ಭಾನುವಾರ, ಮೇ 16, 2021
26 °C
ಕೋವಿಡ್‌, ಇತರೆ ಆರೋಗ್ಯ ಸಮಸ್ಯೆಗಳಿಗೆ ಕರೆ ಮಾಡಿದರೆ ವೈದ್ಯರ ತಂಡದಿಂದ ಸಲಹೆ

ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್‌ನಿಂದ ಆರೋಗ್ಯ ಹಸ್ತ ಸಹಾಯವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಸೋಂಕಿತರಿಗೆ ಹಾಗೂ ಕೋವಿಡ್‌ಯೇತರ ಆರೋಗ್ಯ ಸಮಸ್ಯೆಗಳಿಗೆ ಸಲಹೆ ಸೂಚನೆಗಳನ್ನು ನೀಡಲು ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಆರೋಗ್ಯ ಹಸ್ತ ಸಹಾಯವಾಣಿಯನ್ನು ಆರಂಭಿಸಿದೆ. 

ಕರೆ ಮಾಡಿದ ರೋಗಿಗಳಿಗೆ ವೈದ್ಯಕೀಯ ಸಲಹೆ ಹಾಗೂ ಕೌನ್ಸೆಲಿಂಗ್‌ ನೀಡುವುದಕ್ಕಾಗಿ ಅಲೋಪಥಿ, ಆಯುರ್ವೇದ ವೈದ್ಯರನ್ನೊಳಗೊಂಡ ನಾಲ್ವರು ತಜ್ಞರನ್ನು ನೇಮಕ ಮಾಡಿದ್ದು, ಅವರಿಗೆ (9620492777, 9448326011, 88613338802 ಮತ್ತು 9481817176) ಕರೆ ಮಾಡಿ ವೈದ್ಯಕೀಯ ಚಿಕಿತ್ಸೆ ಮಾರ್ಗದರ್ಶನವನ್ನು ಪಡೆಯಬಹುದು. 

ಇವರೊಂದಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ತಂಡವೊಂದು ಕೂಡ ಆರೋಗ್ಯ ಹಸ್ತ ಸಹಾಯವಾಣಿಯ ಭಾಗವಾಗಿ ಕೆಲಸ ಮಾಡಲಿದೆ. 

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಸಹಾಯವಾಣಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಹರಿಹಾಯ್ದ ಅವರು, ‘ಕೋವಿಡ್‌ 2ನೇ ಆಲೆಯನ್ನು ಪರಿಣಾಮಕಾರಿಯಾಗಿ ತಡೆಯುವಲ್ಲಿ ಎರಡೂ ಸರ್ಕಾರಗಳು ವಿಫಲವಾಗಿದ್ದು, ಅವುಗಳ ದ್ವಂದ್ವ ನಿಲುವು ಮತ್ತು ತಜ್ಞರ ಸಲಹೆಗಳನ್ನು ಪಾಲಿಸದ ಕಾರಣದಿಂದಾಗಿ ಸೋಂಕು ಹೆಚ್ಚಾಗಿ ಸಾವು ನೋವು ಉಂಟಾಗಿದೆ’ ಎಂದು ದೂರಿದರು.

‘2ನೇ ಅಲೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಜ್ಞರ ಸಮಿತಿ ವರದಿ ನೀಡಿದ್ದರೂ, ಸರ್ಕಾರ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಮೈಮರೆತ ಕಾರಣಕ್ಕೆ ಈಗಿನ ಪರಿಸ್ಥಿತಿ ಉದ್ಭವವಾಗಿದೆ’ ಎಂದರು. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2ನೇ ಆಲೆ ಬರುವ ಮುನ್ನವೇ ದೇಶದ ಎಲ್ಲರಿಗೂ ಲಸಿಕೆ ದೊರೆಯುವಂತೆ ಮಾಡಲು ಖಾಸಗಿ ಸಹಭಾಗಿತ್ವ  ಪಡೆದುಕೊಳ್ಳುವಂತೆ ಸಲಹೆ ನೀಡಿದ್ದರು. ಇಂದು ದೇಶದ ಎಲ್ಲರಿಗೂ ಲಸಿಕೆ ಹಾಕಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ದೇಶದ ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಇತರೆ ದೇಶಗಳಿಗೆ ರಪ್ತು ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನೆ ಮಾಡಿದ ಅವರು, ಮೇ 1ರಿಂದ 18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಹೇಳಿದ್ದರು. ಆದರೆ, ಈಗ ಲಸಿಕೆ ಲಭ್ಯವಿಲ್ಲ. ನಂತರ ತಿಳಿಸುತ್ತೇವೆ ಎಂದು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಧ್ರುವನಾರಾಯಣ ಅವರು ದೂರಿದರು. 

‘ಇಂತಹ ಸಂಕಷ್ಟದ ಸಮಯದಲ್ಲಿ ಕೈಕಟ್ಟಿ ಕೂರಬಾರದೆಂಬ ಉದ್ದೇಶದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಟಾಸ್ಕ್‌ಪೋರ್ಸ್ ಸಮಿತಿ ರಚನೆ ಮಾಡಿದ್ದು,  ಜಿಲ್ಲಾವಾರು ಸಮಿತಿಗಳ ಮೂಲಕ ಆರೋಗ್ಯ ಹಸ್ತ ಸಹಾಯವಾಣಿ ಆರಂಭಿಸಲಾಗಿದೆ. ತಜ್ಞ ವೈದ್ಯರು ಸೋಂಕಿತರಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸಹ ಚಿಕಿತ್ಸೆಗಾಗಿ ವ್ಯವಸ್ಥೆಯನ್ನು ಕಲ್ಪಿಸಲಿದ್ದಾರೆ’ ಅವರು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಎ.ಎಸ್. ಗುರುಸ್ವಾಮಿ, ಕೆಪಿಸಿಸಿ ಸದಸ್ಯ ಸೈಯದ್‌ರಫಿ. ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಸೀದ್, ಜಿ.ಪಂ. ಸದಸ್ಯ ಕೆರೆಹಳ್ಳಿ ನವೀನ್, ಪತ್ರಿಕಾ ಕಾರ್ಯದರ್ಶಿ ಅರುಣ್, ದೇವರಾಜು, ಸಿ.ಕೆ. ರವಿಕುಮಾರ್, ಶಿವಮೂರ್ತಿ, ಎಎಚ್‌ಎನ್‌ಖಾನ್ ಮೊದಲಾಧವರು ಇದ್ದರು.

ಜಿಲ್ಲಾಡಳಿತ, ಉಸ್ತುವಾರಿ ಸಚಿವರು ವಿಫಲ
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಸಾವಿನ ಪ್ರಮಾಣವೂ ಜಾಸ್ತಿಯಾಗುತ್ತಿದೆ. ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಸರಿಯಾದ ರೀತಿಯಲ್ಲಿ ಸೋಂಕಿತರನ್ನು ಗುರುತಿಸಲು ವಿಫಲರಾಗಿರುವುದು ಕಾರಣ. ಕಳೆದ ಬಾರಿ ತೆಗೆದುಕೊಂಡ ಮುನ್ನಚ್ಚರಿಕೆ ಕ್ರಮಗಳನ್ನು ಈ ಬಾರಿ ಪಾಲನೆ ಮಾಡಿಲ್ಲ. ಹಳ್ಳಿಗಳಲ್ಲಿ ಹೆಚ್ಚು ಸೋಂಕಿತರಿದ್ದು ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇದನ್ನು ಮನಗಂಡು ಪಕ್ಷದಿಂದ ಆರೋಗ್ಯ ಹಸ್ತ ಸಹಾಯವಾಣಿ ಆರಂಭಿಸಲಾಗಿದೆ. ತಜ್ಞ ವೈದ್ಯರ ತಂಡ ನಮ್ಮೊಂದಿಗೆ ಇರುತ್ತದೆ. ವೈದ್ಯರು ಸೋಂಕಿತರಿಗೆ, ಇತರ ರೋಗಿಗಳಿಗೆ, ಖಿನ್ನತೆಯಿಂದ ಬಳಲುತ್ತಿರುವವರಿಗೆ ಮಾರ್ಗದರ್ಶನ ನೀಡಲಿದ್ದಾರೆ’ ಎಂದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು