ಬುಧವಾರ, ಜುಲೈ 6, 2022
23 °C
ತಂಡದೊಂದಿಗೆ ವಿವಿಧ ಕಡೆ ಕಾರ್ಯಕ್ರಮ

ಭಜನೆಯಲ್ಲೇ ವೃತ್ತಿ ಕಂಡುಕೊಂಡ ವಜ್ರಸ್ವಾಮಿ: 20 ವರ್ಷಗಳಿಂದ ಕಲಾ ಸೇವೆ

ಮಹದೇವ್‌ ಹೆಗ್ಗವಾಡಿಪುರ‌ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಹೋಬಳಿಯ ಮಹಾಂತಳಪುರ ಗ್ರಾಮದ ವಜ್ರಸ್ವಾಮಿ ಅವರು ಬಾಲ್ಯದಿಂದಲೇ ಹಾರ್ಮೋನಿಯಂ ಕಲಿತು ಭಜನೆಗಳನ್ನು ಹಾಡುತ್ತಾ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಸರುವಾಸಿಯಾಗಿದ್ದಾರೆ. ‌

ನಾಲ್ಕು ಜನರ ತಂಡ ಕಟ್ಟಿಕೊಂಡಿರುವ ವಜ್ರಸ್ವಾಮಿ ಅವರು, 20 ವರ್ಷಗಳಿಂದ ಭಜನೆ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. 

ಪ್ರಾಥಮಿಕ ಶಾಲೆಗೆ ಹೋಗುತ್ತಿರುವಾಗ ಗ್ರಾಮದ ದೇವಸ್ಥಾನದಲ್ಲಿ ಹಿರಿಯರು ಭಜನೆ ಮಾಡುತ್ತಿದ್ದರು. ಇದರಿಂದ ಪ್ರೇರೇಪಿತರಾದ ಇವರು ಭಜನೆ ಮಾಡುವುದರಲ್ಲಿ ಆಸಕ್ತಿ ಬೆಳೆಸಿಕೊಂಡರು. ಹಾಡುಗಾರನಾಗಬೇಕು ಎಂಬ ಅವರ ಆಸೆಗೆ ನೀರೆದಿದ್ದು, ಶಾಲೆ. ಶಾಲೆಯಲ್ಲಿ ದೇವರ ನಾಮ, ಭಕ್ತಿಗೀತೆ, ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಹಾಡುಗಾರನಾಗಿ ಗುರುತಿಸಿಕೊಂಡರು. 

ಗ್ರಾಮಕ್ಕೆ ಭಜನೆಗೆ ಬರುತ್ತಿದ್ದ ಮೇಲಾಜಿಪುರ ಗ್ರಾಮದ ನಾಟಕ ಹಾಗೂ ಭಜನೆ ಮಾಸ್ಟರ್ ಪಾಪಣ್ಣ ಅವರಿಂದ ಹಾರ‍್ಮೋನಿಯಂ ನುಡಿಸುವುದನ್ನು ಕಲಿತುಕೊಂಡ ವಜ್ರಸ್ವಾಮಿ, ಪಾಪಣ್ಣ ಅವರ ಮಾರ್ಗದರ್ಶನದಲ್ಲಿ ಹಾಡುಗಾರನಾಗಿಯೂ ಪಳಗಿದರು.

ಸುತ್ತಮತ್ತಲಿನ ಗ್ರಾಮಗಳು, ದೇವಸ್ಥಾನಗಳು ಸೇರಿದಂತೆ ಮಠಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ತಮ್ಮ ತಂಡದೊಂದಿಗೆ ತೆರಳುವ ವಜ್ರಸ್ವಾಮಿ ಅಲ್ಲಿ ಭಜನೆ ಮಾಡಿ ಜನ ಮನ್ನಣೆ ಗಳಿಸುತ್ತಿದ್ದಾರೆ. ‌

ಸ್ವಾಮೀಜಿಗಳ ಪಾದಪೂಜೆ, ತೊಟ್ಟಿಲು ಶಾಸ್ತ್ರ, ಬಸವ ಜಯಂತಿ, ಮಠದ ಆರಾಧನೆಗಳು ಹಾಗೂ ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ. ಗುರುಮಲ್ಲೇಶ್ವರ, ಬಸವಣ್ಣ, ಅಕ್ಕಮಹಾದೇವಿ ವಚನಗಳು ಸೇರಿದಂತೆ ಮಹದೇಶ್ವರ, ಜಾನಪದ ಹಾಗೂ ದೇವರ ನಾಮಗಳನ್ನು ಹಾಡುತ್ತಾ ಜನರನ್ನು ರಂಜಿಸುತ್ತಾರೆ. ಇವರೊಟ್ಟಿಗೆ ಸಹ ಕಲಾವಿದರು ತಾಳ ಕಂಜರಿಯೊಂದಿಗೆ ದನಿಗೂಡಿಸುತ್ತಾರೆ.

ಯಾರಾದರೂ ಇಹಲೋಕ ತ್ಯಜಿಸಿದ ವಿಷಯ ತಿಳಿದಾಗ ರಾತ್ರಿ ಎಷ್ಟು ಹೊತ್ತಾದರೂ ಸರಿ, ಹೆಗಲಿಗೆ ಹಾರ‍್ಮೋನಿಯಂ ಹಾಕಿಕೊಂಡು ಸೂತಕದ ಮನೆಗೆ ತೆರಳಿ ಶೋಕದ ಗೀತೆಗಳನ್ನು ಹಾಡುವ ಮೂಲಕ ಅಲ್ಲಿದ್ದವರ ದುಃಖದಲ್ಲಿ ಭಾಗಿಯಾಗುತ್ತಾರೆ. ಉತ್ತರ ಕ್ರಿಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ನಾಮ ಹಾಗೂ ವಚನಗಳನ್ನು ಹಾಡುವ ಮೂಲಕ ಅಲ್ಲಿನ ಜನರನ್ನು ಭಕ್ತಿಯಲ್ಲಿ ತೇಲಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು