ಹನೂರು(ಚಾಮರಾಜನಗರ ಜಿಲ್ಲೆ): 'ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಂಚಕರು ಹಣ ಪಡೆದು ಸಾಮಾಜಿಕ ಭದ್ರತಾ ಯೋಜನೆಗಳ ನಕಲಿ ಮಂಜೂರಾತಿ ಆದೇಶ ಪತ್ರ ನೀಡಿದ್ದಾರೆ' ಎಂದು ಆರೋಪಿಸಿ ಸಂತ್ರಸ್ತರು ಬುಧವಾರ ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರಿಗೆ ದೂರು ಸಲ್ಲಿಸಿದರು.
ಅಜ್ಜೀಪುರ, ಕಾಂಚಳ್ಳಿ, ಬಸಪ್ಪನದೊಡ್ಡಿ, ಕೆ.ಗುಂಡಾಪುರ, ಗಂಗನದೊಡ್ಡಿ ಸೇರಿದಂತೆ ಹಲವು ಗ್ರಾಮಗಳ ಜನ ವಂಚನೆ ಜಾಲಕ್ಕೆ ಬಲಿಯಾಗಿದ್ದಾರೆ. ಮೂರು ವರ್ಷಗಳಿಂದ ಹಣ ಬಾರದ ಹಿನ್ನೆಲೆಯಲ್ಲಿ ನಾಗರಿಕರು ಆದೇಶ ಪ್ರತಿಗಳನ್ನು ಅಧಿಕಾರಿಗಳಿಗೆ ನೀಡಿದರು. ಅವುಗಳನ್ನು ಪರಿಶೀಲಿಸಿದ ನಂತರ ನಕಲಿ ಎಂಬುದು ಸಾಬೀತಾಗಿದೆ.
ವಂಚನೆಗೊಳಗಾದ ಸಂತ್ರಸ್ತರು ರೈತ ಸಂಘದ ಮುಖಂಡರ ಜೊತೆಗೂಡಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.
2022ರಲ್ಲಿ ಅಂಬಿಕಾಪುರದ ತೋಟದ ಮನೆಯಲ್ಲಿ ಕಚೇರಿ ತೆರೆದಿದ್ದ ಅಪರಿಚಿತರು ವೃದ್ದಾಪ್ಯ ವೇತನ, ಪಿಂಚಣಿ ಸೌಲಭ್ಯ ಕೊಡಿಸುವುದಾಗಿ ಪ್ರತಿಯೊಬ್ಬರ ಬಳಿ ₹ 6 ಸಾವಿರದಿಂದ 8 ಸಾವಿರ ವಸೂಲಿ ಮಾಡಿದ್ದರು. ಬಳಿಕ ನಕಲಿ ಮಂಜೂರಾತಿ ಪತ್ರಗಳನ್ನು ವಿತರಿಸಿದ್ದರು. ನಾಲ್ಕೈದು ಗ್ರಾಮಗಳ ಸುಮಾರು 200 ಮಂದಿಗೆ ವಂಚನೆ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಮಧ್ಯವರ್ತಿಗಳಿಂದ ಮೋಸ: ‘ಜನಸಾಮಾನ್ಯರು ಸರ್ಕಾರಿ ಕಚೇರಿಗಳಲ್ಲಿ ದೊರೆಯುವ ಸರ್ಕಾರದ ಸೌಲಭ್ಯವನ್ನು ಮಧ್ಯವರ್ತಿಗಳಿಂದ ಪಡೆಯದೆ ನೇರವಾಗಿ ಕಚೇರಿಗಳಿಗೆ ತೆರಳಿ ಪಡೆಯಬೇಕು. ವಂಚನೆ ಸಂಬಂಧ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.