ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮನೆ ಮನಗಳಲ್ಲಿ ಅರಳಿದ ತ್ರಿವರ್ಣಧ್ವಜ

ಪ್ರತಿ ಮನೆಯಲ್ಲೂ ತಿರಂಗಾ ಅಭಿಯಾನಕ್ಕೆ ಚಾಲನೆ, ಸ್ವಾತಂತ್ರ್ಯ ನಡಿಗೆ, ಬೈಕ್‌ ರ‍್ಯಾಲಿ, ಜಾಗೃತಿ ಜಾಥಾ
Last Updated 13 ಆಗಸ್ಟ್ 2022, 16:33 IST
ಅಕ್ಷರ ಗಾತ್ರ

ಚಾಮರಾಜನಗರ: ದೇಶದ ಸ್ವಾಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಪ್ರತಿ ಮನೆಯ್ಲೂ ತ್ರಿವರ್ಣಧ್ವಜ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆಯಿತು.

ನಾಗರಿಕರು ತಮ್ಮ ಮನೆಗಳಲ್ಲಿ ಧ್ವಜರೋಹಣ ಮಾಡಿದರು ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಕೀರ್ಣಗಳು, ಸಂಘ ಸಂಸ್ಥೆಗಳ ಕಚೇರಿ, ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಕಚೇರಿಗಳು ಸೇರಿದಂತೆ ಎಲ್ಲೆಡೆಯೂ ತಿರಂಗಾ ಹಾರಾಡಿದವು.

ಸ್ವಾತಂತ್ರ್ಯ ನಡಿಗೆ, ಜಾಗೃತಿ ಜಾಥಾ ಬೈಕ್‌ ರ‍್ಯಾಲಿ, ತ್ರಿವರ್ಣ ಧ್ವಜದ ಪ್ರದರ್ಶನಗಳೂ ನಡೆದವು.

ಜಿಲ್ಲಾಧಿಕಾರಿ ಚಾಲನೆ: ಜಿಲ್ಲಾಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ಗಳ ಲಯ ಬದ್ಧ ಸದ್ದಿನ ಹಿನ್ನೆಲೆಯೊಂದಿಗೆ ಚಾರುಲತಾ ಅವರು ಧ್ವಜಾರೋಹಣ ನೆರವೇರಿಸಿ ವಂದನೆ ಸಲ್ಲಿಸಿದರು. ಬಳಿಕ ಸ್ವಾತಂತ್ರ್ಯ ನಡಿಗೆ ಜಾಥಾಗೆ ಹಸಿರು ನಿಶಾನೆ ತೋರಿದರು. ಒಂದಷ್ಟು ದೂರ ತಾವೂ ಜಾಥಾದಲ್ಲಿ ಹೆಜ್ಜೆ ಹಾಕಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ವಿವಿಧ ಇಲಾಖೆಗಳ ಮುಖ್ಯಸ್ಥರು ಜಿಲ್ಲಾಧಿಕಾರಿಗೆ ಜೊತೆ ನೀಡಿದರು.

ವಿವಿಧ ಶಾಲಾ ಕಾಲೇಜುಗಳ ನೂರಾರು ಮಕ್ಕಳು ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು 30 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಿದ್ದು ಗಮನ ಸೆಳೆಯಿತು.

ಜಿಲ್ಲಾಡಳಿತ ಭವನದಲ್ಲಿ ಆರಂಭಗೊಂಡ ಜಾಥಾ ಬಿ.ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತದ ಮೂಲಕ ಚಾಮರಾಜೇಶ್ವರಸ್ವಾಮಿ ದೇವಾಲಯದ ವರೆಗೆ ತೆರಳಿ ಅಲ್ಲಿಂದ ವಾಪಸ್‌ ಜಿಲ್ಲಾಡಳಿತ ಭವನಕ್ಕೆ ಮರಳಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ, ಪೋಷಕರು, ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರು, ಧ್ವಜ ಹಿಡಿದು ನಡಿಗೆಯಲ್ಲಿ ಪಾಲ್ಗೊಂಡರು. ಜಾಥಾದ ಉದ್ದಕ್ಕೂ ವಂದೇ ಮಾತರಂ, ಬೋಲೋ ಭಾರತ್‌ ಮಾತಾಕೀ ಜೈ ಎಂಬ ಘೋಷಣೆಗಳು ಮೊಳಗಿದವು.

ನಗರಸಭೆ: ಚಾಮರಾಜನಗರ ನಗರಸಭೆಯ ವತಿಯಿಂದ ನಡೆದ ಜಾಥಾಗೆ ಅಧ್ಯಕ್ಷೆ ಸಿ.ಎಂ.ಆಶಾ ಹಸಿರು ನಿಶಾನೆ ತೋರಿದರು. ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ತ್ರಿವರ್ಣ ಧ್ವಜ ಪ್ರದರ್ಶಿಸಿದರು.

‘ನಗರದ ಪ್ರತಿ ಮನೆಮನೆ ಅಂಗಡಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಧ್ವಜದ ಮಹತ್ವ ತಿಳಿಸಬೇಕು. ರಾಷ್ಟ್ರಪ್ರೇಮ ಮೂಡಿಸಬೇಕು. ಆ ಮೂಕ ತ್ಯಾಗ, ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು’ ಎಂದು ಆಶಾ ಹೇಳಿದರು. ಅವರು ಉತ್ತಮ ಸ್ವಚ್ಚತಾ ಸೇವಾ ಕಾರ್ಯ ನಿರ್ವಹಿಸಿದ ಪೌರಕಾರ್ಮಿಕರಿಗೆ ಪ್ರಮಾಣಪತ್ರ ವಿತರಿಸಿದರು. ನಗರಸಭಾ ಆವರಣದಲ್ಲಿ ಚಾಲನೆ ಗೊಂಡ ಜಾಥಾವು ಭುವನೇಶ್ವರಿ ವೃತ್ತ, ಡೀವಿಯೇಷನ್ ರಸ್ತೆ, ಸುಲ್ತಾನ್ ಷರೀಫ್‌ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಮಹಾವೀರ ವೃತ್ತ, ಚಿಕ್ಕಂಗಡಿ ಬೀದಿ ಸಾಗಿ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಮುಕ್ತಾಯಗೊಂಡಿತ್ತು.

ಪ್ರಭಾರ ಆಯುಕ್ತ ನಟರಾಜು, ಸದಸ್ಯರಾದ ಮನೋಜ್ ಪಟೇಲ್, ಶಿವರಾಜ್, ಮಹದೇವಯ್ಯ, ಗಾಯಿತ್ರಿ ಚಂದ್ರಶೇಖರ್, ಮಮತಾ ಬಾಲಸುಬ್ರಹ್ಮಣ್ಯಂ, ನೀಲಮ್ಮ, ಚಿನ್ನಮ್ಮ, ಭಾಗ್ಯಮ್ಮ, ವನಜಾಕ್ಷಿ, ಪರಿಸರ ಎಂಜಿನಿಯರ್‌ ಗಿರಿಜಮ್ಮ, ಆರೋಗ್ಯ ನಿರೀಕ್ಷಕಿ ಸುಷ್ಮಾ, ಕಂದಾಯಾಧಿಕಾರಿ ಶರವಣ, ಎಂಜಿನಿಯರ್ ದೇವರಾಜ್, ಮ್ಯಾನೇಜರ್ ರೀಟಾ ಇತರರು ಇದ್ದರು.

ಸಿಮ್ಸ್‌, ನರ್ಸಿಂಗ್ ಶಾಲೆ: ಅಭಿಯಾನ
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್‌) ಬೋಧನಾ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆ, ಸರ್ಕಾರಿ ಜಿಎನ್ಎಂ ನರ್ಸಿಂಗ್‌ ಶಾಲೆಯಲ್ಲಿಯೂ ನಡೆಯಿತು.

ಜಿಲ್ಲಾ ಸರ್ಜನ್‌ ಡಾ. ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ.ಎಂ. ಮಹೇಶ್ ಶುಶ್ರೂಷಕರ ಸೂಪರಿಂಟೆಂಡೆಂಟ್‌, ಗೀತಾ, ಸಂತೋಷ್, ಶ್ರೀರಾಮ್, ನಮ್ರತಾ ಆಸ್ಪತ್ರೆಯ ವೈದ್ಯರು, ಶುಶ್ರೂಷಕಾಧಿಕಾರಿಗಳು, ಸಿಬಂದಿ ವರ್ಗದವರು ಮತ್ತು 100ಕ್ಕೂ ಹೆಚ್ಚು ನಸಿಂಗ್ ವಿದ್ಯಾರ್ಥಿಗಳು ತ್ರಿವರ್ಣ ರಾಷ್ಟ್ರಧ್ವಜ ಪ್ರದರ್ಶಿಸಿ ರಾಷ್ಟ್ರಪ್ರೇಮ ಮೆರೆದರು. ನಗರದ ಸರ್ಕಾರಿ ಜಿ.ಎನ್.ಎಂ ನರ್ಸಿಂಗ್ ಶಾಲೆಯಲ್ಲಿ 75 ನರ್ಸಿಂಗ್‌ ವಿದ್ಯಾರ್ಥಿಗಳು 75 ಧ್ವಜಗಳನ್ನು ಹಿಡಿದು ಪ್ರದರ್ಶಿಸಿದರು. ಡಾ.ಎಂ.ಮಹೇಶ್. ಆಡಳಿತ ಅಧಿಕಾರಿ ಡಾ.ಮಹೇಶ್ವರಿ, ಪ್ರಾಂಶುಪಾಲರಾದ ಮೊಹಮ್ಮದ್ ಕುದರತ್ ಇದ್ದರು.

ಪೊಲೀಸ್‌ ಜಾಥಾ
ಶನಿವಾರದಿಂದ ಸೋಮವಾರದವರೆಗೆ ಹಮ್ಮಿಕೊಳ್ಳಲಾಗಿರುವ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜದ ಭಾಗವಾಗಿ ಪೊಲೀಸ್‌ ಇಲಾಖೆಯ ವತಿಯಿಂದಲೂ ನಗರದಲ್ಲಿ ತ್ರಿವರ್ಣ ಧ್ವಜ ಜಾಗೃತಿ ಜಾಥಾ ನಡೆಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದವರಿಗೆ ಪೊಲೀಸರು ಬೃಹತ್‌ ಜಾಥಾ ನಡೆಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್‌ರಾಜು ನೇತೃತ್ವದಲ್ಲಿ ಜಾಥಾ ನಡೆಯಿತು. ಧ್ವಜ ಹಿಡಿದಿದ್ದ ನೂರಾರು ಪೊಲೀಸ್‌ ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಸಾಗಿದರು.

ಅರಣ್ಯ, ಅಗ್ನಿಶಾಮಕ, ಅಬಕಾರಿ ಹಾಗೂ ಗೃಹರಕ್ಷಕ ದಳದ ಅಧಿಕಾರಿಗಳು ಸಹ ಪಾಲ್ಗೊಂಡಿದ್ದರು. ಪೊಲೀಸ್ ಬ್ಯಾಂಡ್ ತಂಡ ಸಹ ಭಾಗವಹಿಸಿತ್ತು. ದೊಡ್ಡಂಗಡಿ ಬೀದಿ, ರಥದಬೀದಿ, ಭುವನೇಶ್ವರಿ ವೃತ್ತದ ಮೂಲಕ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಸಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಾಥಾ ಮುಕ್ತಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT