ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಹಂಗಳಪುರ

ರಸ್ತೆ, ಚರಂಡಿ ಇಲ್ಲ, ಸ್ವಚ್ಛತೆ ಮರೀಚಿಕೆ, ಸಮಸ್ಯೆಗಳ ಬಗ್ಗೆ ಗಮನ ಹರಿಸದ ಜನಪ್ರತಿನಿಧಿಗಳು
Last Updated 7 ಫೆಬ್ರುವರಿ 2020, 9:56 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕು ಕೇಂದ್ರದಿಂದ 8 ಕಿ.ಮೀ ದೂರದಲ್ಲಿರುವ ಹಂಗಳಪುರ ಗ್ರಾಮದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ರಸ್ತೆ, ಚರಂಡಿಯಂತಹ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.

250ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಮಕ್ಕಳ ದಾಖಲಾತಿ ಕೊರತೆಯಿಂದ ಅದು ಮುಚ್ಚುವ ಹಂತ ತಲುಪಿದೆ.

ಉತ್ತಮ ರಸ್ತೆ ಇಲ್ಲ

ಗ್ರಾಮದ ಒಳಗೆ ಉತ್ತಮ ರಸ್ತೆ ಇಲ್ಲ. 10–15 ವರ್ಷಗಳಿಂದ ಒಂದು ರಸ್ತೆಗೂ ಮಣ್ಣು ಸಹ ಹಾಕಿಸಿಲ್ಲ. ಸುತ್ತಮುತ್ತಲಿನ ಗ್ರಾಮಗಳಲ್ಲಿನ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಕಂಗೊಳಿಸುತ್ತಿದ್ದರೂ ಈ ಗ್ರಾಮಕ್ಕೆ ಇನ್ನೂ ಉತ್ತಮ ರಸ್ತೆಯ ಭಾಗ್ಯ ಬಂದಿಲ್ಲ. ‌

‘ರಾಜಕೀಯ ಇಚ್ಛಾಶಕ್ತಿ ಕೊರತೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ನಡುವಿನ ಮುಸುಕಿನ ತಿಕ್ಕಾಟದಿಂದಾಗಿ ಗ್ರಾಮದ ಅಭಿವೃದ್ಧಿ ಹಳ್ಳ ಹಿಡಿದಿದೆ’ ಎಂಬುದು ಗ್ರಾಮಸ್ಥರ ಆರೋಪ.

ಹೂಳು ತುಂಬಿದ ಚರಂಡಿ:ಗ್ರಾಮದ ಕೆಲವು ಬೀದಿಗಳು ಚರಂಡಿ ವ್ಯವಸ್ಥೆಯನ್ನು ಹೊಂದಿಲ್ಲದ ಕಾರಣ ಕೊಳಚೆ ನೀರು ಬೀದಿಯ ತುಂಬೆಲ್ಲಾ ಹರಿಯುತ್ತಿದೆ.

‘ಹತ್ತು ವರ್ಷಗಳಿಂದ ಇಲ್ಲಿ ಒಂದು ಚರಂಡಿಯನ್ನೂ ನಿರ್ಮಿಸಲಾಗಿಲ್ಲ. ಗ್ರಾಮದಿಂದ ಪಂಚಾಯಿತಿಗೆ ಆಯ್ಕೆಯಾಗಿರುವವರು ಈ ಬಗ್ಗೆ ಕಣ್ಮುಚ್ಚಿ ಕುಳಿತಿದ್ದಾರೆ. ಚುನಾವಣಾ ಸಮಯದಲ್ಲಿ ಮಾತ್ರ ಮತ ಕೇಳಲು ಕೈ ಮುಗಿದುಕೊಂಡು ಬರುತ್ತಾರೆ’ ಎಂದು ಗ್ರಾಮದ ಹಿರಿಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಚ್ಛತೆ ಮಾಯ

ಗ್ರಾಮದ ಕೆಲವು ಮನೆಗಳಿಗೆ ಹೋಗಲು ದಾರಿಯೂ ಇಲ್ಲದೆ ಜನರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಹಲವರ ನಡುವೆ ಜಗಳವಾಗಿದೆ. ಬೀದಿಗಳು ಗುಂಡಿ ಬಿದ್ದು ನಡೆದುಕೊಂಡು ಹೋಗುವುದಕ್ಕೂ ಕಷ್ಟ ಪಡಬೇಕಾಗಿದೆ. ವಾಹನ ಸವಾರರ ಪಾಡಂತೂ ಹೇಳತೀರದಾಗಿದೆ. ಚರಂಡಿ ನೀರು ಬೀದಿಯ ಮಧ್ಯದಲ್ಲೇ ಹರಿಯುವುದರಿಂದ ಅನೈರ್ಮಲ್ಯ ಹೆಚ್ಚಿ, ರೋಗರುಜಿನಗಳಿಗೆ ಕಾರಣವಾಗುತ್ತಿದೆ.

‘ಹಂಗಳಪುರ ಗ್ರಾಮ ಕನಿಷ್ಠ ಮೂಲಭೂತ ಸೌಕರ್ಯವಿಲ್ಲದೆ ವಂಚಿತವಾಗಿದೆ. ರಸ್ತೆ, ಚರಂಡಿ ಸೇರಿದಂತೆ ಯಾವ ಸೌಲಭ್ಯವನ್ನೂ ಕಲ್ಪಿಸಿಲ್ಲ. ನಮ್ಮನ್ನು ಮತಕ್ಕಾಗಿ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಗ್ರಾಮಸ್ಥ ರಾಜಪ್ಪ ಎಚ್ಚರಿಸಿದರು.

ಸೌಕರ್ಯ ಕಲ್ಪಿಸಲು ಕ್ರಮ: ಶಾಸಕ

ಈ ಸಂಬಂಧ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌, ‘ಹಂಗಳಪುರದಲ್ಲಿ ಲಿಂಗಾಯತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಕಾಂಕ್ರೀಟ್‌ ರಸ್ತೆಯನ್ನು ಅಲ್ಲಿಗೆ ಮಂಜೂರು ಮಾಡಲು ಸಾಧ್ಯವಾಗಿಲ್ಲ. ತಾಲ್ಲೂಕಿನ ಹಲವು ಗ್ರಾಮಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಗ್ರಾಮ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT