ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ತಹಶೀಲ್ದಾರ್‌ ನೇತೃತ್ವದಲ್ಲಿ ಸಭೆ, ಹೊನ್ನೂರು ದಂಡ ಪ್ರಕರಣ ಸುಖಾಂತ್ಯ

ಹೊನ್ನೂರು: ಗ್ರಾಮಸ್ಥನಿಗೆ ₹52 ಸಾವಿರ ದಂಡ ಹಾಕಿದ ಆರೋಪ
Last Updated 19 ಅಕ್ಟೋಬರ್ 2020, 19:39 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿಗ್ರಾಮದೇವತೆಯ ಉತ್ಸವ ಮೂರ್ತಿಯ ಮೆರವಣಿಗೆ ಪರಿಶಿಷ್ಟ ಜಾತಿಯವರ ಬೀದಿಗಳಿಗೂ ಬರಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಕ್ಕೆ, ಗ್ರಾಮದ ಯಜಮಾನರು ತಮಗೆ ₹52,101 ದಂಡ ವಿಧಿಸಿದ್ದಾರೆ ಎಂದು ನಿಂಗರಾಜು ಎಂಬುವವರು ಆರೋಪಿಸಿದ್ದ ಪ್ರಕರಣ ಇತ್ಯರ್ಥವಾಗಿದೆ.

ತಹಶೀಲ್ದಾರ್‌ ಸುದರ್ಶನ್‌ ಅವರು ಸೋಮವಾರ ಗ್ರಾಮದ ಯಜಮಾನರು, ಮುಖಂಡರು ಹಾಗೂ ದೂರುದಾರರ ಜೊತೆ ಸಮಾಲೋಚನೆ ನಡೆಸಿದರು.

ಸುದರ್ಶನ್‌ ಅವರು ಮಾತನಾಡಿ, ‘ಇಂತಹ ಪ್ರಕರಣಗಳು ನಡೆಯಬಾರದು. ಒಂದು ವೇಳೆ ದಂಡ ವಿಧಿಸಿದ್ದೇ ಆದರೆ ಆ ದುಡ್ಡನ್ನು ವಾ‍ಪ‍ಸ್‌ ನೀಡಬೇಕು’ ಎಂದು ಹೇಳಿದರು.

ಗ್ರಾಮದ ಯಜಮಾನ ನಿರಂಜನ್‌ ಅವರು ಮಾತನಾಡಿ, ‘ಹತ್ತು ಮುಖಂಡರು ಯಾರಿಗೂ ದಂಡ ವಿಧಿಸಿಲ್ಲ. ಹಾಗಾಗಿ, ಸಮಸ್ಯೆ ಉದ್ಭವಿಸಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಅವರು, ‘ಪೊಲೀಸರಿಗೆ ದೂರು ನೀಡಿ. ಅವರು ತನಿಖೆ ನಡೆಸಲಿ’ ಎಂದು ನಿಂಗರಾಜು ಅವರಿಗೆ ತಿಳಿಸಿದರು.

ದೂರು ನೀಡುವುದಕ್ಕಾಗಿ ನಿಂಗರಾಜು ಠಾಣೆಗೆ ಹೋದರು.ಪೊಲೀಸರು ಅಲ್ಲಿಗೆ ಯಜಮಾನರನ್ನೂ ಕರೆಸಿ ಪರಸ್ಪರ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡ ನಂತರ ದೂರು ನೀಡಿ ಎಂದು ಸಲಹೆ ನೀಡಿದರು.

ಯಜಮಾನರು, ಮುಖಂಡರು, ನಿಂಗರಾಜು ಹಾಗೂ ಇತರರು ಪರಸ್ಪರ ಮಾತನಾಡಿಕೊಂಡು ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ತೀರ್ಮಾನಿಸಿದರು.

‘ಹೊನ್ನೂರು ಪ್ರಕರಣಕ್ಕೆಸಂಬಂಧಿಸಿದಂತೆ ದೂರು ದಾಖಲಾಗಿಲ್ಲ. ಗ್ರಾಮಸ್ಥರು ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ’ ಎಂದು ಸಬ್ ಇನ್‌ಸ್ಪೆಕ್ಟರ್‌ ಲೋಕೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್‌ ಎಂ.ಎಲ್.ಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ಭಾಗೀರಥಿ, ಜಯಕಾಂತ್, ಎಲ್ಲ ಕೋಮಿನ ಮುಖಂಡರು ಮತ್ತು ಯಜಮಾನರು ಸಭೆಯಲ್ಲಿ ಇದ್ದರು.

ಏನಿದು ಘಟನೆ?

ಹೊನ್ನೂರು ಗ್ರಾಮದಲ್ಲಿರುವ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನದಲ್ಲಿ ಪ್ರತಿ ವರ್ಷ ನವರಾತ್ರಿ ಆಚರಿಸಲಾಗುತ್ತದೆ. ವಿಜಯದಶಮಿ ದಿನ ಚಾಮುಂಡೇಶ್ವರಿ, ವೀರಭದ್ರೇಶ್ವರ, ಮಂಟೇಸ್ವಾಮಿ, ಬಸವೇಶ್ವರ, ದೊಡ್ಡತಾಯಮ್ಮ ಹಾಗೂ ಚಿಕ್ಕತಾಯಮ್ಮ ಅವರ ಉತ್ಸವ ಮೂರ್ತಿಗಳನ್ನು ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಪ್ರತಿ ವರ್ಷ ಮೆರವಣಿಗೆಯು ಪರಿಶಿಷ್ಟ ಜಾತಿಯವರ ಬೀದಿಗೆ ಹೋಗುವುದಿಲ್ಲ. ಈ ವರ್ಷ ತಮ್ಮ ಬೀದಿಗಳಲ್ಲೂ ಮೆರವಣಿಗೆ ಮಾಡಬೇಕು ಎಂದು ನಿಂಗರಾಜು ಹಾಗೂ ಇತರರು ತಹಶೀಲ್ದಾರ್‌ಗೆ ಮನವಿ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಊರಿನ ಯಜಮಾನರು ನಿಂಗರಾಜು ಅವರಿಗೆ ₹52,101 ಹಾಗೂ ಅವರ ಬೆಂಬಲಕ್ಕೆ ನಿಂತ ಶಂಕರಮೂರ್ತಿ ಎಂಬುವವರಿಗೆ ₹10,101 ದಂಡ ವಿಧಿಸಿದ್ದಾರೆ ಎಂಬುದು ಆರೋಪ.

ಭಿನ್ನ ಹೇಳಿಕೆ: ಪ್ರಕರಣಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯು ಗ್ರಾಮದ ಯಜಮಾನ ನಿರಂಜನ್‌ ಹಾಗೂ ದೂರುದಾರ ನಿಂಗರಾಜು ಅವರೊಂದಿಗೆ ಮಾತನಾಡಿದಾಗ ಇಬ್ಬರೂ ಭಿನ್ನ ಹೇಳಿಕೆ ನೀಡಿದ್ದಾರೆ.

‘ಗ್ರಾಮದಲ್ಲಿ ನಾವು 13 ಕೋಮಿನವರು ಒಗ್ಗಟ್ಟಿನಿಂದ ಇದ್ದೇವೆ. ನಾವು ನಿಂಗರಾಜು ಅವರಿಗೆ ದಂಡ ವಿಧಿಸಿಲ್ಲ. ಪರಿಶಿಷ್ಟ ಜಾತಿಯವರ ಬೀದಿಗೆ ಉತ್ಸವಮೂರ್ತಿ ಮೆರವಣಿಗೆ ಬರಬೇಕು ಎಂದು ತಹಶೀಲ್ದಾರ್‌ ಅವರಿಗೆ ನಿಂಗರಾಜು ಮನವಿ ಮಾಡಿದ್ದರು. ತಕ್ಷಣ ತಹಶೀಲ್ದಾರ್‌ ಹಾಗೂ ಪೊಲೀಸರು ಗ್ರಾಮಕ್ಕೆ ಬಂದು ವಿಚಾರಿಸಿದ್ದರು. ಆ ಸಂದರ್ಭದಲ್ಲಿ ನಿಂಗರಾಜು ಇರಲಿಲ್ಲ. ಸಂಪ್ರದಾಯದಂತೆ ಈ ವರ್ಷವೂ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿ. ಪರಿಶಿಷ್ಟ ಜಾತಿಯರ ಬೀದಿಗೆ ಮೆರವಣಿಗೆ ಬರುವುದು ಬೇಡ ಎಂದು ಆ ಸಮುದಾಯದವರೇ ತಹಶೀಲ್ದಾರ್‌ ಅವರಿಗೆ ತಿಳಿಸಿದ್ದರು. ತಡವಾಗಿ ಬಂದ ನಿಂಗರಾಜು ಅವರ ಬಳಿ, ‘ಯಾಕೆ ಈ ರೀತಿ ಮನವಿ ಮಾಡಿದೆ’ ಎಂದು ನಾವು ವಿಚಾರಿಸಿದ್ದೆವು. ಅಷ್ಟಕ್ಕೇ ಈ ರೀತಿ ಆರೋಪ ಮಾಡಿದ್ದಾರೆ’ ಎಂದು ನಿರಂಜನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೋಮವಾರ ತಹಶೀಲ್ದಾರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಕರಣ ಇತ್ಯರ್ಥವಾಗಿದೆ. ತನ್ನ ಹೇಳಿಕೆಯನ್ನು ವಾಪಸ್‌ ಪಡೆಯುವುದಾಗಿ ನಿಂಗರಾಜು ಹೇಳಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಿಂಗರಾಜು ಅವರು, ‘ಈ ಪ್ರಕರಣ ಬಗೆಹರಿದಿದೆ. ದಂಡ ವಿಧಿಸಿರುವುದನ್ನು ಯಜಮಾನರು ಸಭೆಯಲ್ಲಿ ಒಪ್ಪಿಕೊಂಡರು. ಪೊಲೀಸರೊಂದಿಗೆ ನಡೆದ ಮಾತುಕತೆಯಲ್ಲಿ ದುಡ್ಡು ವಾಪಸ್‌ ನೀಡಲೂ ಸಮ್ಮತಿಸಿದ್ದಾರೆ. ನಾನು ಪಾವತಿಸಿದ ಮೊತ್ತವನ್ನು ವಾಪಸ್‌ ಕೊಟ್ಟಿದ್ದಾರೆ. ಶಂಕರಮೂರ್ತಿಯವರಿಗೆ ಕೊಡಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT