆ ಬೀಳುತ್ತದೆ. ಕೂಲಿಗಾಗಿ ಹೋಗಲು ಆಗುವುದಿಲ್ಲ. ಕರೆಯುವವರು ಮೊದಲೇ ಇಲ್ಲ. ಹೀಗಾಗಿ ಪ್ಲಾಸ್ಟಿಕ್ ಚೀಲಗಳು ಕಣ್ಣಿಗೆ ಗೋಚರಿಸಿದವು. ಮನೆಯ ಮುಂಭಾಗದಲ್ಲಿಯೇ ಕುಳಿತು ಪ್ಲಾಸ್ಟಿಕ್‌ ಗೋಣಿ ಚೀಲಗಳಿಂದ ಹಗ್ಗ ತಯಾರಿಸುವ  ಕಸಬನ್ನು ನಡೆಸುತ್ತಿದ್ದಾರೆ.

ಗ್ರಾಮದ ಜನರು ಹೊರಗಡೆ ಹೋಗಿ ಪ್ಲಾಸ್ಟಿಕ್ ಚೀಲಗಳನ್ನು (ಸಾಮಾನ್ಯವಾಗಿ ಸಿಮೆಂಟ್‌ ಚೀಲ) ಖರೀದಿಸಿ ತರುತ್ತಾರೆ. ಅವರಿಂದ ಈ ಚೀಲಗಳನ್ನು ಮಹದೇವಮ್ಮ ಖರೀದಿಸಿ, ಅವುಗಳನ್ನು ಬಿಡಿಸಿ, ರಾಟೆಯ ನೆರವಿನಿಂದ ಸಣ್ಣ ಹಾಗೂ ದಪ್ಪದ ಹಗ್ಗಗಳನ್ನು ತಯಾರಿಸುತ್ತಾರೆ. ಹಗ್ಗಗಳನ್ನು ಹೊರಗಡೆ ಮಾರಾಟ ಮಾಡಲು ಅವರಿಗೆ ಆಗುವುದಿಲ್ಲ. ಸಂತೆ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಇವರು ಗ್ರಾಮದಲ್ಲಿಯೇ ಮಾರಾಟ ಮಾಡುತ್ತಾರೆ. ಇದರಿಂದ ಪ್ರತಿನಿತ್ಯ ₹100 ರಿಂದ ₹200ರವರೆಗೂ ಹಣ ಸಂಪಾದನೆ ಮಾಡುತ್ತಾರೆ. ಪಿಂಚಣಿಯ ಹಣ ಹಾಗೂ ಸಂಪಾದನೆಯಿಂದ ಮಹದೇವಮ್ಮ ಹಾಗೂ ಅವರ ತಾಯಿಯ ಜೀವನ ಸಾಗುತ್ತಿದೆ. 

‘ಪ್ಲಾಸ್ಟಿಕ್ ಹಗ್ಗ ತಯಾರಿಕೆಯಿಂದ ಹೆಚ್ಚಿನ ಆದಾಯ ಬರುವುದಿಲ್ಲ. ಆದರೂ ಬದುಕಬೇಕು. ತಾಯಿಯನ್ನು ಸಾಕಬೇಕು. ಈ ಕಸುಬಿನಿಂದ ಕುಟುಂಬ ನಿರ್ವಹಣೆ ನಡೆಯುತ್ತಿದೆ. ಬೇರೆ ಕಸುಬು ನನಗೆ ಗೊತ್ತಿಲ್ಲ. ಸಮಸ್ಯೆ ಬಂದರೆ ಸಂಪಾದನೆ ಸಾಕಾಗುವುದಿಲ್ಲ. ಆದರೂ ಧೈರ್ಯದಿಂದ ತಾಯಿ ಮಗಳು ಬದುಕುತ್ತಿದ್ದೇವೆ. ಸರ್ಕಾರ ನಮ್ಮಂತವರಿಗೆ ಸಹಾಯ ಮಾಡಲು ಮುಂದಾಗಬೇಕು’ ಎಂದು ಮಹದೇವಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು