ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಕಟ್ಟಡ ತೆರವಿಗೆ ಮನವಿ

ಬಂಡೀಪುರದ ಸೂಕ್ಷ್ಮ ವಲಯದಲ್ಲಿ ಮುಂದುವರಿದ ಕಾಮಗಾರಿ; ಜಿಲ್ಲಾಧಿಕಾರಿಗೆ ಪತ್ರ
Last Updated 22 ಮೇ 2020, 16:13 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ಬರುವ ಸೂಕ್ಷ್ಮ ಪರಿಸರ ವಲಯದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳನ್ನು ನೆಲಸಮ‌ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ಬಂಡೀಪುರ ಸೂಕ್ಷ್ಮ ವಲಯದಲ್ಲಿ ಅನಧಿಕೃತ ರೆಸಾರ್ಟ್‌/ಹೋಂ ಸ್ಟೇ ಚಟುವಟಿಕೆಗಳಿಗೆ ಅನುಮತಿ ನೀಡಬಾರದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೂ ಪತ್ರ ಬರೆದಿದ್ದಾರೆ. ಇಂತಹ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬಾರದು ಎಂದು ಸೆಸ್ಕ್‌ ಕಾರ್ಯನಿರ್ವಾಹಕ ಅಧಿಕಾರಿಗೂ ಪತ್ರ ಬರೆದು ಕೇಳಿಕೊಂಡಿದ್ದಾರೆ.

ಇದೇ 19ರಂದು ಅವರು ಪತ್ರ ಬರೆದಿದ್ದು,ಮಂಗಲ ಗ್ರಾಮದ ಸರ್ವೆ ನಂ. 56, 269, 7/3, 47/2, 55, ಎಲಚೆಟ್ಟಿ ಗ್ರಾಮದ ಸರ್ವೆ ನಂ.64, ಚಿಕ್ಕ ಎಲಚೆಟ್ಟಿ ಗ್ರಾಮದ ಸರ್ವೆ ನಂ. 517, ಹಂಗಳ ಹೊಸಹಳ್ಳಿ ಗ್ರಾಮದ ಸರ್ವೆ ನಂ. 81, 91, 92, ಮೇಲುಕಾಮನಹಳ್ಳಿ ಗ್ರಾಮದ ಸರ್ವೆ ನಂ. 93, ಮಗುವಿನಹಳ್ಳಿ ಗ್ರಾಮದ ಸರ್ವೆ ನಂ. 53/p1 ಕಟ್ಟಡ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ಈ ಚಟುವಟಿಕೆಗಳನ್ನು ನಡೆಸುತ್ತಿರುವ 15 ಮಂದಿಯ ವಿವರಗಳನ್ನೂ ನಮೂದಿಸಿದ್ದಾರೆ.

ವನ್ಯ ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ಅನುಕೂಲ ಆಗುವಂತೆ ಹಾಗೂ ಮಾನವ ಪ್ರಾಣಿ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶವನ್ನು ಕೇಂದ್ರ ಸರ್ಕಾರ 2012ರಲ್ಲಿ ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಸುತ್ತಮುತ್ತಲಿನ 123 ಗ್ರಾಮಗಳು ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಗೆ ಬರುತ್ತವೆ. ಈ ಪ್ರದೇಶದಲ್ಲಿ ವಸತಿ ಉದ್ದೇಶಕ್ಕೆ ಬಿಟ್ಟು ಯಾವುದೇ ವಾಣಿಜ್ಯ ಉದ್ದೇಶಿತ ಚಟುವಟಿಕೆಗಳನ್ನು ನಡೆಸಲು ಅವಕಾಶ ಇಲ್ಲ. ಹಾಗಿದ್ದರೂ ಕೆಲವರು ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ಷ್ಮ ಪರಿಸರ ವಲಯದ ಅಧಿಸೂಚನೆ ಉಲ್ಲಂಘನೆ ಮಾಡಿ ವಾಣಿಜ್ಯ ಉದ್ದೇಶಕ್ಕಾಗಿ ಬೃಹತ್ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಬಾಲಚಂದ್ರ ಅವರು ಪತ್ರದಲ್ಲಿ ಹೇಳಿದ್ದಾರೆ.

‘ಸೂಕ್ಷ್ಮ ಪರಿಸರ ವಲಯದ ಕಮಿಟಿಯ ಪೂರ್ವಾನುಮತಿ ಇಲ್ಲದೆ ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡುವುದು, ವಾಣಿಜ್ಯ ಚಟುವಟಿಕೆಗಳನ್ನು ನಡೆಸುವುದು ಕಾನೂನು ಉಲ್ಲಂಘನೆ. ಇಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದೂ ಕಾನೂನು ಉಲ್ಲಂಘನೆ ಆಗುತ್ತದೆ. ಸೂಕ್ಷ್ಮ ಪರಿಸರ ವಲಯದಲ್ಲಿ ಬರುವ ಅಕ್ರಮ ರೆಸಾರ್ಟ್, ಹೋಂ ಸ್ಟೇ, ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದರೆ ತಕ್ಷಣವೇ ಕಡಿತಗೊಳಿಸಬೇಕು. ಅರಣ್ಯ ಇಲಾಖೆಯ ಅನುಮತಿ ಇದ್ದರೆ ಮಾತ್ರ ಸಂಪರ್ಕ ನೀಡಬೇಕು’ ಎಂದು ಸೆಸ್ಕ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ‌.

2012ರ ನಂತರ ಸೂಕ್ಷ್ಮ ಪರಿಸರ ವಲಯದಲ್ಲಿ ಹೋಂ ಸ್ಟೇ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಿದ್ದರೆ ಅದನ್ನು ರದ್ದು ಮಾಡಬೇಕು ಹಾಗೂ ಉಲ್ಲೇಖಿಸಿರುವ ಸರ್ವೆ ನಂಬರ್‌ಗಳಲ್ಲಿ ಅವಕಾಶ ನೀಡಬಾರದು’ ಎಂದು ಪ್ರವಾಸೋದ್ಯಮ ಇಲಾಖೆಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡುತ್ತಿರುವ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಾಮಗಾರಿ ಸ್ಥಗಿತಗೊಳಿಸಲು ಹಾಗೂ ಅರಣ್ಯ ಇಲಾಖೆಗೆ ದಾಖಲೆಯನ್ನು ಸಲ್ಲಿಸಲು ತಿಳಿಸಿದ್ದರೂ ಉಲ್ಲಂಘನೆ ಮಾಡಿ ಕಟ್ಟಡ ಕಾಮಗಾರಿ ಮುಂದುವರೆಸುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಾಲಚಂದ್ರ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಅಕ್ರಮ ಕಟ್ಟಡ: ತಹಶೀಲ್ದಾರ್ ವರದಿ
ಈ ಮಧ್ಯೆ, ಬಂಡೀಪುರ ವ್ಯಾಪ್ತಿಯ ಮಂಗಲ, ಯಲಚೆಟ್ಟಿ ಹಾಗೂ ವಿವಿಧ ಗ್ರಾಮಗಳಲ್ಲಿ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ಗುಂಡ್ಲುಪೇಟೆ ತಾಲ್ಲೂಕು ತಹಶೀಲ್ದಾರ್‌ ನಂಜುಂಡಯ್ಯ ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ವರದಿ ನೀಡಿದ್ದಾರೆ.

ಅನಧಿಕೃತ ಕಟ್ಟಡಗಳು ನಿರ್ಮಾಣದ ಆರೋಪದ ಬಗ್ಗೆ ವರದಿ ನೀಡುವಂತೆಏಪ್ರಿಲ್‌ 24ರಂದು ಜಿಲ್ಲಾಧಿಕಾರಿಯು ತಹಶೀಲ್ದಾರ್‌ಗೆ ಸೂಚಿಸಿದ್ದರು. ಇದರ ಅಡಿಯಲ್ಲಿ ಹಂಗಳ ಹೋಬಳಿಯ ರಾಜಸ್ವ ನಿರೀಕ್ಷಕರು ನೀಡಿರುವ ವರದಿ ಆಧಾರದ ಮೇಲೆ, ಮಂಗಲ, ಯಲಚೆಟ್ಟಿ, ಲೊಕ್ಕೆರೆ, ಬಾಚಹಳ್ಳಿ ಮತ್ತು ಕಬ್ಬೇಪುರಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಇರುವ ಕಟ್ಟಡಗಳ ಬಗ್ಗೆ ವರದಿ ನೀಡಿದ್ದಾರೆ.

ಕೆಲವು ಕಟ್ಟಡಗಳನ್ನು ವಾಸದ ಉದ್ದೇಶಕ್ಕೆ ಬಳಸಲಾಗುತ್ತಿದೆ. ಇನ್ನೂ ಕೆಲವು ಕಟ್ಟಡಗಳಿಗೆ ಪ್ರವಾಸೋದ್ಯಮ ಇಲಾಖೆ ಹೋಂ ಸ್ಟೇ ನಡೆಸಲು ಅನುಮತಿ ನೀಡಿದೆ. ಎರಡು ಕಡೆಗಳಲ್ಲಿ ಮಾತ್ರ ಅನುಮತಿ ಇಲ್ಲದೇ ಹೋಂ ಸ್ಟೇ ನಡೆಸಲಾಗುತ್ತಿದೆ ಎಂದು ತಹಶೀಲ್ದಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT