ಶನಿವಾರ, ಸೆಪ್ಟೆಂಬರ್ 18, 2021
30 °C
ಶಿಕ್ಷಕರಿಂದ ಆತ್ಮೀಯ ಸ್ವಾಗತ, ಮೊದಲ ದಿನ ಶೇ 51.11 ಹಾಜರಿ

ಚಾಮರಾಜನಗರ: ಶಾಲೆಗಳಲ್ಲಿ ಮಕ್ಕಳ ಕಲರವ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಜ್ಯದಾದ್ಯಂತ ಸೋಮವಾರ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ನೇ ತರಗತಿಯಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಜಿಲ್ಲೆಯಲ್ಲೂ ವಿದ್ಯಾರ್ಥಿಗಳು ಸಂಭ್ರಮದಿಂದ ತರಗತಿಗಳಿಗೆ ಹಾಜರಾದರು.   

ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಮಕ್ಕಳನ್ನು ಹೂ, ಸಿಹಿ, ಪುಸ್ತಕಗಳನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಕೆಲವು ಶಾಲೆಗಳಲ್ಲಿ ಶಿಕ್ಷಕರು ಆರತಿ ಬೆಳಗಿ ಮಕ್ಕಳನ್ನು ಬರಮಾಡಿಕೊಂಡರು. ಶಾಲೆಗಳನ್ನು ತಳಿರು ತೋರಣ, ರಂಗೋಲಿ ಹಾಕಿ ಶೃಂಗರಿಸಲಾಗಿತ್ತು.  

ಸಮವಸ್ತ್ರಗಳನ್ನು ಧರಿಸಿದ್ದ ಮಕ್ಕಳು ಶಿಸ್ತು ಬದ್ಧವಾಗಿ ಕೋವಿಡ್‌ ನಿಯಮಗಳನ್ನು ಪಾಲಿಸುತ್ತಾ ತರಗತಿಗೆ ಹಾಜರಾಗಿ  ಆಫ್‌ಲೈನ್‌ ಪಾಠಕ್ಕೆ ಕಣ್ಣು, ಕಿವಿಯಾದರು. ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆದವು. 

ಉತ್ತಮ ಸ್ಪಂದನೆ: ಮೊದಲ ದಿನ ಮಕ್ಕಳ ಸ್ಪಂದನೆ ಉತ್ತಮವಾಗಿತ್ತು. ದೊಡ್ಡ ಸಂಖ್ಯೆಯಲ್ಲೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಶೇ 51.11ರಷ್ಟು ವಿದ್ಯಾರ್ಥಿಗಳು ಕೋವಿಡ್‌ ಆತಂಕದ ನಡುವೆಯೇ ಸೋಮವಾರ ಭೌತಿಕವಾಗಿ ಪಾಠ ಕೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ‌ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯಲ್ಲಿ 6ರಿಂದ 8ನೇ ತರಗತಿವರೆಗೆ 19,462 ಮಂದಿ ಬಾಲಕರು, 18,380 ಬಾಲಕಿಯರು ಸೇರಿ 37,842 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ, ಸೋಮವಾರ 9,470 ಹುಡುಗರು, 9,870 ವಿದ್ಯಾರ್ಥಿನಿಯರು ಸೇರಿದಂತೆ 19,340 ಮಕ್ಕಳು ಶಾಲೆಗಳಿಗೆ ಬಂದಿದ್ದಾರೆ. 

ಚಾಮರಾಜನಗರ ತಾಲ್ಲೂಕಿನಲ್ಲಿ 13,439 ಮಕ್ಕಳ ಪೈಕಿ 6,356 (ಶೇ 47.3) ಮಕ್ಕಳು ಹಾಜರಾಗಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 7,926 ಮಕ್ಕಳಿದ್ದು ಇವರಲ್ಲಿ 3,745 (ಶೇ 47.25) ವಿದ್ಯಾರ್ಥಿಗಳು ತರಗತಿಗಳಿಗೆ ಬಂದಿದ್ದಾರೆ. ಹನೂರು ತಾಲ್ಲೂಕಿನಲ್ಲಿ ಈ ಮೂರು ತರಗತಿಗಳಲ್ಲಿರುವ 7,680 ವಿದ್ಯಾರ್ಥಿಗಳಲ್ಲಿ 4,761 (ಶೇ 61.99) ಮಕ್ಕಳು ಹಾಜರಾಗಿದ್ದಾರೆ. ಕೊಳ್ಳೇಗಾಲದಲ್ಲಿ  6,776 ಮಕ್ಕಳಿದ್ದು, ಈ ಪೈಕಿ 3,241 ಮಂದಿ (ಶೇ 47.83), ಯಳಂದೂರು ತಾಲ್ಲೂಕಿನಲ್ಲಿ 2,021 ವಿದ್ಯಾರ್ಥಿಗಳಲ್ಲಿ 1,237 (ಶೇ 61.21) ಮಕ್ಕಳು ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ನ್ಯಾಯಾಧೀಶರಿಂದ ಪರಿಶೀಲನೆ: ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ನ್ಯಾಯಾಧೀಶರು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳಲ್ಲಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳನ್ನು ಮಾತನಾಡಿಸಿ, ಅವರ ಅಭಿಪ್ರಾಯಗಳನ್ನು ಕೇಳಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ, ಡಿಡಿಪಿಐ ಹಾಗೂ ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್‌ ನಿಯಮ ಪಾಲನೆ

ಶಾಲೆಗಳಲ್ಲಿ ಕೋವಿಡ್‌ ನಿಯಮ ಪಾಲನೆಗೆ ಒತ್ತು ನೀಡಲಾಗಿತ್ತು. ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.  ಶಾಲೆ ಪ್ರವೇಶಿಸುವುದಕ್ಕೂ ಮುನ್ನ ಎಲ್ಲ ಮಕ್ಕಳಿಗೂ ಸ್ಯಾನಿಟೈಸ್‌ ನೀಡಲಾಯಿತು. ಭೌತಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ತರಗತಿಗಳಲ್ಲೂ ಒಂದು ಡೆಸ್ಕ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಯಿತು. 

‘ಮೊದಲ ದಿನ ಶೇ 51ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಮಕ್ಕಳ ಸ್ಪಂದನೆ ಉತ್ತಮವಾಗಿದೆ. ಮಂಗಳವಾರದಿಂದ ಹಾಜರಾತಿ ಇನ್ನಷ್ಟು ಹೆಚ್ಚಾಗಲಿದೆ. ಶಾಲೆಗಳ ಸ್ಯಾನಿಟೈಸ್‌, ಮಕ್ಕಳಿಗೆ ಸ್ಯಾನಿಟೈಸರ್‌ ನೀಡುವುದು ಸೇರಿದಂತೆ ಕೋವಿಡ್‌ ನಿಯಮಗಳನ್ನು ಪಾಲಿಸಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗಳ ಉಪನಿರ್ದೇಶಕ (ಡಿಡಿಪಿಐ) ಪಿ.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು