ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video Story ನೋಡಿ: ಚಾಮರಾಜನಗರ: ಸಾವಿರಾರು ಎಕರೆ ಭೂಮಿ ಜಲಾವೃತ

ಅವಳಿ ಜಲಾಶಯಗಳಾದ ಚಿಕ್ಕಹೊಳೆ, ಸುವರ್ಣಾವತಿಯಿಂದ 14,200 ಕ್ಯುಸೆಕ್ ನೀರು ಬಿಡುಗಡೆ
Last Updated 5 ಸೆಪ್ಟೆಂಬರ್ 2022, 14:47 IST
ಅಕ್ಷರ ಗಾತ್ರ

ಚಾಮರಾಜನಗರ: ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ.

ತಾಲ್ಲೂಕಿನ ಅವಳಿ ಜಲಾಶಯಗಳಾದ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಿಂದ 14,200 ಕ್ಯುಸೆಕ್ ಗಳಷ್ಟು ನೀರು ಹೊರ ಬಿಡಲಾಗಗುತ್ತಿದ್ದು, ಸುವರ್ಣಾವತಿ ನದಿ ಅಚ್ಚುಕಟ್ಟು ಪ್ರದೇಶ ಮುಳುಗಡೆಯಾಗಿದೆ.

ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.

ತಾಲ್ಲೂಕಿನಲ್ಲಿ ಚಂದಕವಾಡಿ ಹೋಬಳಿಯ ಕೋಡಿಮೋಳೆ ಕೆರೆ ಎರಡು ಕಡೆಗಳಲ್ಲಿ ಕೋಡಿ ಬಿದ್ದಿದೆ. ಒಂದು ‌ಕಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. 30ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಕೆರೆಯ ಮತ್ತೊಂದು ಕಡೆ ಕೋಡಿ ಬಿದ್ದು ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ತಾಲ್ಲೂಕಿನ ಹರದನಹಳ್ಳಿಯ ಮರಗದಕೆರೆಗೆ ಭಾರಿ ಪ್ರಮಾಣದಲ್ಲಿ ‌ನೀರು‌ಹರಿದು ಬಂದಿದ್ದು, ಅಲ್ಲಿಂದ ಚಿಕ್ಕಕೆರೆ, ದೊಡ್ಡಕೆರೆಗಳಿಗೆ ನೀರು ಹರಿಯುತ್ತಿದೆ. ಚಿಕ್ಕಕೆರೆಯ ಏರಿ ಮೇಲೆ ನೀರು ಹರಿಯಲು ಆರಂಭಿಸಿದ್ದು, ಒಡೆಯುವ ಆತಂಕ ಎದುರಾಗಿದೆ. ಕಾವೇರಿ ನೀರಾವರಿ‌ನಿಗಮವು ಏರಿ‌ಮೇಲೆ ಮಣ್ಣು ಹಾಕುವ ಕೆಲಸ ಮಾಡುತ್ತಿದೆ.

ದೊಡ್ಡಕೆರೆ ಹಾಗೂ ಚಿಕ್ಕಕೆರೆಗಳಿಂದ ಕೋಡಿಮೋಳೆ ಕೆರೆಗೆ ನೀರು‌ ಹರಿಯುತ್ತಿದೆ.

ಚಂದಕವಾಡಿ ಹೋಬಳಿಯಲ್ಲಿ ಹೊನ್ನುಹೊಳೆ, ಸುವರ್ಣಾವತಿ ನಾಲೆಗಳು, ಕೆರೆಗಳ ನಾಲೆಗಳು ಅಪಾಯದ ಮಟ್ಟ‌ಮೀರಿ‌ ಹರಿಯುತ್ತಿವೆ. ಜ್ಯೋತಿಗೌಡನಪುರ, ಹೆಬ್ಬಸೂರು, ನಲ್ಲೂರು, ಚಂದಕವಾಡಿ ವ್ಯಾಪ್ತಿಯಲ್ಲಿ ಅಡಿಕೆ, ತೆಂಗು, ಬಾಳೆ, ಅರಿಸಿನ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಜಲಾವೃತವಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

'ಜಲಾಶಯದ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಭಾರಿ ಮಳೆಯಾಗಿದೆ. ಒಳಹರಿವಿನ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾತ್ರಿ 3ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ 18 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿತ್ತು. ಆ ಬಳಿಕ ಒಳಹರಿವು ಕಡಿಮೆಯಾಗಿದೆ. ಒಟ್ಟು 14,200 ಕ್ಯುಸೆಕ್ ಬಿಡಲಾಗುತ್ತಿದೆ' ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ 'ಪ್ರಜಾವಾಣಿ'ಗೆ ತಿಳಿಸಿದರು.

ಸುವರ್ಣಾವತಿ‌ ನದಿಯು ಯಳಂದೂರು‌ ತಾಲ್ಲೂಕಿನಲ್ಲೂ‌ ಹರಿಯುತ್ತಿದ್ದು, ಅಲ್ಲಿಯ ಹಲವು ಗ್ರಾಮಗಳಲ್ಲಿ ನೆರೆ ಸ್ಥಿತಿ‌ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT