ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಗುಣಮಟ್ಟದ ಆರೋಗ್ಯ ಸೇವೆ ಮರೀಚಿಕೆ

ಹನೂರು: ಆರೋಗ್ಯ ಕೇಂದ್ರಗಳಲ್ಲಿ ಸಕಾಲದಲ್ಲಿ ಸಿಗದ ವೈದ್ಯರು, ಕಾಡುತ್ತಿದೆ ಆಂಬುಲೆನ್ಸ್‌ಗಳ ಕೊರತೆ
Published 22 ಸೆಪ್ಟೆಂಬರ್ 2023, 5:43 IST
Last Updated 22 ಸೆಪ್ಟೆಂಬರ್ 2023, 5:43 IST
ಅಕ್ಷರ ಗಾತ್ರ

ಹನೂರು: ಜಿಲ್ಲೆಯ ಗಡಿಭಾಗದಲ್ಲಿರುವ ಹನೂರು ತಾಲ್ಲೂಕಿನ ಗ್ರಾಮಗಳಲ್ಲಿ ಜನರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದ್ದು, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಸಿಗದೇ ಜನರು ಪರದಾಡುವಂತ ಪರಿಸ್ಥಿತಿ ಈಗಲೂ ಇದೆ. 

ಕೊಳ್ಳೇಗಾಲ ತಾಲ್ಲೂಕಿನಿಂದ ಬೇರ್ಪಟ್ಟು ಪ್ರತ್ಯೇಕ ತಾಲ್ಲೂಕು ಕೇಂದ್ರ ರಚನೆಯಾಗಿ ಐದು ವರ್ಷ ಕಳೆದರೂ ಇಂದಿಗೂ ಜನರು ಚಿಕಿತ್ಸೆಗಾಗಿ ಕೊಳ್ಳೇಗಾಲ ಅಥವಾ ಮೈಸೂರನ್ನು ಆಶ್ರಯಿಸಬೇಕಿದೆ.

2018ರ ಡಿಸೆಂಬರ್‌ನಲ್ಲಿ ಸುಳ್ವಾಡಿ ವಿಷ‍ಪ್ರಸಾದ ಘಟನೆ ನಡೆದ ನಂತರ ತಾಲ್ಲೂಕಿನಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಿಸುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿದೆ. ಆದರೆ, ಅದು ಪೂರ್ಣವಾಗಿಲ್ಲ. 

ಬಹುತೇಕ ಗುಡ್ಡಗಾಡು ಪ್ರದೇಶಗಳಿಂದಲೇ ಆವೃತವಾಗಿರುವ ಹನೂರು ತಾಲ್ಲೂಕಿನ ಕೌದಳ್ಳಿ. ಬಂಡಳ್ಳಿ, ಲೊಕ್ಕನಹಳ್ಳಿ, ಹನೂರು, ಪಿ.ಜಿ ಪಾಳ್ಯ ಇವುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಒಡೆಯರಪಾಳ್ಯ, ರಾಮಾಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಮಹದೇಶ್ವರ ಬೆಟ್ಟದಲ್ಲಿ ಪ್ರಾಥಮಿಕ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದೆ. 

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿದ್ದರೂ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಒಂದೆಡೆ ಗುಣಮಟ್ಟದ ಚಿಕಿತ್ಸೆ ಕೊರತೆಯಾದರೆ ಮತ್ತೊಂದೆಡೆ ಆಸ್ಪತ್ರೆಯಲ್ಲಿ ವೈದ್ಯರು ಸಕಾಲಕ್ಕೆ ಸಿಗದಿರುವುದು ಜನರು ಖಾಸಗಿ ಆಸ್ಪತ್ರೆಯನ್ನು ಆಶ್ರಯಿಸುವಂತೆ ಮಾಡಿದೆ.

ಖಾಸಗಿ ಆಸ್ಪತ್ರೆಯೇ ಗತಿ: ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳು ಹಾಗೂ ಗೋಪಿನಾಥಂ ಸುತ್ತಮುತ್ತ ಗ್ರಾಮಗಳ ಜನರು ಬಹುತೇಕ ಅರಣ್ಯದ ಮಧ್ಯಭಾಗದಲ್ಲಿ ವಾಸಿಸುವುದರಿಂದ ಪ್ರತಿನಿತ್ಯ ಏನಾದರೊಂದು ಅವಘಡ ಸಂಭವಿಸುತ್ತಲೇ ಇರುತ್ತದೆ. ಆಗ ಮಹದೇಶ್ವರ ಬೆಟ್ಟದ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ತಮಿಳುನಾಡಿನ ಮೆಟ್ಟೂರಿನ ಸರ್ಕಾರಿ ಆಸ್ಪತ್ರೆ ಅಥವಾ ಕೊಳತ್ತೂರಿನ ಖಾಸಗಿ ಆಸ್ಪತ್ರೆಯೇ ಇಲ್ಲಿನ ಜನರಿಗೆ ಆಧಾರ. ವನ್ಯಪ್ರಾಣಿಗಳಿಂದ ದಾಳಿ, ಹಾವು ಕಡಿತ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ  ತಮಿಳುನಾಡಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲೇ ರೋಗಿಗಳು ಮೃತಪಟ್ಟಿರುವ ಪ್ರಕರಣಗಳು ನಡೆದಿವೆ. 

ಹಾವು ಕಡಿತಕ್ಕೊಳಗಾದ ವ್ಯಕ್ತಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣ ಸಂಖ್ಯೆಗೇನೂ ಕಮ್ಮಿಯಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಾರೆ. ಆದರೆ ಇಂದಿಗೂ ಹಾವು ಕಡಿತಕ್ಕೊಳಗಾದವರು ಆಶ್ರಯಿಸುತ್ತಿರುವುದು ಹೋಲಿಕ್ರಾಸ್ ಆಸ್ಪತ್ರೆಯನ್ನೇ.

ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ: ತಾಲ್ಲೂಕಿನಲ್ಲಿ ಆಂಬುಲೆನ್ಸ್‌ಗಳ ಕೊರೆತೂ ಕಾಡುತ್ತಿದೆ.  ಪ್ರಾರಂಭದಲ್ಲಿ ಹನೂರು, ರಾಮಾಪುರ ಅಥವಾ ಕೌದಳ್ಳಿ ಹಾಗೂ ಮಹದೇಶ್ವರ ಬೆಟ್ಟದಲ್ಲಿ ಆಂಬುಲೆನ್ಸ್‌ ಸೇವೆ ಕಲ್ಪಿಸಲಾಗಿತ್ತು. ಸುಳ್ವಾಡಿ ವಿಷಪ್ರಸಾದ ದುರಂತ ನಡೆದ ಬಳಿಕ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಸಂಸದರ ನಿಧಿಯಿಂದ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್‌ಗಳನ್ನು ಒದಗಿಸಲಾಗಿತ್ತು. 

8ರಿಂದ 10ರಷ್ಟಿದ್ದ ಆಂಬುಲೆನ್ಸ್‌ಗಳ ಸಂಖ್ಯೆ ಮೂರಕ್ಕೆ ಬಂದು ನಿಂತಿದೆ. ಇರುವ ಆಂಬುಲೆನ್ಸ್‌ಗಳಲ್ಲೂ ಆಮ್ಲಜನಕ ಸಿಲಿಂಡರ್‌ಗಳಿಲ್ಲ. ಮೂರು ತಿಂಗಳ ಹಿಂದೆ ಮಹದೇಶ್ವರ ಬೆಟ್ಟದಲ್ಲಿ ಆಮ್ಲಜನಕ ಸಹಿತ ಆಂಬುಲೆನ್ಸ್ ಸಿಗದೆ ಮಹಿಳೆಯೊಬ್ಬರು ಮೃತಪಟ್ಟಿದ್ದರು.

ಕೆಲವೆಡೆ ಚಿಕಿತ್ಸೆ ಕೊರತೆ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಕಾಶ್‌, ‘ಪೊನ್ನಾಚಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಿಟ್ಟು, ಉಳಿದೆಲ್ಲ ಕೇಂದ್ರಗಳಲ್ಲಿ ವೈದ್ಯರಿದ್ದಾರೆ. ಕೆಲವು ಕಡೆ ಚಿಕಿತ್ಸೆ ಕೊರತೆಯಾಗಿರುವುದು ಗಮನಕ್ಕೆ ಬಂದಿದೆ. ಆಂಬುಲೆನ್ಸ್‌ಗಳಲ್ಲಿ ಆಮ್ಲಜನಕದ ವ್ಯವಸ್ಥೆ ಇದೆ. ಆಂಬುಲೆನ್ಸ್‌ ನಿರ್ವಾಹಕರು ಆಮ್ಲಜನಕ ತುಂಬಿಸಿಕೊಳ್ಳಬೇಕು’ ಎಂದರು.

ಮೇಲ್ದರ್ಜೆಗೇರದ ಆಸ್ಪತ್ರೆ

ಹನೂರು ತಾಲ್ಲೂಕು ಕೇಂದ್ರವಾಗಿ ಐದು ವರ್ಷಗಳಾದರೂ ಪಟ್ಟಣದಲ್ಲಿ ಈಗಲೂ ಪ್ರಾಥಮಿಕ ಆರೋಗ್ಯ ಕೇಂದ್ರವಷ್ಟೇ ಇದೆ. ಇದರಿಂದಾಗಿ ಜನರು ಚಿಕಿತ್ಸೆಗಾಗಿ ಕೊಳ್ಳೇಗಾಲ ಅಥವಾ ಮೈಸೂರಿಗೆ ತೆರಳಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶಾಲವಾದ ಸ್ಥಳವಿದ್ದರೂ ಆಸ್ಪತ್ರೆ ಮೇಲ್ದರ್ಜೆಗೇರಿಲ್ಲ. ಆಸ್ಪತ್ರೆಯನ್ನು ಉನ್ನತೀಕರಿಸಬೇಕು ಎಂಬ ಕೂಗು ಐದು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಆರೋಗ್ಯ ಇಲಾಖೆ ಮಟ್ಟದಲ್ಲಿ ಇದಿನ್ನೂ ಪ್ರಸ್ತಾವದ ಹಂತದಲ್ಲಷ್ಟೇ ಇದೆ. 

ಸಚಿವರ ಭೇಟಿ: ಜನರಲ್ಲಿ ನಿರೀಕ್ಷೆ ಈ ಮಧ್ಯೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಗುರುವಾರ ತಾಲ್ಲೂಕಿಗೆ ಭೇಟಿ ನೀಡಲಿದ್ದಾರೆ.  ತಾಲ್ಲೂಕಿನ ಕುರಟ್ಟಿ ಹೊಸೂರು ಶೆಟ್ಟಳ್ಳಿ ಹಾಗೂ ಭದ್ರಯ್ಯನಹಳ್ಳಿ ಗ್ರಾಮಕ್ಕೆ ಭೇಟಿ ನೀಡಲಿರುವ ಅವರು ಚರ್ಮಕ್ಕೆ ಸಂಬಂಧಿಸಿದ ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವವ ಆರೋಗ್ಯ ವಿಚಾರಿಸಲಿದ್ದಾರೆ.  ಮೊದಲ ಬಾರಿಗೆ ಆರೋಗ್ಯ ಸಚಿವರು ತಾಲ್ಲೂಕಿಗೆ ಭೇಟಿ ನೀಡುತ್ತಿರುವುದರಿಂದ ತಾಲ್ಲೂಕಿನಲ್ಲಿರುವ ಆರೋಗ್ಯ ಸೇವೆ ಸಮಸ್ಯೆಗಳು ಅವರ ಗಮನಕ್ಕೆ ಬರಬಹುದು. ಏನಾದರೂ ಕ್ರಮ ಕೈಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT