ಬುಧವಾರ, ಜೂನ್ 29, 2022
25 °C
ಜಿಲ್ಲೆಯಲ್ಲಿ ಚಿಕಿತ್ಸೆ ಅಲಭ್ಯ; ಮೈಸೂರು, ಬೆಂಗಳೂರು ಆಸ್ಪತ್ರೆಗೆ ಓಡಾಟ ಅನಿವಾರ್ಯ

ಚಾಮರಾಜನಗರ: ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪ್ರಕರಣ ಹೆಚ್ಚಳ; ಮಹಿಳೆಯರಲ್ಲೇ ಅಧಿಕ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿದ್ದು, ಮಾರಣಾಂತಿಕವಾದ ಕಾಯಿಲೆ ಪುರುಷರಿಗಿಂತಲೂ ಮಹಿಳೆಯರನ್ನು ಹೆಚ್ಚು ಬಾಧಿಸುತ್ತಿದೆ. 

ಪ್ರಕರಣಗಳು ಹೆಚ್ಚುತ್ತಿದ್ದರೂ, ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಜಿಲ್ಲೆಯಲ್ಲಿಲ್ಲ. ಚಿಕಿತ್ಸೆಗಾಗಿ, ಮೈಸೂರು ಇಲ್ಲವೇ ಬೆಂಗಳೂರಿಗೆ ಹೋಗುವುದು ಅನಿವಾರ್ಯ. 

ಆರೋಗ್ಯ ಇಲಾಖೆಯ ಜಿಲ್ಲಾ ಕಣ್ಗಾವಲು ಘಟಕ ನೀಡಿರುವ ಮಾಹಿತಿ ಪ್ರಕಾರ, ಎರಡು ಮುಕ್ಕಾಲು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ 636 ಕ್ಯಾನ್ಸರ್‌ ಪ್ರಕರಣ ವರದಿಯಾಗಿವೆ. ಈ ಪೈಕಿ 236 ಮಂದಿ ಪುರುಷರು, 400 ಮಹಿಳೆಯರು. 

‘ಈ ಅಂಕಿ ಅಂಶಗಳು ನಮಗೆ ಇರುವ ಮಾಹಿತಿಯ ಆಧಾರದಲ್ಲಿ ಲಭ್ಯವಾದಂತಹದ್ದು. ಕೆಲವು ಸಂದರ್ಭಗಳಲ್ಲಿ ಕುಟುಂಬದ ಸದಸ್ಯರು ಕ್ಯಾನ್ಸರ್‌ ರೋಗಿಗಳಿಗೇ ಕಾಯಿಲೆ ಬಗ್ಗೆ ತಿಳಿಸಿರುವುದಿಲ್ಲ. ಇಲಾಖೆಗೂ ಮಾಹಿತಿ ನೀಡುವುದಿಲ್ಲ. ಅಂತಹ ಪ್ರಕರಣಗಳ ವಿವರಗಳು ನಮ್ಮಲ್ಲಿ ಇಲ್ಲ’ ಎಂದು ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್‌ ಹಾಗೂ ಗರ್ಭ ಕಂಠದ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚು ಕಂಡು ಬರುತ್ತದೆ. ಪುರುಷರನ್ನು ಶ್ವಾಸಕೋಶ ಹಾಗೂ ಬಾಯಿ ಕ್ಯಾನ್ಸರ್‌ ಹೆಚ್ಚು ಬಾಧಿಸುತ್ತಿದೆ. ಅದಕ್ಕೆ ತಂಬಾಕು ಉತ್ಪನ್ನಗಳ ಬಳಕೆ ಕಾರಣ’ ಎಂದು ವಿವರಿಸಿದರು. 

2021–22ನೇ ಸಾಲಿನ ಡಿಸೆಂಬರ್‌ವರೆಗೆ 245 ಮಂದಿಯಲ್ಲಿ ಕ್ಯಾನ್ಸರ್‌ ಪತ್ತೆಯಾಗಿದೆ. ಈ ಪೈಕಿ 92 ಪುರುಷರು, 153 ಮಹಿಳೆಯರು. ಗಂಡಸರ ಪೈಕಿ 38 ಮಂದಿಯಲ್ಲಿ ಶ್ವಾಸಕೋಶ, 30 ಮಂದಿಯಲ್ಲಿ ಬಾಯಿ ಕ್ಯಾನ್ಸರ್‌ ಪತ್ತೆಯಾಗಿದೆ. 24 ಮಂದಿಯಲ್ಲಿ ಇತರೆ ಕ್ಯಾನ್ಸರ್‌ ವರದಿಯಾಗಿವೆ.‌ ಮಹಿಳೆಯರ ಪೈಕಿ 43 ಮಂದಿಯಲ್ಲಿ ಸ್ತನ ಕ್ಯಾನ್ಸರ್‌, 39 ಮಂದಿಯಲ್ಲಿ ಗರ್ಭಕಂಠ ಕ್ಯಾನ್ಸರ್‌ ಕಂಡು ಬಂದಿದೆ. 70 ಮಂದಿಯಲ್ಲಿ ಇತರೆ ಕ್ಯಾನ್ಸರ್‌ ದೃಢಪಟ್ಟಿದೆ.

‘ಕ್ಯಾನ್ಸರ್‌ ರೋಗಿಗಳಲ್ಲಿ ಬಹುತೇಕರು 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು. ಕಾಯಿಲೆಗೆ ತುತ್ತಾದ ಮಕ್ಕಳ ಸಂಖ್ಯೆ ಕಡಿಮೆ’ ಎಂದು ಡಾ.ನಾಗರಾಜು ಮಾಹಿತಿ ನೀಡಿದರು. 

ತಪಾಸಣೆ: ‘ಆರೋಗ್ಯ ಇಲಾಖೆಯ ಎನ್‌ಪಿಸಿಡಿಎಸ್‌ ಯೋಜನೆಯಡಿ 30 ವರ್ಷಕ್ಕಿಂತ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ತಪಾಸಣೆ ಮಾಡಲಾಗುತ್ತಿದೆ. ರೋಗ ಲಕ್ಷಣ ಇರುವವರು ಯಾವಾಗ ಬೇಕಾದರೂ ಪರೀಕ್ಷೆ ಮಾಡಿಸಿ ಕೊಳ್ಳಬಹುದು’ ಎಂದು ಹೇಳಿದರು.

ಚಿಕಿತ್ಸೆಗಾಗಿ ಅಲೆದಾಟ ಅನಿವಾರ್ಯ
ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆ ಅಥವಾ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಸಿಮ್ಸ್‌) ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲ. ವಾರಕ್ಕೊಮ್ಮೆ ಒಬ್ಬರು ವೈದ್ಯರು ಬರುತ್ತಾರೆ.

ಪರೀಕ್ಷೆ ಅಥವಾ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆಯೇ ವಿನಾ ಪೂರಕ ಚಿಕಿತ್ಸೆಗೆ ಬೇಕಾದ ಉಪಕರಣಗಳು, ವ್ಯವಸ್ಥೆ ಇಲ್ಲಿಲ್ಲ. 

ಹಾಗಾಗಿ, ಕ್ಯಾನ್ಸರ್‌ ರೋಗಿಗಳು ಮೈಸೂರಿನ ಕೆ.ಆರ್‌.ಆಸ್ಪತ್ರೆ ಇಲ್ಲವೇ ಬೇರೆ ಖಾಸಗಿ ಆಸ್ಪತ್ರೆಗಳು ಅಥವಾ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕು. 

‘ನಮ್ಮ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ ಆರಂಭಿಸಬೇಕೆಂಬ ಪ್ರಸ್ತಾವವಿದೆ. ಎನ್‌ಜಿಒ ಮುಂದೆ ಬಂದಿದೆ. ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಒಪ್ಪಿಗೆ ದೊರೆತರೆ ಘಟಕ ಆರಂಭವಾಗಲಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು. 

–––

ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಪ್ರತ್ಯೇಕ ಕ್ಯಾನ್ಸರ್‌ ವಿಭಾಗ ತೆರೆಯಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ.
-ಡಾ.ಡಿ.ಎಂ.ಸಂಜೀವ್‌, ಸಿಮ್ಸ್‌ ಡೀನ್‌

––

ರೋಗಿಗಳನ್ನು ಮೈಸೂರಿನ ಆಸ್ಪತ್ರೆಗೆ ಕಳುಗಹಿಸಲಾಗುತ್ತದೆ. ಆಯುಷ್ಮಾನ್‌ ಭಾರತ್‌ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ.
-ಡಾ.ನಾಗರಾಜು, ಜಿಲ್ಲಾ ಕಣ್ಗಾವಲು ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು