ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ; ಆರೋಗ್ಯ ಇಲಾಖೆ ಯೋಚನೆ

Last Updated 19 ಸೆಪ್ಟೆಂಬರ್ 2021, 15:43 IST
ಅಕ್ಷರ ಗಾತ್ರ

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಆದರ್ಶ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟ ಬೆನ್ನಲ್ಲೇ, ಇತರ ಶಾಲೆಗಳಲ್ಲೂ ಮಕ್ಕಳನ್ನು ರ‍್ಯಾಂಡಮ್‌ ಆಗಿ ಕೋವಿಡ್‌ ಪರೀಕ್ಷೆಗೆ ಒಳಪ‍ಡಿಸಲು ಆರೋಗ್ಯ ಇಲಾಖೆ ಯೋಜಿಸಿದೆ.

‘ಈ ಬಗ್ಗೆ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜೆ.ಎಂ.ವಿಶ್ವೇಶ್ವರಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

398 ಮಕ್ಕಳಿರುವ ಯಳಂದೂರಿನ ಆದರ್ಶ ಶಾಲೆಯಲ್ಲಿ ಮಕ್ಕಳನ್ನು ರ‍್ಯಾಂಡಮ್‌ ಆಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ನಾಲ್ಕು ದಿನಗಳ ಹಿಂದೆ ಒಬ್ಬ ವಿದ್ಯಾರ್ಥಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪರೀಕ್ಷೆ ನಡೆಸುವಾಗ ಮತ್ತೊಬ್ಬ ವಿದ್ಯಾರ್ಥಿಗೂ ಕೋವಿಡ್‌ ಇರುವುದು ಖಚಿತವಾಗಿತ್ತು.

ಹೀಗಾಗಿ ಬೇರೆ ಶಾಲೆಗಳಲ್ಲೂ ಇದೇ ಮಾದರಿಯಲ್ಲಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಯೋಚಿಸಿದೆ.

ಈ ಮಧ್ಯೆ, ಸೋಂಕು ದೃಢಪಟ್ಟ ವಿದ್ಯಾರ್ಥಿಗಳು ಆರೋಗ್ಯದಿಂದಿದ್ದು ಸಂತೇಮರಹಳ್ಳಿಯ ಕೋವಿಡ್‌ ಕೇರ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಇಬ್ಬರೂ ವಿದ್ಯಾರ್ಥಿಗಳನ್ನು ಖದ್ದಾಗಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದೇನೆ. ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಇಬ್ಬರೂ ಆಟವಾಡುತ್ತಾ ಚೆನ್ನಾಗಿದ್ದಾರೆ. ಐದು ದಿನಗಳ ಬಳಿಕ ಅವರು ಮನೆಗೆ ತೆರಳಲಿದ್ದಾರೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಪಿ.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನಿಬ್ಬರು ವಿದ್ಯಾರ್ಥಿಗಳು: ‘ಇದೇ ಕೋವಿಡ್‌ ಕೇಂದ್ರದಲ್ಲಿ ಸೋಂಕು ದೃಢಪಟ್ಟ ಇನ್ನಿಬ್ಬರು ವಿದ್ಯಾರ್ಥಿಗಳು ಇದ್ದಾರೆ. ಒಬ್ಬ ಮಂಗಳೂರಿನವ. ಇನ್ನೊಬ್ಬ ಮೈಸೂರಿನವ. ಜಿಲ್ಲೆಯಲ್ಲಿ ‍ಪರೀಕ್ಷೆ ನಡೆಸುವಾಗ ಸೋಂಕು ಇರುವುದು ಗೊತ್ತಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಎಲ್ಲ ಶಾಲೆಗಳಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ರೋಗ ಲಕ್ಷಣ ಇರುವ ಮಕ್ಕಳು ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ಹೇಳುತ್ತಿದ್ದೇವೆ. ಮಕ್ಕಳಲ್ಲೂ ಪರೀಕ್ಷೆಗೆ ಕೊಂಚ ಹಿಂಜರಿಕೆ ಕಂಡು ಬರುತ್ತಿದೆ’ ಎಂದು ಮಂಜುನಾಥ್‌ ಅವರು ಹೇಳಿದರು.

ನಾಲ್ಕು ಹೊಸ ಪ್ರಕರಣ, ನಾಲ್ವರು ಚೇತರಿಕೆ

ಈ ಮಧ್ಯೆ, ಜಿಲ್ಲೆಯಲ್ಲಿ ಭಾನುವಾರ ನಾಲ್ಕು ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ನಾಲ್ವರು ಸೋಂಕು ಮುಕ್ತರಾಗಿದ್ದಾರೆ. ಸಾವು ಸಂಭವಿಸಿಲ್ಲ.

ಸೋಂಕಿತರ ಸಂಖ್ಯೆ 50 ಇದೆ. ಇಬ್ಬರು ಐಸಿಯುನಲ್ಲಿ, 18 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.ಜಿಲ್ಲೆಯಲ್ಲಿ ಇದುವರೆಗೆ 32,439 ಪ್ರಕರಣಗಳು ದೃಢಪಟ್ಟಿವೆ. 31,851 ಮಂದಿ ಗುಣಮುಖರಾಗಿದ್ದಾರೆ.

ಭಾನುವಾರ 1,641 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,637 ವರದಿಗಳು ನೆಗೆಟಿವ್‌ ಬಂದು, ನಾಲ್ವರಿಗೆ ಸೋಂಕು ಇರುವುದು ಖಚಿತವಾಗಿದೆ. ಈ ಪೈಕಿ ಮೂವರು ಹನೂರು ತಾಲ್ಲೂಕಿನವರು, ಇನ್ನೊಬ್ಬರು ಚಾಮರಾಜನಗರ ತಾಲ್ಲೂಕಿನವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT